Advertisement

ಚುನಾವಣೆ ಬಳಿಕ ದಳ ಇರಲ್ಲ. ಸಿದ್ದುಗೆ ವಿಪಕ್ಷ ಸ್ಥಾನ ಉಳಿಯಲ್ಲ

09:07 PM Nov 25, 2019 | Lakshmi GovindaRaj |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಜೆಡಿಎಸ್‌ ಪಕ್ಷವೇ ಅಸ್ತಿತ್ವದಲ್ಲಿ ಇರಲ್ಲ. ಸಿದ್ದರಾಮಯ್ಯಗೆ ವಿಪಕ್ಷ ಸ್ಥಾನ ಉಳಿಯುವುದಿಲ್ಲ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಘಟಕದ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ನುಡಿದರು.

Advertisement

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಬಿಟ್ಟರೆ ಕಾಂಗ್ರೆಸ್‌ನ ಹಿರಿಯ ನಾಯಕರು ಯಾರು ಪ್ರಚಾರಕ್ಕೆ ಹೋಗುತ್ತಿಲ್ಲ. ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಸೋಲಿಸಲು ಕಾಂಗ್ರೆಸ್‌ ನಾಯಕರೇ ನಿರ್ಧರಿಸಿದ್ದಾರೆ. ಆದ್ದರಿಂದ ಬಿಜೆಪಿ ಎಲ್ಲಾ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದರು.

ಯೋಗ್ಯತೆ ಇಲ್ಲ: ಕಾಂಗ್ರೆಸ್‌, ಜೆಡಿಎಸ್‌ ಒಗ್ಗೂಡಿ ಇದ್ದಂತಹ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದ ಮೇಲೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಜನರ ಮುಂದೆ ಯಾವ ಮುಖ ಹೊತ್ತುಕೊಂಡು ಉಪ ಚುನಾವಣೆಗೆ ಬಂದಿವೆ ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು.

ಅತಂತ್ರ ಜೆಡಿಎಸ್‌ ಆಸೆ: ಸಿಕ್ಕ ಅವಕಾಶವನ್ನು ಬಳಸಿಕೊಳ್ಳದ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದರು. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಯಾವುದೇ ಅಜೆಂಡಾ ಇಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ 15 ಕಡೆ ಸೋಲಬೇಕು. ಅತಂತ್ರ ಸರ್ಕಾರ ನಿರ್ಮಾಣ ಮಾಡಬೇಕೆಂಬುದು ಜೆಡಿಎಸ್‌ ಆಸೆ. ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯಗೂ ಬಿಜೆಪಿ ಸೋಲಬೇಕು, ಯಡಿಯೂರಪ್ಪ ಕೆಳಗೆ ಇಳಿಯಬೇಕು ಎಂಬುದಾಗಿದೆ.

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬೇಕೆಂದು ಬಯಸಿದ್ದಾರೆ ಎಂದರು. ಕುಮಾರಸ್ವಾಮಿ ಮತ್ತೂಮ್ಮೆ ಅವಕಾಶವಾದಿ ರಾಜಕಾರಣ ಮಾಡಬೇಕೆಂದು ಬಯಸಿದ್ದಾರೆ. ಆದರೆ ಈ ಎರಡು ಪಕ್ಷಗಳ ಆಸೆ ಭ್ರಮನಿರಸನವಾಗುವಂತೆ ರಾಜ್ಯದ ಜನತೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲ್ಲಿದ್ದಾರೆ ಎಂದರು.

Advertisement

ಸ್ಥಿರ ಸರ್ಕಾರ: ರಾಜ್ಯದಲ್ಲಿ ಸ್ಥಿರ ಹಾಗೂ ಅಭಿವೃದ್ದಿ ಪರ ಸರ್ಕಾರ ನಡೆಸುವ ಶಕ್ತಿ ಬಿಜೆಪಿಗೆ ಮಾತ್ರ ಇದೆ. 2018ರಲ್ಲಿಯೇ ನಾವು ಸರ್ಕಾರ ರಚನೆ ಮಾಡಬೇಕಿತ್ತು. ಆದರೆ ಅಲ್ಪಮತದ ಕೊರತೆಯಿಂದ ಸರ್ಕಾರ ರಚನೆ ಮಾಡಲಿಲ್ಲ. ಈಗ ಸಿಕ್ಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಸ್ಥಿರ ಸರ್ಕಾರ ನೀಡಲಿದ್ದೇವೆ ಎಂದರು.

ಸಿದ್ದರಾಮಯ್ಯ ಮಾತೆತ್ತಿದರೆ ಆಪರೇಷನ್‌ ಕಮಲದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ ಪಕ್ಷದಿಂದ ರಾಜ್ಯಸಭಾ ಸದಸ್ಯರೊಬ್ಬರಿಗೆ ಜೆಡಿಎಸ್‌ನ 8 ಮಂದಿ ಶಾಸಕರ ಮತ ಹಾಕಿಸಿದ್ದು ಕೈ ಆಪರೇಷನ್‌ ಅಲ್ಲವೇ ಎಂದು ಪುಟ್ಟಸ್ವಾಮಿ ಪ್ರಶ್ನಿಸಿದರು. ಸಿದ್ದರಾಮಯ್ಯ ಆಹಿಂದ ನಾಯಕರೆಂದು ಹೇಳುಕೊಳ್ಳುತ್ತಾರೆ. ಆದರೆ ಅಧಿಕಾರದಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ಅದೇ ಯಡಿಯೂರಪ್ಪನವರು ಹಿಂದುಳಿದ ವರ್ಗಗಳ ಮಠಗಳಿಗೆ ನೂರಾರು ಕೋಟಿ ಅನುದಾನ ನೀಡಿದರು. ಹಿಂದುಳಿದ ವರ್ಗಗಳ ಮಹಾ ನಾಯಕರ ಜಯಂತಿಯನ್ನು ಘೋಷಿಸಿದರೆಂದರು. ಸುದ್ದಿಗೊಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಜಿ.ವಿ.ಮಂಜುನಾಥ, ಮುಖಂಡರಾದ ನಾರಾಯಣಸ್ವಾಮಿ, ನರಸಪ್ಪ, ಪೆರೇಸಂದ್ರ ವಿಜಯಕುಮಾರ್‌, ಶ್ರೀನಿವಾಸ್‌ ಉಪಸ್ಥಿತರಿದ್ದರು.

ಮೈತ್ರಿ ಸರ್ಕಾರ ದೇವೇಗೌಡರ ಕುಟುಂಬದ ಹಿಡಿತದಲ್ಲಿ: ಕುಮಾರಸ್ವಾಮಿ ಮೈತ್ರಿ ಸರ್ಕಾರದಲ್ಲಿ ಶಾಸಕರನ್ನು ಬಾಡಿಗೆ ಕಾರ್ಮಿಕರಂತೆ ನೋಡಿದರು. ಐಷರಾಮಿ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದರು. ಶಾಸಕರ ಕ್ಷೇತ್ರಗಳ ಸಮಸ್ಯೆಗಳಿಗೆ ಮೈತ್ರಿ ಸರ್ಕಾರ ಸ್ಪಂದಿಸಲಿಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದರೆ ರೇವಣ್ಣ ಸೂಪರ್‌ ಸಿಎಂ ಆಗಿದ್ದರು. ಮೈತ್ರಿ ಸರ್ಕಾರ ದೇವೇಗೌಡ ಕುಟುಂಬ ಹಿಡಿದಲ್ಲಿತ್ತು ಎಂದು ಪುಟ್ಟಸ್ವಾಮಿ ಆರೋಪಿಸಿದರು.

ಮೈತ್ರಿ ಸರ್ಕಾರದಿಂದ ಬೇಸತ್ತು ಕೆಲ ಶಾಸಕರು ಬೇಸತ್ತು ರಾಜೀನಾಮೆ ನೀಡಿದರು. ನಾವು ಯಾರನ್ನು ಸಂಪರ್ಕಿಸರಲಿಲ್ಲ ಎಂದರು. ಯಡಿಯೂರಪ್ಪ ವೀರಶೈವ ಸಮಾಜ ನನ್ನ ಕೈ ಹಿಡಿದಿರುವ ಬಗ್ಗೆ ನೀಡಿರುವ ಹೇಳಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಸರ್ಕಾರದಲ್ಲಿ ಇದ್ದಾಗ ಏನು ಮಾಡಿದರು. ಜಾತಿ ರಾಜಕಾರಣ ಮಾಡಲಿಲ್ಲವೇ? ತಮ್ಮ ಬೀಗರಿಗೆ, ಕುಟುಂಬಸ್ಥರಿಗೆ ಒಳ್ಳೆ ಖಾತೆಗಳನ್ನು ಹಂಚಿಕೆ ಮಾಡಲಿಲ್ಲವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next