Advertisement

ಕೋಲಾರದಲ್ಲಿ ಲಾಕ್‌ಡೌನ್‌ ಇಲ್ಲ: ಜಿಲ್ಲಾಧಿಕಾರಿ

08:15 AM Jul 24, 2020 | Suhan S |

ಮಾಲೂರು: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್‌ ಇಲ್ಲ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸ್ಪಷ್ಟ ಪಡಿಸಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಆಡಳಿತ ಆರಂಭಿಸಿರುವ ಕೋವಿಡ್‌ 19 ಆಸ್ಪತ್ರೆಗಳ ಸ್ಥಿತಿಗತಿ ಪರಿಶೀಲಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಳೆದ ಒಂದು ವಾರ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳನ್ನು ಲಾಕ್‌ ಡೌನ್‌ ಮಾಡಿದ್ದ ರಾಜ್ಯ ಸರ್ಕಾರ, ಎಲ್ಲವನ್ನೂ ಲಾಕ್‌ಡೌನ್‌ ಮುಕ್ತ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಸ್ಥಳೀಯವಾಗಿ ಮಾಡಿಕೊಂಡಿರುವ ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿದ್ದು, ಸರ್ಕಾರದ ಆದೇಶದಂತೆ ಬೆಳಗ್ಗೆ 6ರಿಂದ ಸಂಜೆ 8ರವರೆಗೂ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡಬಹುದಾಗಿದೆ ಎಂದು ಹೇಳಿದರು.

ಸುರಕ್ಷಾ ಕ್ರಮ ಕಡ್ಡಾಯ: ಕೋವಿಡ್‌ 19 ನಿಯಮಗಳಂತೆ ಸಾಮಾಜಿಕ ಅಂತರ ಮತ್ತು ಸುರಕ್ಷಾ ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ. ಪ್ರಸ್ತುತ ಪರಿಸ್ಥಿತಿಯಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಎಲ್ಲರಿಗೂ ಅನುಕೂಲವಾಗುವ ಜೊತೆಗೆ ಅರ್ಥಿಕ ಸಂಕಷ್ಟವನ್ನು ಎದುರಿಸುವ ನಿಟ್ಟಿನಲ್ಲಿ ಸರ್ಕಾರ ಆದೇಶ ಹೊರಡಿಸಿದೆ ಎಂದು ವಿವರಿಸಿದರು.

ಕೋವಿಡ್ ಕೇರ್‌ ಸೆಂಟರ್‌: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುವ ಆಂತಕದಲ್ಲಿ ಒಂದೇ ದಿನ 100 ಪ್ರಕರಣಗಳು ಕಾಣಿಸಿಕೊಂಡ ಕಾರಣ, ಜಿಲ್ಲೆಯ ಎಲ್ಲಾ ತಾಲೂಕಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿಂದ ಬಳಲುವ ಸೋಂಕಿತರಿಗೆ ಪ್ರಾಥಮಿಕವಾಗಿ ಚಿಕಿತ್ಸೆ ನೀಡಲು ಕೊರೊನಾ ಕೇರ್‌ ಸೆಂಟರ್‌ಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೋವಿಡ್ ದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಈ ಹಿಂದೆ ಸಾರ್ವಜನಿಕ ವಲಯದಲ್ಲಿ ಕೋವಿಡ್ ಸೋಂಕಿನ ಬಗ್ಗೆ ಇದ್ದ ಕೀಳರಿಮೆ ದೂರವಾಗಿದೆ. ಪ್ರಸ್ತುತ ಮಾಲೂರು ಪಟ್ಟಣದಲ್ಲಿರುವ ಎರಡೂ ಎ ಸಿಮ್ವ ಮ್ಯಾಟಿಕ್‌ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ರೋಗಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ, ಅವರಲ್ಲಿ ಆತ್ಮ ಸ್ಥೈರ್ಯತುಂಬುವ ಕೆಲಸ ಮಾಡಿದ್ದೇನೆ. ಮುಂಜಾನೆಯ ಯೋಗ ಪ್ರಾಣಾಯಾಮ ಗಳ ಬಗ್ಗೆ ತಿಳಿಸಿದ್ದು, ಅಗತ್ಯವಾಗಿರುವ ಬೀಸಿ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

Advertisement

ಪ್ರಸ್ತುತ ಕೋಲಾರ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗುತ್ತಿದ್ದು, ಗುಣ ಮುಖದ ಸಂಖ್ಯೆ ಎಚ್ಚಾಗುತ್ತಿದೆ ಎಂದ ಡೀಸಿ, ಕೋಲಾರದ ಎಸ್‌ಎನ್‌ಆರ್‌ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್‌ ಚಿಕಿತ್ಸಾ ಕೇಂದ್ರವನ್ನಾಗಿಸಲಾಗಿದೆ. ಎಲ್ಲಾ ಅಗತ್ಯ ಸೌಲಭ್ಯ ಕೈಗೊಂಡಿರುವುದಾಗಿ ತಿಳಿಸಿದರು. ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದಿರುವಂತೆ ತಿಳಿಸಿದ ಅವರು, ಕೋಲಾರ ಜಿಲ್ಲಾಡಳಿತ ಕೋವಿಡ್‌ 19 ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧವಾಗಿದೆ ಎಂದು ವಿವರಿಸಿದರು.

ಈ ವೇಳೆ ತಹಶೀಲ್ದಾರ್‌ ಎಂ.ಮಂಜುನಾಥ್‌, ಎಸಿ ಸೋಮ ಶೇಖರ್‌, ಸಾರ್ವಜನಿಕ ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ವಸಂತಕುಮಾರ್‌, ತಾಲೂಕು ಅರೋಗ್ಯಾಧಿಕಾರಿ ಪ್ರಸನ್ನ, ಡಾ.ಶ್ರೀನಿವಾಸ್‌, ಡಾ.ವೆಂಕಟೇಶ್‌, ಪುರಸಭೆ ಮುಖ್ಯಾಧಿಕಾರಿ ಪ್ರಸಾದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next