Advertisement

ಸಮಸ್ಯೆ ಹೇಳಲು ಜನಸಂಪರ್ಕ ಸಭೆಯೇ ಇಲ್ಲ !

11:45 PM Nov 17, 2019 | Sriram |

ವಿಶೇಷ ವರದಿ-ಮಹಾನಗರ: ನಗರ, ಗ್ರಾಮಾಂತರ ಭಾಗದ ಸರಕಾರಿ ಬಸ್‌ಗಳ ಕುರಿತಂತೆ ಎದುರಾಗುವ ಸಮಸ್ಯೆ, ಸವಾಲು, ಬೇಡಿಕೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಆರ್‌ಟಿಒನಲ್ಲಿರುವ ಸಮಸ್ಯೆಗೆ ಉತ್ತರ ಹುಡುಕಲು ವೇದಿಕೆಯಾಗಬೇಕಿದ್ದ ಸರಕಾರದ ಉದ್ದೇಶಿತ ಜನಸಂಪರ್ಕ ಸಭೆ ಸದ್ಯ ಕಡತದಲ್ಲಿಯೇ ಬಾಕಿ ಆಗುತ್ತಿದೆ !

Advertisement

ರಾಜ್ಯದ ಎಲ್ಲ ಕೆಎಸ್ಸಾರ್ಟಿಸಿ ವಿಭಾಗಗಳಲ್ಲಿ ಪ್ರತಿ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಬೇಕು ಎಂಬ ನಿಯಮ ನಿಗಮ ಮಟ್ಟದಲ್ಲಿದೆ. ಈ ಬಗ್ಗೆ ಈ ಹಿಂದೆಯೇ ಎಲ್ಲ ವಿಭಾಗಗಳಿಗೂ ನಿಗಮ ದಿಂದ ಸೂಚನೆ ನೀಡಲಾಗಿತ್ತು. ಆದರೆ ಕೆಲವೊಂದು ವಿಭಾಗಗಳಲ್ಲಿ ಈ ಆದೇಶ ಪೂರ್ಣಮಟ್ಟದಲ್ಲಿ ಪಾಲನೆಯಾಗುತ್ತಿಲ್ಲ.

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ ದಲ್ಲಿ ಮೂರು ವರ್ಷಗಳ ಹಿಂದೆ (2016-17ರಲ್ಲಿ) ಜನಸಂಪರ್ಕ ಸಭೆ ನಡೆದಿತ್ತು. ತಿಂಗಳಿಗೊಮ್ಮೆ ನಡೆಯುತ್ತಿದ್ದ ಈ ಸಭೆಯಲ್ಲಿ ಪ್ರಯಾಣಿಕರ ಅನೇಕ ಸಮಸ್ಯೆ ಗಳಿಗೆ ಪರಿಹಾರ ಸಿಗುತ್ತಿತ್ತು. ಮೊದಲ ಜನಸಂಪರ್ಕ ಸಭೆ ಅಂದಿನ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿಯಾಗಿದ್ದ ವಿವೇಕಾನಂದ ಹೆಗ್ಡೆ ನೇತೃತ್ವದಲ್ಲಿ 2016ರ ಅಕ್ಟೋಬರ್‌ ತಿಂಗಳಿನಲ್ಲಿ ನಡೆದಿತ್ತು. ಆದರೆ ತಿಂಗಳು ಕಳೆದಂತೆ ಸಭೆ ನಡೆಸಲು ಕೆಎಸ್ಸಾರ್ಟಿಸಿ ಹಿಂದೇಟು ಹಾಕಿದೆ. ಪರಿಣಾಮವಾಗಿ ಮಂಗಳೂರು ವಿಭಾಗದಲ್ಲಿ ಸಭೆ ನಡೆಯದೆ ಕೆಲವು ತಿಂಗಳುಗಳೇ ಕಳೆದಿವೆ.

ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಇತ್ತೀಚೆಗೆ ಜನಸಂಪರ್ಕ ಸಭೆ ನಡೆದಿತ್ತು. ಅದೇ ರೀತಿ ಪ್ರಯಾಣಿಕರ ಕುಂದು ಕೊರತೆಗಳನ್ನು ಈಡೇರಿಸುವ ಸಲುವಾಗಿ ಜಿಲ್ಲೆಯ ಮೂರು ವಿಭಾಗಗಳ ಅಧಿಕಾರಿಗಳನ್ನು ಕರೆದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಜನಸಂಪರ್ಕ ಸಭೆ ನಡೆಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್‌ ಈಗಾಗಲೇ ಪ್ರಕಟಿಸಿದ್ದಾರೆ.

ಆರ್‌ಟಿಒದಲ್ಲೂ ಇದೇ ಸಮಸ್ಯೆ !
ಆರ್‌ಟಿಒ ಕಚೇರಿಯಲ್ಲಿಯೂ ಜನಸಂಪರ್ಕ ಸಭೆ ನಡೆಯಬೇಕು ಎಂಬ ಸೂಚನೆ ಇದೆ. ಕೆಲವು ತಿಂಗಳವರೆಗೆ ಇದು ನಡೆಯಿತಾದರೂ ಮತ್ತೆ ಅಲ್ಲೂ ಸಭೆ ನಡೆಯಲಿಲ್ಲ. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಜಿ.ಕೆ. ಭಟ್‌ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “2 ವರ್ಷಗಳಿಂದ ಮಂಗಳೂರು ಕೆಎಸ್ಸಾ ರ್ಟಿಸಿ ವಿಭಾಗದಲ್ಲಿ ಜನಸಂಪರ್ಕ ಸಭೆ ನಡೆಯದ ಬಗ್ಗೆ ಈಗಾಗಲೇ ನಿಗಮಕ್ಕೆ ಮನವಿ ನೀಡಿದರೂ ಸ್ಪಂದಿಸಿಲ್ಲ. ಪ್ರಯಾಣಿಕರ ಸಮಸ್ಯೆಯನ್ನು ಹೇಳಲು ಯಾವುದೇ ವೇದಿಕೆ ಇಲ್ಲ. ಇನ್ನು, ನಿಯಮದ ಪ್ರಕಾರ ಪ್ರತೀ ವಾರ ಆರ್‌ಟಿಒ ಜನಸಂಪರ್ಕ ಸಭೆ ನಡೆಯಬೇಕೆಂದಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಸಭೆ ನಡೆದಿಲ್ಲ’ ಎಂದಿದ್ದಾರೆ.

Advertisement

ವರದಿ ತರಿಸಲಾಗುವುದು
ಸಾರ್ವಜನಿಕರ ಕುಂದುಕೊರತೆ, ಅಹವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಕೆಎಸ್ಸಾರ್ಟಿಸಿ ವಿಭಾಗಗಳಲ್ಲಿಯೂ ಪ್ರತೀ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಬೇಕು ಎಂದು ಈ ಹಿಂದೆಯೇ ಎಲ್ಲ ವಿಭಾಗಗಳಿಗೂ ನಿರ್ದೇಶನ ನೀಡಲಾಗಿದೆ. ಯಾವೆಲ್ಲಾ ವಿಭಾಗಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ ಎಂಬ ವರದಿ ತರಿಸಲಾಗುವುದು.
– ಶಿವಯೋಗಿ ಎಸ್‌. ಕಳಸದ್‌, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

ಮಾಹಿತಿ ಪಡೆದುಕೊಳ್ಳುತ್ತೇನೆ
ಪ್ರಯಾಣಿಕರ ಸಮಸ್ಯೆಗಳನ್ನು ಬಗೆಹರಿಸಲು ವೇದಿಕೆ ಯಾಗ ಬೇಕಿದ್ದ ಜನಸಂಪರ್ಕ ಸಭೆ ಯಾವ ಉದ್ದೇಶದಿಂದ ನಡೆಸಲಾಗುತ್ತಿಲ್ಲ ಎಂಬ ಬಗ್ಗೆ ಇಲಾಖೆಯ ಅಧಿಕಾರಿಗಳ ಬಳಿ ಮಾಹಿತಿ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.
 - ಸಿಂಧೂ ಬಿ.ರೂಪೇಶ್‌,ದ.ಕ. ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next