Advertisement

ಗಾಂಧಿ ಗ್ರಾಮಕ್ಕಿಲ್ಲ ಗ್ರಂಥಾಲಯ

12:36 PM Nov 04, 2019 | Suhan S |

ಮುಧೋಳ: ಇಡೀ ಜಿಲ್ಲೆಯ ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಾಲೂಕಿನ ಮೆಳ್ಳಿಗೇರಿ ಗ್ರಾಮದಲ್ಲಿ ಗ್ರಂಥಾಲಯವಿಲ್ಲ. ಇದರಿಂದ ಗ್ರಾಮದ ವಿದ್ಯಾವಂತ ಬಡ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯ ಗ್ರಂಥ ಗಳಿಂದ ಹಿಡಿದು ಯಾವುದೇ ಪುಸ್ತಕಗಳು ಓದಿನಿಂದ ವಂಚಿತರಾಗುತ್ತಿದ್ದಾರೆ.

Advertisement

ಸುಮಾರು 6 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ಸೂಕ್ತ ಗ್ರಂಥಾಲಯವಿಲ್ಲದ ಕಾರಣ ಗ್ರಾಮದ ವಿದ್ಯಾವಂತ ಯುವಕರು ಹಾಗೂ ಸಾಹಿತ್ಯಾಸಕ್ತರು ಓದಿನಿಂದ ವಂಚಿತಗೊಳ್ಳುವಂತಾಗಿದೆ. ಸರ್ಕಾರದ ದಿವ್ಯ ನಿರ್ಲಕ್ಷ: ಅಧಿಕಾರದ ವಿಕೇಂದ್ರಿಕರಣ ಹಾಗೂ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ 2015ರಲ್ಲಿ ಹಲವು ಗ್ರಾಮ ಪಂಚಾಯತಿಗಳನ್ನು ಪುನರ್‌ವಿಂಗಡಣೆ ಮಾಡಿದ್ದು, ವೇಳೆ ಹಲಗಲಿ ಗ್ರಾಮದ ವ್ಯಾಪ್ತಿಯಲ್ಲಿದ್ದ ಮೆಳ್ಳಿಗೇರಿ ಗ್ರಾಮಕ್ಕೆ ಪ್ರತ್ಯೇಕ ಗ್ರಾಮ ಪಂಚಾಯತ ಘೋಷಣೆ ಮಾಡಲಾಗಿದೆ. ಆ ಬಳಿಕ ಗ್ರಾಮ ಪಂಚಾಯತ ಕಚೇರಿಗೆ ಅವಶ್ಯವಿರುವ ಸೌಲಭ್ಯ ಒದಗಿಸಿದ ಸರ್ಕಾರ ಗ್ರಂಥಾಲಯ ವಿಷಯದಲ್ಲಿ ಮಾತ್ರ ದಿವ್ಯ ನಿರ್ಲಕ್ಷ ವಹಿಸಿತು. ಇದರಿಂದ ಗ್ರಂಥಾಲಯದ ಕನಸು ಇದೂವರೆಗೂ ನನಸಾಗಿಲ್ಲ.

ಎರಡೇ ವರ್ಷಕ್ಕೆ ಗಾಂಧಿ ಗ್ರಾಮ ಪ್ರಶಸ್ತಿ: 2015ಕ್ಕೂ ಮುಂಚೆ ಪಕ್ಕದ ಹಲಗಲಿ ಗ್ರಾಮ ಪಂಚಾಯತನಲ್ಲಿದ್ದ ಈ ಗ್ರಾಮ, ಪ್ರತ್ಯೇಕ ಗ್ರಾಪಂ ರಚನೆಯಾದ ಎರಡೇ ವರ್ಷದಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಗೊಂಡಿದೆ. ಪ್ರತ್ಯೇಕ ಪಂಚಾಯತ್‌ ಆಗಿ ನಿರ್ಮಾಣಗೊಂಡ ಕಡಿಮೆ ಅವಧಿಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯ ಕಂಡ ಪಂಚಾಯತಿ ವ್ಯಾಪ್ತಿಯಲ್ಲಿ ಇದೂವರೆಗೂ ಗ್ರಂಥಾಲಯ ನಿರ್ಮಾಣವಾಗದಿರುವುದು ದುರ್ದೈವದ ಸಂಗತಿ.

ಗ್ರಾಮ ಅಭಿವೃದ್ಧಿಗೆ ಹೊಲ ಮಾರಿದ್ದ: ಈ ಹಿಂದೆ ಹಲಗಲಿ ಗ್ರಾ.ಪಂ. ವ್ಯಾಪ್ತಿಯಲ್ಲಿದ್ದ ಮೆಳ್ಳಿಗೇರಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಹಿಂದೆ ಹಲಗಲಿ ಗ್ರಾಪಂ ಅಧ್ಯಕ್ಷರಾಗಿದ್ದ ರಮೇಶ ಜೀರಗಾಳ ಏಳು ಎಕರೆ ಹೊಲವನ್ನೇ ಮಾರಿದ್ದರು. ಇಡೀ ಜಿಲ್ಲೆಯಲ್ಲೇ ಒಳ ಚರಂಡಿ ಹೊಂದಿದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಯೂ ಮೆಳ್ಳಿಗೇರಿದೆ. ಆದರೆ, ಇಂತಹ ಮಾದರಿ ಗ್ರಾಮದಲ್ಲೊಂದು ಗ್ರಂಥಾಲಯವಿಲ್ಲ ಎಂಬ ಕೊರಗನ್ನು ಸರ್ಕಾರ ಶೀಘ್ರ ಗ್ರಂಥಾಲಯ ನಿರ್ಮಾಣ ಮಾಡುವ ಮೂಲಕ ನೀಗಿಸಬೇಕಿದೆ.

ಗ್ರಾಮದಲ್ಲಿ ಗ್ರಂಥಾಲಯ ನಿರ್ಮಾಣವಾದರೆ ವಿದ್ಯಾವಂತ
ಯುವಕರಿಗೆ ಹಾಗೂ ಓದುಗರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸರ್ಕಾರ ಗ್ರಂಥಾಲಯ ನಿರ್ಮಾಣಕ್ಕೆ ಆದೇಶ
ಹೊರಡಿಸಿದರೆ ನಮ್ಮ ಕಡೆಯಿಂದ ಗ್ರಂಥಾಲಯಕ್ಕೆ ಬೇಕಾದ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತೇವೆ. -ಎ.ಎಸ್‌.ಜನಗೌಡ, ಗ್ರಾ.ಪಂ. ಪಿಡಿಒ

Advertisement

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next