ಬೆಂಗಳೂರು: “ಈ ರಾಜ್ಯದಲ್ಲಿ ನಾನೊಬ್ಬ ಅದೃಷ್ಟದ ರಾಜಕಾರಣಿ, ರಾಜಕೀಯ ಸನ್ನಿವೇಶದ ಸಾಂಧರ್ಬಿಕ ಶಿಶು, ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ ಅನ್ನುವುದು ವಾಸ್ತವ ಸಂಗತಿ. ಈ ಮಾತನ್ನು ಪದೇ ಪದೇ ಹೇಳುತ್ತೇನೆ. ಅದಾಗ್ಯೂ ನಾನು ಈ ರಾಜ್ಯದ ಜನಸಾಮಾನ್ಯರ ಮುಖ್ಯಮಂತ್ರಿ. ಹಾಗಂತ ಮುಖ್ಯಮಂತ್ರಿ ಹುದ್ದೆ ಬಗ್ಗೆ ತಲೆಯಲ್ಲಿ ಹುಳ ಬಿಟ್ಟುಕೊಂಡು ಭ್ರಮೆಗಳನ್ನು ಇಟ್ಟುಕೊಂಡವನೂ ನಾನಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಎಷ್ಟು ದಿನ ನಾನು ಮುಖ್ಯಮಂತ್ರಿ ಆಗಿರುತ್ತೇನೆ, ಎಷ್ಟು ದಿನ ಕಾಂಗ್ರೆಸ್ ಪಕ್ಷ ಬೆಂಬಲ ಕೊಡುತ್ತದೆ ಅನ್ನುವುದು ಮುಖ್ಯವಲ್ಲ. ಇದ್ದಷ್ಟು ದಿನ ಒಳ್ಳೆಯ ಆಡಳಿತ ಕೊಡಬೇಕು. ಸರ್ಕಾರ ನಡೆಸಬೇಕಾದರೆ ಪ್ರವಾಹದ ವಿರುದ್ಧ ಈಜಬೇಕು. ಐದು ವರ್ಷ ನಾನೇ ಸಿಎಂ ಆಗಿರುತ್ತೇನೆ ಎಂಬ ವಿಶ್ವಾಸ ನನಗಿದೆ. ನನಗೆ ಸಮ್ಮಿಶ್ರ ಸರ್ಕಾರ ನಡೆಸುವುದೂ ಗೊತ್ತು, ಪೊಲೀಟಿಕಲಿ ಮ್ಯಾನೇಜ್ ಮಾಡುವುದು ಹೇಗೆಂದು ತಿಳಿದಿದೆ. ಐದು ವರ್ಷ ಅವಕಾಶ ಸಿಕ್ಕರೆ, ಇಡೀ ದೇಶದಲ್ಲೇ ಒಂದು ಮಾದರಿ ಸಮ್ಮಿಶ್ರ ಸರ್ಕಾರ ನಡೆಸಿ ತೋರಿಸುತ್ತೇನೆ ಎಂದರು.
ಮೂವತ್ತೇಳು ಶಾಸಕರನ್ನು ಇಟ್ಟುಕೊಂಡು ಮುಖ್ಯಮಂತ್ರಿ ಆಗುವುದು ಎಲ್ಲಾದರೂ ಉಂಟೇ, ಆದರೆ ನಾನು ಆಗಿದ್ದೇನೆ. ಇದು ಪ್ರಜಾಪ್ರಭುತ್ವದ ವೈಶಿಷ್ಟé. ಈ ಅರ್ಥದಲ್ಲಿ ನಾನು ಅದೃಷ್ಟದ ರಾಜಕಾರಣಿ, ನಾನು ಸಿಎಂ ಆಗಲು ತಂದೆ-ತಾಯಿಗಳ ದೈವ ನಂಬಿಕೆಯೂ ಕಾರಣ. ಎರಡೂ ರಾಷ್ಟ್ರೀಯ ಪಕ್ಷಗಳ ಆಡಳಿತ ಕಂಡಿದ್ದೀರಿ ಈ ಬಾರಿ ನನಗೊಂದು ಅವಕಾಶ ಕೊಡಿ ಎಂದು ಕೇಳಿದೆ.
ಆದರೆ, ಯಾಕೋ ಇನ್ನು ನನ್ನ ಮೇಲೆ ಜನತೆ ವಿಶ್ವಾಸ ಇಟ್ಟಂತಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ನಾನು ಅಧಿಕಾರ ಹಿಡಿದಿದ್ದೇನೆ. ಆ ಅರ್ಥದಲ್ಲಿ ನಾನು ಸಾಂಧರ್ಬಿಕ ಶಿಶು. ಕಾಂಗ್ರೆಸ್ ಪಕ್ಷ ನನಗೆ ಬೆಂಬಲ ಕೊಟ್ಟಿದೆ. ಅದಕ್ಕಾಗಿ ನಾನು ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ ಎಂದು ಹೇಳಿದ್ದೇನೆ. ಯಾರು ಏನೇ ಟೀಕೆ ಮಾಡಲಿ ಈ ಕುಮಾರಸ್ವಾಮಿ ಇರೋದೆ ನಾಡಿನ ಜನತೆಗೆ. ನಾನು ಆರೂವರೇ ಕೋಟಿ ಕನ್ನಡಿಗರ ಸೇವಕ ಎಂದು ಕುಮಾರಸ್ವಾಮಿ ಹೇಳಿದರು.
ಒಂದನೇ ತರಗತಿಯಿಂದ ಪದವಿಯವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶವಿದೆ. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸಲು ಸದಾ ಸಿದ್ಧ. ವಿದ್ಯಾರ್ಥಿಗಳಿಗೆ ವಿಧಾನಸೌಧ ಬಾಗಿಲು ಸದಾ ತೆರೆದಿರುತ್ತದೆ ಎಂದು ತಿಳಿಸಿದರು.
ಉಚಿತ ಶಿಕ್ಷಣ
ಖಾಸಗಿ ಶಿಕ್ಷಣ ಸಂಸ್ಥೆಗಳು ವ್ಯಾಪಾರ ರೀತಿಯಲ್ಲಿ ಸಂಸ್ಥೆಗಳನ್ನು ತೆರೆಯುತ್ತಿದ್ದಾರೆ. ಅವರನ್ನು ಡೊನೇಷನ್ ತೆಗೆದುಕೊಳ್ಳಬೇಡಿ ಎಂದು ಕಾನೂನು ತರಲು ಸಾಧ್ಯವಿಲ್ಲ. ಈಗ ಪೋಷಕರು ಸಾಲ ಮಾಡಿ ಡೊನೇಷನ್ ಕಟ್ಟಿ ಶಾಲೆಗೆ ಕಳುಹಿಸುವ ಪರಿಸ್ಥಿತಿಯಿದೆ. ಸರ್ಕಾರಿ ಸಂಸ್ಥೆಗಳನ್ನು ನಡೆಸುವಲ್ಲಿ ನಾವು ಎಡವಿದ್ದೇವೆ. ಅದನ್ನು ಸರಿಪಡಿಸಿದರೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಳುಹಿಸುವ ಸಂದರ್ಭ ಬರುವುದಿಲ್ಲ ಎಂದರು.
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಪಿಂಚಣಿ ನೀಡುವ ಭರವಸೆ ನೀಡಿದ್ದೆ. ಅದಕ್ಕೆ ನಾನು ಬದ್ಧವಾಗಿದ್ದೇನೆ. ಮುಂದಿನ ಬಜೆಟ್‌ನಲ್ಲಿ ಜಾರಿಗೆ ತರುತ್ತೇನೆ. ನಾನು ಎಂದೂ ಪೊಳ್ಳು ಭರವಸೆಗಳನ್ನು ನೀಡುವುದಿಲ್ಲ.
– ಎಚ್.ಡಿ.ಕುಮಾರಸ್ವಾಮಿ