ಬಂಗಾರಪೇಟೆ: ಪರಿಸರದಲ್ಲಿ ಸಕಲ ಜೀವರಾಶಿಗಳು ಬದುಕಲು ಉತ್ತಮ ಪರಿಸರಬೇಕು, ಹೀಗಾಗಿ ಪ್ರತಿಯೊಬ್ಬರು ಗಿಡ ಬೆಳೆಸಿ, ಮರ ಉಳಿಸುವ ಕೆಲಸ ಮಾಡಬೇಕು ಎಂದು ಶಾಸಕ ಎಸ್. ಎನ್.ನಾರಾಯಣಸ್ವಾಮಿ ಹೇಳಿದರು.
ಪಟ್ಟಣದ ಪಟ್ಟಾಭಿಷೇಕೋದ್ಯಾನದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಪುರಸಭೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದ ಅವರು, ಸಮಾಜದ ಪ್ರತಿ ಮನುಷ್ಯನಿಗೂ ನೆಮ್ಮದಿಯ ಜೀವನಕ್ಕೆ ಪ್ರಕೃತಿದತ್ತವಾದ ಉತ್ತಮ ಪರಿಸರ ಅಗತ್ಯವಾಗಿದೆ.
ಆದ್ದರಿಂದ ಮನೆಗೊಂದು ಸಸಿ ನೆಟ್ಟು, ಮರವಾಗಿ ಸುವ ಮತ್ತು ಅರಣ್ಯ ಉಳಿಸುವ ಕೆಲಸ ಎಲ್ಲರೂ ಮಾಡಬೇಕೆಂದು ಸಲಹೆ ನೀಡಿದರು. ಪರಿಸರವಿಲ್ಲದೆ ಮನುಷ್ಯನ ಜೀವನವಿಲ್ಲ. ಅದನ್ನು ಮನಗಂಡು ನಾವೆಲ್ಲ ಜೀವನದಲ್ಲಿ ಪರಿಸರವನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು.
ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಈ ಬಾರಿ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ಬೆಳೆಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಮರಗಿಡ ಕಾಣಬಹುದು. ದೇಶದಲ್ಲಿ ತಾಂತ್ರಿಕತೆ ಹೆಚ್ಚಾದಂತೆ ಬೃಹತ್ ಗಾತ್ರದ ಮರಗಳ ಮಾರಣಹೋಮ ನಡೆಯುತ್ತಿದೆ.
ಸಮಾಜದಲ್ಲಿ ಮನುಷ್ಯನ ಆಯುಷ್ಯ 80 ವರ್ಷಕ್ಕೆ ಇಳಿದಿದೆ. ಆದರೆ, ಮರಗಳ ಆಯುಷ್ಯವು ಸಾವಿರಾರು ವರ್ಷಗಳಿವೆ ಎಂದರು. ಪುರಸಭೆ ಸದಸ್ಯರಾದ ಶಫಿ, ಸಾಧಿಕ್ ಪಾಷ, ಕಪಾಲಿ ಶಂಕರ್, ಮುಖ್ಯಾಧಿಕಾರಿ ವಿ.ಶ್ರೀಧರ್, ಆರೋಗ್ಯ ನಿರೀಕ್ಷಕ ಗೋವಿಂದರಾಜು, ಕಂದಾಯ ನಿರೀಕ್ಷಕ ಕಾಂತರಾಜ್, ಸಿಎಒ ವೆಂಕಟೇಶ್, ಹರೀಶ್, ಆರೋಗ್ಯ ಇಲಾಖೆಯ ರವಿ ಹಾಜರಿದ್ದರು.