Advertisement

ವಿದ್ಯಾರ್ಥಿಗಳಿಗಿಲ್ಲ ಕನಿಷ್ಠ ಸೌಲಭ್ಯ

03:51 PM Jun 27, 2018 | Team Udayavani |

ದೇವದುರ್ಗ: ಸಮಾಜ ಕಲ್ಯಾಣ ಇಲಾಖೆಯಡಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿರು 17 ವಸತಿ ನಿಲಯಗಳಲ್ಲಿ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.

Advertisement

ಸಮೀಪದ ಮಸರಕಲ್‌ ಗ್ರಾಮದಲ್ಲಿ ನಡೆಯುತ್ತಿರುವ ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯಕ್ಕೆ ಸ್ವಂತ ಕಟ್ಟಡವಿದ್ದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶೌಚಾಲಯ, ನೀರು, ಸ್ನಾನಗೃಹ, ಕೊಠಡಿ, ಹಾಸಿಗೆ ಸೌಲಭ್ಯಗಳಿಲ್ಲದ್ದರಿಂದ ವಿದ್ಯಾರ್ಥಿಗಳು ಪರದಾಡು ವಂತಾಗಿದೆ.

ವಸತಿ ನಿಲಯಗಳು ಆರಂಭವಾಗಿ ತಿಂಗಳು ಗತಿಸಿದೆ. ವಸತಿ ನಿಲಯದಲ್ಲಿ 6ರಿಂದ 10ನೇ ತರಗತಿವರೆಗೆ ಸುಮಾರು 110ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ಸೌಲಭ್ಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಬರಲು ಹಿಂದೇಟು ಹಾಕುವಂತಾಗಿದೆ. ಮೇಲ್ವಿಚಾರಕರು ಕೂಡ ವಸತಿ ನಿಲಯದಲ್ಲಿ ಸೌಲಭ್ಯ ಒದಗಿಸಲು ನಿರ್ಲಕ್ಷ್ಯ  ತಾಳಿದ್ದಾರೆ. ನೂರಾರು ವಿದ್ಯಾರ್ಥಿಗಳು ನಿತ್ಯ ಒಂದಿಲ್ಲೊಂದು ತೊಂದರೆ ಎದುರಿಸುತ್ತಿದ್ದಾರೆ. ಮೇಲ್ವಿಚಾರಕರು ನಿತ್ಯ ವಸತಿ ನಿಲಯಕ್ಕೆ ಆಗಮಿಸುತ್ತಿಲ್ಲ. ವಾರಕ್ಕೊಮ್ಮೆ ಬರುತ್ತಿದ್ದಾರೆ. 

ನಿರ್ವಹಣೆ ಕೊರತೆ: ನೂರಾರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗಣವಾಗಿ ಶೌಚಗೃಹ, ಸ್ನಾನಗೃಹಗಳಿಲ್ಲದ್ದರಿಂದ ಬಹುತೇಕ ವಿದ್ಯಾರ್ಥಿಗಳು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿದ್ದಾರೆ. ಶೌಚಾಲಯವಿದ್ದರೂ ಸಮರ್ಪಕ ನಿರ್ವಹಣೆ ಮತ್ತು ನೀರಿನ ಕೊರತೆಯಿಂದಾಗಿ ಇವುಗಳನ್ನು ಬಳಸಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.

ಬಯಲಲ್ಲೇ ಸ್ನಾನ: ಇನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ನಾನಗೃಹ ಇಲ್ಲದ್ದರಿಂದ ವಿದ್ಯಾರ್ಥಿಗಳು ಬಯಲಲ್ಲೇ ಸ್ನಾನ ಮಾಡುತ್ತಾರೆ. ನೀರು ಕಾಯಿಸಲು ಸೋಲಾರ್‌ ವ್ಯವಸ್ಥೆ ಇದ್ದರೂ ಅದು ಕೆಟ್ಟು ವರ್ಷಗಳೇ ಗತಿಸಿದೆ. ಇದನ್ನು ದುರಸ್ತಿಗೊಳಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಮಳೆ ಇರಲಿ, ಚಳಿ ಇರಲಿ ವಿದ್ಯಾರ್ಥಿಗಳು ತಣ್ಣೀರಲ್ಲೇ ಸ್ನಾನ ಮಾಡಬೇಕಿದೆ.

Advertisement

ಗ್ಯಾಸ್‌ ಇಲ್ಲ: ಇನ್ನು ವಸತಿ ನಿಲಯಕ್ಕೆ ಇದುವರೆಗೆ ಅಡುಗೆ ಅನಿಲ ಮತ್ತು ಒಲೆ ಪೂರೈಸಿದ್ದರಿಂದ ಅಡುಗೆಯನ್ನು ಕಟ್ಟಿಗೆ ಒಲೆ ಮೇಲೆ ಮಾಡಲಾಗುತ್ತಿದೆ. ಅಡುಗೆ ಸಿಬ್ಬಂದಿ ಹೊಗೆ ಸಮಸ್ಯೆ ಮಧ್ಯೆ ಅಡುಗೆ ಮಾಡುತ್ತಿದ್ದಾರೆ. ಪರಿಣಾಮ ಅಡುಗೆ ಕೋಣೆ ಕಪ್ಪಾಗಿದೆ. ಹೊಗೆ ಇದ್ದಾಗ ವಿದ್ಯಾರ್ಥಿಗಳು ಒಳಗಡೆ ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ನಿರ್ಮಾಣವಾಗಿದೆ. 

ಮೇಲ್ವಿಚಾರಕ ಇಲ್ಲ: ಈ ವಸತಿ ನಿಲಯದಲ್ಲಿ ಇದ್ದ ಕಾಯಂ ವಾರ್ಡನ್‌ ವರ್ಗಾವಣೆಗೊಂಡ ಬಳಿಕ ಪ್ರಭಾರಿ ವಾರ್ಡನ್‌ ಇದ್ದು ವಾರಕ್ಕೊಮ್ಮೆ ಭೇಟಿ ನೀಡುತ್ತಿರುವುದರಿಂದ ಸಮಸ್ಯೆಗಳು ಉದ್ಬವಿಸುತ್ತಿವೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಕಸದ ರಾಶಿ: ವಸತಿ ನಿಲಯದ ಒಳಗೆ ಮತ್ತು ಆವರಣದಲ್ಲಿ ಕಸದ ರಾಶಿ ತುಂಬಿದೆ. ವಸತಿ ನಿಲಯ ಸುತ್ತಮುತ್ತಲಿನ ಕಸ ವಿಲೇವಾರಿ ಮಾಡದ್ದರಿಂದ ಕೊಳಚೆ ಪ್ರದೇಶದಂತಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಿದೆ. ಓದು, ಬರಹಕ್ಕೆ ಪೂರಕ
ವಾತಾವರಣವಿಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ವಸತಿ ನಿಲಯದಲ್ಲಿನ ಸಮಸ್ಯೆಗಳನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಪರಿಹರಿಸಿ ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಬೇಕೆಂದು ಜೈ ಕರವೇ ಅಧ್ಯಕ್ಷ ಖಾದರ್‌ ಪಾಷಾ ಆಗ್ರಹಿಸಿದ್ದಾರೆ

ವಸತಿ ನಿಲಯದಲ್ಲಿ ಸಮಸ್ಯೆಗಳ ಕುರಿತು ಗಮನಕ್ಕೆ ಬಂದಿವೆ. ಹಂತ ಹಂತವಾಗಿ ಪರಿಹರಿಸಲು ಮೇಲ್ವಿಚಾರಕರಿಗೆ ಸೂಚನೆ ನೀಡಲಾಗಿದೆ. ಇಲ್ಲಿನ ಸಮಸ್ಯೆಗಳನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ. 

ಫಕ್ಕೀರಪ್ಪ, ಸಮಾಜ ಕಲ್ಯಾಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next