Advertisement

ಎಂಡಿಎಫ್ ಅಧ್ಯಕ್ಷರ ಆಯ್ಕೆಯಲ್ಲಿ ಶಾಸಕರ ಹಸ್ತಕ್ಷೇಪವಿಲ್ಲ

10:38 AM Mar 23, 2022 | Shwetha M |

ಸಾಗರ: ಇಲ್ಲಿಯ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ನೂತನ ಅಧ್ಯಕ್ಷರನ್ನಾಗಿ ಹಿರಿಯ ಸಹಕಾರಿ ಧುರೀಣ ಎಂ. ಹರನಾಥ ರಾವ್ ಮತ್ತಿಕೊಪ್ಪ ಅವರನ್ನು ಆಯ್ಕೆ ಮಾಡಿರುವುದರ ಹಿಂದೆ ಶಾಸಕ ಎಚ್. ಹಾಲಪ್ಪ ಹರತಾಳು ಅವರ ಹಸ್ತಕ್ಷೇಪ ಇಲ್ಲ ಎಂದು ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಜಂಟಿ ಹೇಳಿಕೆ ನೀಡಿದ್ದಾರೆ.

Advertisement

ಮಲೆನಾಡಿನ ವಿದ್ಯಾಕಾಂಕ್ಷಿಗಳ ಹಸಿವನ್ನು ತಣಿಸಲು ಅಪಾರ ದೂರದೃಷ್ಟಿ ಹೊಂದಿದ್ದ, ಈ ಭಾಗದ ಹಿರಿಯರು ಅನೇಕ ದಾನಿಗಳ ನೆರವಿನಿಂದ 50 ವರ್ಷಗಳ ಹಿಂದೆ ಅತ್ಯಂತ ದುಸ್ತರ ಪರಿಸ್ಥಿತಿಯಲ್ಲೂ ಪರಿಶ್ರಮ, ಶ್ರದ್ಧೆಯಿಂದ ಎಂಡಿಎಫ್ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಈ ಶಿಕ್ಷಣ ಸಂಸ್ಥೆ ನೆರವಾಗಿದೆ. ಆರಂಭದ ದಿನಗಳಲ್ಲಿ ಕೇವಲ ಎಲ್‌ಬಿ ಕಾಲೇಜನ್ನು ಮಾತ್ರ ಹೊಂದಿದ್ದ ಎಂಡಿಎಫ್ ನಂತರದ ದಿನಗಳಲ್ಲಿ ಪ್ರಗತಿ ಸಂಯುಕ್ತ ಪ್ರೌಢಶಾಲೆ, ತಾಳಗುಪ್ಪದ ನಾಲಂದಾ ಪ್ರೌಢಶಾಲೆ, ಎಂಡಿಎಫ್ ಪಿಯು ಕಾಲೇಜು, ಬಿಇಡಿ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೀಗೆ ತನ್ನ ಹರವನ್ನು ವಿಸ್ತರಿಸಿಕೊಂಡು ಬಂದಿರುವುದು ಗಮನಾರ್ಹ ಸಂಗತಿಯಾಗಿದೆ ಎಂದು ಹೇಳಿದ್ದಾರೆ.

5 ವರ್ಷಗಳಿಂದ ಪ್ರತಿಷ್ಠಿತ ಎಂಡಿಎಫ್ ಸಂಸ್ಥೆಯ ಪರಿಸ್ಥಿತಿ ತುಂಬಾ ಶೋಚನೀಯವಾಗಿರುವುದನ್ನು ಮನಗಂಡು ಸಮಾನ ಮನಸ್ಕರಾದ ನಾವು ಸೇರಿ ಹಿಂದಿನ ಅಧ್ಯಕ್ಷ ಕೆ.ಎಚ್. ಶ್ರೀನಿವಾಸ್, ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ ಇಬ್ಬರಿಂದಲೂ ಆಡಳಿತ ಯಂತ್ರ ಅಸ್ತವ್ಯಸ್ತಗೊಂಡಿದೆ ಎಂಬುದನ್ನು ಗಮನಿಸಿದ್ದೇವೆ. ಉಪಾಧ್ಯಕ್ಷರು ತಮ್ಮ ಕುಟುಂಬದ ಸದಸ್ಯರನ್ನೇ ಸಂಸ್ಥೆಯ ಸದಸ್ಯರನ್ನಾಗಿ ಮಾಡಿಕೊಂಡು ಅಧಿಕಾರದಲ್ಲಿ ಮುಂದುವರಿಯಲು ಹುನ್ನಾರ ನಡೆಸಿರುವುದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಎಂಡಿಎಫ್‌ನ ಲೆಕ್ಕ ಪತ್ರ ತಪಾಸಣಾ ವರದಿಯಲ್ಲಿ 75 ಕ್ಕೂ ಹೆಚ್ಚು ಲೋಪಗಳನ್ನು ಪರಿಶೋಧಕರು ಎತ್ತಿ ತೋರಿಸಿದ್ದಾರೆ. ಉಪನ್ಯಾಸಕರ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಅನೇಕ ಲೋಪದೋಷಗಳು ಮತ್ತು ಹಣದ ವ್ಯವಹಾರ ನಡೆದಿರುವ ಬಗ್ಗೆ ಸಂಶಯಗಳು ಉದ್ಭವವಾಗಿದೆ. ಈ ಸಂಬಂಧ ನಾವು ಸಂಸ್ಥೆಯ ಅಧ್ಯಕ್ಷರನ್ನು ಭೇಟಿ ಮಾಡಿ ಈ ಬಾರಿ ಆಡಳಿತ ಮಂಡಳಿಗೆ ಹೊಸಬರಿಗೆ ಅವಕಾಶ ಮಾಡಿ ಎಂದು ಕೇಳಿದ್ದೇವೆ. ಅಲ್ಲದೆ ಉಪಾಧ್ಯಕ್ಷರು ದಾನಿಗಳನ್ನು ಕಡೆಗಣಿಸಿ ಉಪನ್ಯಾಸಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿ, ದಾಖಲಾತಿಗಳಿಗೆ ಬೀಗ ಹಾಕಿ ಅಧ್ಯಕ್ಷರಿಗೂ ಮಾಹಿತಿ ದೊರಕದಂತೆ ಮಾಡಿ ಸಂಸ್ಥೆಯ ಆಶೋತ್ತರಗಳನ್ನು ಗಾಳಿಗೆ ತೂರುತ್ತಿರುವ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಅನುಮತಿ ಪಡೆಯದೇ ವಿದೇಶ ಪ್ರಯಾಣ; ಪೊಲೀಸ್ ಅಧಿಕಾರಿ ಸಸ್ಪೆಂಡ್

Advertisement

ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಆಗಿರುವ ಲೋಪಗಳಿಗೆ ಪರಸ್ಪರ ಒಬ್ಬರು ಮತ್ತೊಬ್ಬರನ್ನು ಬೆಟ್ಟು ಮಾಡಿ ತೋರಿಸಿದ ಬೆಳವಣಿಗೆ ನಡೆದ ಕಾರಣ ನಾವೆಲ್ಲರೂ ಒಟ್ಟಾಗಿ ಸಂಸ್ಥೆಯ ಪುನಶ್ಚೇತಕ್ಕಾಗಿ ಹರನಾಥ ರಾವ್ ಅವರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಿದ್ದೆವು. ಈ ಬಗ್ಗೆ ಸಹಕಾರ ನೀಡುವಂತೆ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಹಾಲಪ್ಪ ಅವರಲ್ಲಿ ವಿನಂತಿ ಮಾಡಿದ್ದೆವು. ಸರ್ವ ಸದಸ್ಯರ ಸಭೆಯಲ್ಲಿ ನಡೆದ ಅಹಿತಕರ ಘಟನೆಗೆ ಹಿಂದಿನ ಉಪಾಧ್ಯಕ್ಷರು ಹಾಗೂ ಅಧ್ಯಕ್ಷರೇ ಕಾರಣರಾಗಿದ್ದಾರೆ ಹೊರತು ಇದರಲ್ಲಿ ಶಾಸಕ ಹಾಲಪ್ಪ ಅವರ ಪಾತ್ರವಿಲ್ಲ. ಹಿಂದಿನ ಉಪಾಧ್ಯಕ್ಷರು ಆಗಿನ ಅಧ್ಯಕ್ಷರನ್ನು ಎಳೆದು ಹಾಕಿ ನಾನೇ ಮುಂದಿನ ಅಧ್ಯಕ್ಷನಾಗುತ್ತೇನೆ ಎಂದು ಬಹಿರಂಗವಾಗಿ ಹೇಳಿಕೊಂಡು ತಿರುಗಿದ್ದು ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಹೇಳಿಕೆಯಲ್ಲಿ ದೂರಲಾಗಿದೆ.

ವಿವಿಧ ಸಂಘಟನೆಗಳ ಪ್ರಮುಖರಾದ ಬಿ.ಆರ್. ಜಯಂತ್, ರವಿಕುಮಾರ ಗೌಡ, ಎಸ್.ಬಿ. ಮಹಾದೇವ್, ಕವಲಕೋಡು ವೆಂಕಟೇಶ್, ಸತ್ಯನಾರಾಯಣ ಮಂಚಾಲೆ, ವೆಂಕಟಗಿರಿ ಮತ್ತಿಕೊಪ್ಪ, ಟಿ.ಎಸ್. ಅರುಣ, ಕೆ.ಎನ್. ವೆಂಕಟಗಿರಿ ಬೇದೂರು, ಕೆ.ಎಂ. ಸೂರ್ಯನಾರಾಯಣ ಖಂಡಿಕಾ, ಅಶ್ವಿನಿಕುಮಾರ್, ಶರಾವತಿ ಸಿ. ರಾವ್, ರಾಜೇಶ್ ಕೇಡಲಸರ, ಪ್ರಭಾಕರ ಮುಂಗರವಳ್ಳಿ ಈ ಪ್ರಕಟಣೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next