ಹಾಸನ: ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಹಾಸನಾಂಬಾ ದೇವಿಯ ಪವಾಡ ಬಯಲು ಮಾಡಬೇಕೆಂದು
ಪಟ್ಟು ಹಿಡಿದಿರುವುದರಿಂದ ಪರಸ್ಪರ ಚರ್ಚೆ, ಪ್ರತಿಭಟನೆಗಳು ನಿಗದಿಯಾಗಿರುವ ಸಂದರ್ಭದಲ್ಲಿಯೇ ದೇವಾಲಯದ
ಹಿರಿಯ ಅರ್ಚಕರೊಬ್ಬರು “ದೇವಾಲಯದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಪವಾಡ ನಡೆಯುತ್ತದೆ ಎಂದು
ಯಾರೂ ಹೇಳಿಲ್ಲ’ ಎಂದು ಹೇಳುವ ಮೂಲಕ ಚರ್ಚೆಗೆ ಹೊಸ ತಿರುವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಅರ್ಚಕ ನಾಗರಾಜ್, ಕೆಲವರು ಹಾಸನಾಂಬೆ ದೇವಾಲಯದಲ್ಲಿ ಪವಾಡ ನಡೆಯುತ್ತಿದೆ ಎನ್ನುತ್ತಿದ್ದಾರೆ.
ಕೆಲವರು ಯಾವ ಪವಾಡವೂ ನಡೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ದೇವಾಲಯದ ಪೂಜೆ ಮಾಡುವ ನಾವ್ಯಾರೂ ದೇವಾಲಯದಲ್ಲಿ ಪವಾಡ ನಡೆಯುತ್ತದೆ ಎಂದು ಎಲ್ಲೂ, ಯಾವಾಗಲೂ ಹೇಳಿಲ್ಲ. ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚುವಾಗ ದೇವರಿಗೆ ಯಾವುದೇ ನೈವೇದ್ಯ ಇಟ್ಟಿರುವುದಿಲ್ಲ. ಆದರೆ ದೇವಾಲಯದ ಬಾಗಿಲು ತೆರೆದ ದಿನ ದೇವಿಯ ಶಾಂತಿಗಾಗಿ ಕಡಲೆಬೇಳೆ, ಹೆಸರು ಬೇಳೆ ನೈವೇದ್ಯ ಮಾಡುತ್ತೇವೆ, ಅದನ್ನು ನಾವೂ ತಿನ್ನುತ್ತೇವೆ. ಭಕ್ತರಿಗೂ ವಿತರಿಸುತ್ತೇವೆ ಇಟ್ಟ ನೈವೇದ್ಯ ಹಳಸಲ್ಲ ಎಂಬುದು ಕಲ್ಪನೆ ಅಷ್ಟೆ ಎಂದರು.