ಶಿವಮೊಗ್ಗ: ಡಬ್ಬಲ್ ಇಂಜಿನ್ ಸರಕಾರವಿದ್ದರೂ ಏಕೆ ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಶರಾವತಿ ನದಿಗೆ ಆಣೆಕಟ್ಟೆ ಕಟ್ಟಿದ್ದರಿಂದ ಸಾವಿರಾರು ಜನ ಸಂತ್ರಸ್ತರಾಗಿದ್ದಾರೆ.130 ಹಳ್ಳಿಗಳು ಮುಳುಗಡೆಯಾಗಿದ್ದವು. ಸಂತ್ರಸ್ತರಿಗೆ ಅರಣ್ಯ ಪ್ರದೇಶದಲ್ಲಿ ವಸತಿ ಕಲ್ಪಿಸಲಾಗಿತ್ತು.ಆದರೆ ಈ ಪ್ರದೇಶವನ್ನು ಅರಣ್ಯ ಪ್ರದೇಶವನ್ನು ಬಿಡುಗಡೆಗೊಳಿಸಿ ಡಿ ನೋಟಿಫಿಕೇಷನ್ ಮಾಡಿಲ್ಲ.ನಮ್ಮ ಕಾಲದಲ್ಲಿ ಈ ಕೆಲಸ ಮಾಡಿದ್ದೆವು. ಆದರೆ ಇದರ ವಿರುದ್ಧ ಓರ್ವ ಕೋರ್ಟಿಗೆ ಹೋಗಿದ್ದ.ಆಗ ನಾವು ಮಾಡಿದ್ದ ಡಿ ನೋಟಿಫಿಕೇಷನ್ ಕೋರ್ಟ್ ರದ್ಧು ಮಾಡಿತ್ತು.ಆದರೆ ನಂತರ ಬಂದ ಬಿಜೆಪಿ ಸರ್ಕಾರ ಇದನ್ನು ಸರಿ ಮಾಡುವ ಕೆಲಸ ಮಾಡಿಲ್ಲ ಎಂದರು.
ಜನ ಹೋರಾಟ ಮಾಡುತ್ತಲೇ ಇದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ಡಿನೋಟಿಫಿಕೇಷನ್ ಮಾಡಿಲ್ಲ.ಇದರಿಂದ ಸಂತ್ರಸ್ತರು ಅತಂತ್ರರಾಗಿದ್ದಾರೆ. ಹೀಗಾಗಿ ಸಂತ್ರಸ್ತರ ಪರವಾಗಿ ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿದೆ. ಬಿಜೆಪಿ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ. ಎರಡು ಹಳ್ಳಿಗಳ ಸಮಸ್ಯೆಯನ್ನಿಟ್ಟುಕೊಂಡು ಬಸವರಾಜ ಬೊಮ್ಮಾಯಿ ಏನು ಮಾಡಿದ್ದಾನೆ ಮೊದಲು ಹೇಳಲಿ. ನಾವು ಮಾಡಿದ ಆದೇಶದ ವಿರುದ್ಧವೇ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿರುವುದು. ಇಷ್ಟು ದಿನ ಏನೂ ಮಾಡಿಲ್ಲ. ಈಗ ಸಮಸ್ಯೆ ಬಗೆಹರಿಸುತ್ತೇವೆ ಎನ್ನುತ್ತಿದ್ದಾರೆ. ಮೂರುವರೆ ವರ್ಷದಿಂದ ಏನು ಮಾಡಿದರು ಎಂದು ಸಿಎಂ ಬೊಮ್ಮಾಯಿ ವಿರುದ್ದ ಕಿಡಿ ಕಾರಿದರು.
ಗಡಿ ವಿವಾದ ಇತ್ಯರ್ಥವಾಗಿರುವ ವಿಚಾರ
ಮಹಾರಾಷ್ಟ್ರದವರು ರಾಜಕಾರಣಕ್ಕಾಗಿ ಕಾಲು ಕೆರೆಯುತ್ತಲೇ ಇದ್ದಾರೆ, ಯಾವಾಗಲೂ ಪುಂಡಾಟ ನಡೆಸುತಿದ್ದಾರೆ.ಮಹಾರಾಷ್ಟ್ರದವರೇ ಆದ ಮಹಾಜನ್ ವರದಿಯೇ ಅಂತಿಮ.ಅವರ ವಿರುದ್ಧ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದಲ್ಲೂ ಬಿಜೆಪಿ ಸರಕಾರವೇ ಇದೆ. ಅವರ ಬಳಿ ಸಿಎಂ ಮಾತನಾಡಲಿ. ಬಸ್ ಗೆ ಮಸಿ ಬಳಿಯುವುದು, ಕಲ್ಲು ಹೊಡೆಯುವುದು ಮಾಡುತಿದ್ದಾರೆ. ಅವರಿಗೆ ಮಾತ್ರ ಕಲ್ಲು ಹೊಡೆಯಲು ಬರುತ್ತದೆಯೇ ಎಂದು ಆಕ್ರೋಶ ಹೊರ ಹಾಕಿದರು.
ರೌಡಿಗಳು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ‘ಬಿಜೆಪಿಯೇ ರೌಡಿಗಳ ಪಕ್ಷ’ ಎಂದರು ಉತ್ತರಿಸಿದರು.