Advertisement

ಮೊಬೈಲ್‌ ಟವರ್‌ ಇಲ್ಲದ ಮುಟ್ಲುಪಾಡಿ ಗ್ರಾಮ

11:05 PM Jan 16, 2021 | Team Udayavani |

ಅಜೆಕಾರು:  ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊಬೈಲ್‌ ನೆಟ್‌ವರ್ಕ್‌ ಅತ್ಯ ಗತ್ಯ. ಆದರೆ ವರಂಗ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮುಟ್ಲುಪಾಡಿ ಗ್ರಾಮದಲ್ಲಿ ಮೊಬೈಲ್‌ ಟವರ್‌ ಇಲ್ಲ.

Advertisement

ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್‌ ಇಂಡಿಯಾದ ಅಡಿಯಲ್ಲಿ ಹಲವು ಯೋಜನೆ ಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಈ ಯೋಜನೆ ಮುಟ್ಲುಪಾಡಿಯಂತ ಗ್ರಾಮಕ್ಕೆ ತಲುಪುವಲ್ಲಿ ಸಮಸ್ಯೆಯಾಗುತ್ತಿದೆ. ಗ್ರಾಮದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸೇರಿದಂತೆ ಯಾವುದೇ ಖಾಸಗಿ ಟೆಲಿಕಾಂ ಕಂಪೆನಿಗಳು ಮೊಬೈಲ್‌ ಟವರ್‌ ನಿರ್ಮಿಸಿಲ್ಲ. ಇದರಿಂದ ಜನರು ಸೌಕರ್ಯದಿಂದ ವಂಚಿತರಾಗಿದ್ದಾರೆ.

ಆನ್‌ಲೈನ್‌ ಬ್ಯಾಕಿಂಗ್‌, ಆನ್‌ಲೈನ್‌ ಶಿಕ್ಷಣ, ವರ್ಕ್‌ಫ್ರಂ ಹೋಮ್‌, ಅಲ್ಲದೆ ವರಂಗ ಗ್ರಾಮ ಪಂಚಾಯತ್‌ ಕುಡಿಯುವ ನೀರು ಸೇರಿದಂತೆ ಇತರ ಹಲವಾರು ಕಾರ್ಯಕ್ರಮಗಳಿಗೆ ಆ್ಯಪ್‌ ವ್ಯವಸ್ಥೆ ಜಾರಿಗೆ ಬಂದಿದ್ದು ಮುಟ್ಲುಪಾಡಿ ಜನತೆ ಇವುಗಳು ಇಲ್ಲವಾಗಿದೆ.  ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು ಸುಮಾರು 1100 ಜನಸಂಖ್ಯೆ ಇದೆ. ಇಲ್ಲಿ ಸುಮಾರು 25 ಸ್ಥಿರ ದೂರವಾಣಿ ಇದ್ದರೂ ಅವುಗಳು ಸಮರ್ಪಕ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಪ್ರಯೋಜನಕ್ಕಿಲ್ಲವಾಗಿದೆ.

ಬೆಟ್ಟ ಏರಿ ಶಿಕ್ಷಣ :

ಕೋವಿಡ್ ಸಂದರ್ಭ ಸರಕಾರ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಪ್ರಾರಂಭ ಮಾಡಿದಾಗ ಮುಟ್ಲುಪಾಡಿ ಭಾಗದ ವಿದ್ಯಾರ್ಥಿಗಳು ತೀರಾ ಸಂಕಷ್ಟಕ್ಕೆ ಈಡಾಗಿದ್ದರು. ಗ್ರಾಮದಿಂದ ಸುಮಾರು 5 ಕಿ.ಮೀ ದೂರದ ಬೋರ್ಗಲ್‌ ಕುಂಜ ಎಂಬ ಬೆಟ್ಟ ಏರಿ ನೆರ್ಟ್‌ವರ್ಕ್‌ ಪಡೆದು ಆನ್‌ಲೈನ್‌ ಶಿಕ್ಷಣ ಪಡೆಯುವಂತಾಗಿತ್ತು. ದಟ್ಟಾರಣ್ಯದ ಬೆಟ್ಟದ ಮೇಲೆಯೇ ಒಂದು ಟೆಂಟ್‌ ನಿರ್ಮಾಣ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಕೂರುತ್ತಿದ್ದರು.

Advertisement

ಮನವಿಗೆ ಸ್ಪಂದನೆ ಇಲ್ಲ :

ಗ್ರಾಮದಲ್ಲಿ ಮೊಬೈಲ್‌ ಟವರ್‌ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಸರಕಾರಕ್ಕೆ, ಇಲಾಖೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸೂಕ್ತ ರೀತಿಯ ಸ್ಪಂದನೆ ದೊರಕಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಟ್‌ರೀಚೆಬಲ್‌ ಗ್ರಾಮ :

ಮುಟ್ಲುಪಾಡಿ ನಾಗರಿಕರಿಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ನಾಟ್‌ರೀಚೆಬಲ್‌ ಆಗಿರುತ್ತದೆ. ಗ್ರಾಮಸ್ಥರು ಸುಮಾರು 5 ಕಿಮೀ ದೂರದ ಮುನಿಯಾಲು ಪೇಟೆಗೆ ಬಂದರೆ  ಕರೆಗೆ ಸ್ಪಂದಿಸಲು ಸಾಧ್ಯ. ನಕ್ಸಲ್‌ ಬಾಧಿತ ಗ್ರಾಮವಾಗಿರುವ ಮುಟ್ಲುಪಾಡಿಯಲ್ಲಿ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಯಾವುದೇ ಘಟನೆ ನಡೆದರೂ ತತ್‌ಕ್ಷಣ ಸ್ಪಂದಿಸುವುದು ಕಷ್ಟವಾಗಿದೆ.

ಜಿಲ್ಲಾಧಿಕಾರಿ ಭೇಟಿಗೆ ಆಗ್ರಹ :

ಗ್ರಾಮದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಯವರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರ ಸಮಸ್ಯೆ ಆಲಿಸಬೇಕು. ಮುಂದಿನ 10 ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಸಮಸ್ಯೆ ಆಲಿಸದಿದ್ದಲ್ಲಿ  ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

ಆನ್‌ಲೈನ್‌ ಶಿಕ್ಷಣ ಕಷ್ಟ :

ಗ್ರಾಮದಲ್ಲಿ ನೆಟ್‌ವರ್ಕ್‌ ಸಮಸ್ಯೆ ಇರುವುದರಿಂದ ಆನ್‌ಲೈನ್‌ ಶಿಕ್ಷಣಕ್ಕೆ ಸಂಕಷ್ಟ ಪಡುವಂತಾಗಿದೆ. ನೆಟ್‌ವರ್ಕ್‌ಗಾಗಿ ಗ್ರಾಮದ ಸಮೀಪ ಇರುವ ಅರಣ್ಯದೊಳಗಿನ ಅಪಾಯಕಾರಿ ಬೆಟ್ಟಕ್ಕೆ ಪ್ರತಿನಿತ್ಯ ತೆರಳಬೇಕಾಗಿದೆ. ಕಾಡುಪ್ರಾಣಿಗಳ ಭಯ ಇರುವುದರಿಂದ ವಿದ್ಯಾರ್ಥಿ ಗಳು ಬೆಟ್ಟದ ಮೇಲೆ ಹೋಗುವಾಗ ಮನೆಯ ಹಿರಿಯರನ್ನು ಕರೆದುಕೊಂಡು ಹೋಗಬೇಕಾಗಿದೆ.  ದೀಕ್ಷಾ ಶೆಟ್ಟಿ, ವಿದ್ಯಾರ್ಥಿನಿ 

ಮನವಿಗೆ ಸ್ಪಂದನೆ ಇಲ್ಲ :

ಮುಟ್ಲುಪಾಡಿಯಲ್ಲಿ ಮೊಬೈಲ್‌ ಟವರ್‌ ನಿರ್ಮಾಣ ಮಾಡಿ ನೆಟ್‌ವರ್ಕ್‌ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಇಲ್ಲ. ನೆಟ್‌ವರ್ಕ್‌ ಇಲ್ಲದೆ ತುರ್ತು ಸಂದರ್ಭ ಹಾಗೂ ಆನ್‌ಲೈನ್‌ ಶಿಕ್ಷಣ, ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಟವರ್‌ ನಿರ್ಮಾಣ ಕಾರ್ಯವಾಗ ಬೇಕಿದೆ. ರಘುನಾಥ್‌,  ಗ್ರಾಮ ಪಂಚಾಯತ್‌ ಸದಸ್ಯ  ಮುಟ್ಲುಪಾಡಿ

ಶಾಸಕರು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿದ್ದು ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ತ್ವರಿತವಾಗಿ ಮೊಬೈಲ್‌ ಟವರ್‌ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು.-ಜ್ಯೋತಿ ಹರೀಶ್‌, ಜಿಲ್ಲಾ ಪಂಚಾಯತ್‌ ಸದಸ್ಯೆ

 

ಜಗದೀಶ್‌ ಅಂಡಾರು

 

Advertisement

Udayavani is now on Telegram. Click here to join our channel and stay updated with the latest news.

Next