ಬೆಂಗಳೂರು: ಈ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಂ.ಪಿ.ಪ್ರಕಾಶ್, ಜೀವರಾಜ್ ಆಳ್ವ ಅವರ ಜೊತೆ ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದರು. ಕಲಾವಿದರ ಮಾತುಗಳಿಗೆ ಅವರು ಕೂಡ ಬೆಲೆ ಕೊಡುತ್ತಿದ್ದರು. ಆದರೆ ಈಗ ಕಲೆ ಹಾಗೂ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರು ಯಾವ ಸಚಿವರು ಇಲ್ಲ ಎಂದು ರಂಗಕರ್ಮಿ ಶ್ರೀನಿವಾಸ ಜಿ.ಕಪ್ಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಿದ್ದ ಸಾಧಕರೊಡನೆ ಸಂವಾದದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ವೇಳೆಯಿಂದ ಇಲ್ಲಿವರೆಗೂ ಎಲ್ಲ ಸಚಿವರು ಹಾಗೂ ಮುಖ್ಯಮಂತ್ರಿಗಳು ಪರಿಚಯವಿದ್ದಾರೆ. ಆದರೆ ನನ್ನ ರಂಗ ಚಟುವಟಿಕೆಗೆ ಅವರಿಂದ ನಯಾ ಪೈಸೆ ಅನುದಾನ ಪಡೆದಿಲ್ಲ. ಅನುದಾನ ಪಡೆದಿರುವುದು ಸಾಬೀತುಪಡಿಸಿದರೆ ರಂಗಚಟುವಟಿಕೆಯಿಂದ ಹಿಂದೆ ಸರಿಯುತ್ತೇನೆ ಎಂದು ಹೇಳಿದರು.
“ವಿಜಯ ಶಾಲೆಯಲ್ಲಿ ಓದುತ್ತಿದ್ದಾಗ ವೇಷ ಭೂಷಣಕ್ಕೆ ಹಣವಿಲ್ಲದಿದ್ದರಿಂದ ಮೈತುಂಬಾ ಸೀಮೆ ಸುಣ್ಣದ ಬಣ್ಣ ಬಳಿದು ಕೊಂಡು ಪಾತ್ರಮಾಡಿದೆ. ಅದಕ್ಕೆ ಮೊದಲ ಬಹುಮಾನ ಬಂತು ಎಂದು ತಾವು ಬೆಳೆದು ಬಂದ ಹಾದಿ ಮೆಲುಕು ಹಾಕಿದರು. ಒಮ್ಮೆ ಸೀತಾರ್‌ವಾದಕ ರವಿ ಶಂಕರ್ ಅವರು ರವೀಂದ್ರ ಕಲಾ ಕ್ಷೇತ್ರದಲ್ಲಿ ಸಂಗೀತ ಕಚೇರಿ ಏರ್ಪಡಿಸಿದ್ದರು. ಇದಕ್ಕೆ ಬೆಳಕು ಸಂಯೋಜನೆ ನಾನೇ ಮಾಡಿದ್ದೆ.
ಈ ವೇಳೆ ಎಂ.ಎಸ್.ಸತ್ಯು ನನ್ನನ್ನು ಕರೆದು ಪತ್ನಿ ಜೊತೆ ವೇದಿಕೆಗೆ ಕರೆದು ಸನ್ಮಾನ ಮಾಡುತ್ತೇವೆ ಎಂದಿದ್ದರು. ಹೀಗಾಗಿ ನಾನು ಮನೆಗೆ ತೆರಳಿ ಸೂಟುಬೂಟು ಧರಿಸಿ ಪತ್ನಿ ಜೊತೆ ಕಲಾ ಕ್ಷೇತ್ರಕ್ಕೆ ತೆರಳಿ ಮುಂದಿನ ಸಾಲಿನಲ್ಲಿ ಕುಳಿತೆ. ನನ್ನ ದುರಾದೃಷ್ಟಕ್ಕೆ ಲೈಟ್‌ಗಳು ಕೈಕೊಟ್ಟವು. ಕೂಡಲೇ ಸತ್ಯು ಅವರು ಸರಿಪಡಿಸುವಂತೆ ನನಗೆ ಸೂಚಿಸಿದರು.
ಸೂಟುಬೂಟು ಬಿಚ್ಚಿ ಏಣಿ ಹತ್ತಿ ಲೈಟ್ ಸರಿ ಮಾಡಿದೆ. ನನ್ನ ಹೆಂಡತಿ ನನ್ನ ಗಂಡ ಎಲೆಕ್ಟ್ರಿಷಿಯನ್ ಎಂದು ತಿಳಿದು ಸಂಗೀತ ಕಚೇರಿ ಮುಗಿಯುವವರೆಗೂ ಬಗ್ಗಿಸಿದ ತಲೆ ಎತ್ತಲಿಲ್ಲ. ಅವಳನ್ನು ಸಮಾಧಾನಪಡಿಸಲು ಪಟ್ಟ ಪಾಡು ಅಷ್ಟಿಷ್ಟಲ್ಲ ಎಂದಾಗ ನೆರೆದವರನ್ನು ನಗೆಗಡಲ್ಲಿ ತೇಲಿಸಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ವ.ಚ.ಚನ್ನೇಗೌಡ, ಡಾ.ರಾಜಶೇಖರ ಹತಗುಂದಿ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ ಉಪಸ್ಥಿತರಿದ್ದರು.