ಪಿರಿಯಾಪಟ್ಟಣ: ಕಳೆದ 5 ದಿನಗಳ ಹಿಂದೆ ರಾತ್ರಿ ಸುಮಾರು 8 ಗಂಟೆ ಸಮಯ…5-7 ಕಾಡಾನೆಗಳ ಹಿಂಡು ಕಾಡಿನಿಂದ ಬಂದು ಏಕಾಏಕಿ ಮನೆಯನ್ನು ಸುತ್ತುವರಿದವು… ಭಯದಿಂದ ಜೀವ ಉಳಿಸಿಕೊಳ್ಳಲು ಆನೆಗಳ ಕಾಲಿನ ಮಧ್ಯದಲ್ಲೇ ಓಡಿ ಕೂಗಿಕೊಂಡು ಆಲದ ಮರ ಹತ್ತಿದೆ…
ದೂರದಲ್ಲಿದ್ದ ಹಾಡಿ ಜನರೆಲ್ಲಾ ಬರುವಷ್ಟರಲ್ಲಿ ಮನೆಯೊಳಗೆ ಇದ್ದ ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಆನೆಗಳು ತಿಂದಿದ್ದಲ್ಲದೇ, ಮನೆಯನ್ನು ಧ್ವಂಸಗೊಳಿಸಿದವು… ಅಷ್ಟರಲ್ಲಿ ಎಲ್ಲರೂ ಬಂದು ಅವುಗಳನ್ನು ಓಡಿಸಿದರು…. ಈಗ, ಕನಿಷ್ಠ ಅಡುಗೆ ಮಾಡಿಕೊಳ್ಳಲು ಜಾಗವಿಲ್ಲದೆ ಕಷ್ಟವಾಗಿದ್ದು ಬೇರೆಯವರ ಮನೆ ಅಥವಾ ಕೂಲಿಗೆ ಹೋದವರ ಮನೆಯಲ್ಲಿ ಹಗಲು ಊಟ ಮಾಡಿ ಬೆಳಕು ಇದ್ದ ಸಮಯದಲ್ಲಿ ಮರ ಹತ್ತಬೇಕಾದ ಪರಿಸ್ಥಿತಿ ಇದೆ…
ಹೀಗೆಂದು, ಘಟನೆ ವಿವರಿಸಿದ್ದು ಕಾಡಾನೆ ಗಳಿಂದ ಪ್ರಾಣ ಉಳಿಸಿಕೊಂಡ ಕರಡಿಬೊಕ್ಕೆ ಗಿರಿಜನ ಹಾಡಿಯ ಲತಾ. ತಾಲೂಕಿನ ದೊಡ್ಡ ಹರವೆ ಮೀಸಲು ಅರಣ್ಯಕ್ಕೆ ಸೇರಿದ ಕಾಡಂಚಿ ನಲ್ಲಿ ಕರಡಿಬೊಕ್ಕೆ ಗಿರಿಜನ ಹಾಡಿಯಲ್ಲಿರುವ ದಿ.ಗಣೇಶ ಎಂಬುವವರ ಪತ್ನಿ ಲತಾ ಸ್ಥಿತಿ ಕರುಣಾಜನಕವಾಗಿದೆ. ಸಿಎಂ ತವರು ಜಿಲ್ಲೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಶಾಸಕರಾದ ಕೆ.ವೆಂಕಟೇಶ್ ಕ್ಷೇತ್ರವಾಗಿದ್ದು ತಲೆ ತಗ್ಗಿಸುವಂತಿದೆ.
ಈ ಗಿರಿಜನ ಹಾಡಿಯಲ್ಲಿ 22 ಕುಟುಂಬ ಗಳಿದ್ದು ಕೇವಲ ಜೇನುಕುರುಬ ಜನಾಂಗಕ್ಕೆ ಸೇರಿದವರಾಗಿದ್ದಾರೆ. ಕಳೆದ 65 ವರ್ಷಗಳಿಂದ ಸಣ್ಣದಾದ ಗುಡಿಸಲು ನಿರ್ಮಿಸಿಕೊಂಡು ಖಾಲಿ ಜಾಗಗಳಲ್ಲಿ ಗೆಡ್ಡೆ ಗೆಣಸುಗಳನ್ನು ಬೆಳೆಸಿ ಕೊಂಡಿದ್ದರು. ಆದರೆ, ಕಳೆದ 1 ತಿಂಗಳ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿ ಗೆಡ್ಡೆ ಗೆಣಸು ಗಳನ್ನು ನಾಶಪಡಿಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ 3-4 ವರ್ಷಗಳ ಹಿಂದೆ ಲತಾರ ಪತಿ ಗಣೇಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಅಮೂಲ್ಯ, ವಿನು ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರೂ ತಾಲೂಕಿನ ಅಬ್ಬಳತಿ ಗಿರಿಜನ ಆಶ್ರಮ ಶಾಲೆಯಲ್ಲಿ ಓದುತ್ತಿದ್ದಾರೆ. ಅಮೂಲ್ಯ 5ನೇ ತರಗತಿ, ವಿನು 3 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಯಾವುದೇ ತಡೆಯಿಲ್ಲದೆ ಪ್ರಾಣಿಗಳು ಬರುತ್ತಿವೆ. ಅರಣ್ಯ ಹಕ್ಕು ಕಾಯಿದೆಯಡಿ ಎಲ್ಲರೂ ಅರ್ಜಿ ಸಲ್ಲಿಸಿದ್ದೇವೆ. ಆದರೂ, ಹಕ್ಕುಪತ್ರ ನೀಡಿಲ್ಲ ಎಂದು ಇಲ್ಲಿನ ಮುಖಂಡ ರಾದ ರಮೇಶ್, ಆನಂದ, ಶಿವಣ್ಣ, ಕಾಳ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ನೀರಿನ ಸೌಲಭ್ಯ ನೀಡಲಾಗಿದೆ: ಅಭಿವೃದ್ಧಿ ಅಧಿಕಾರಿ ಎಂ.ಕೆ.ದೇವರಾಜ್, ನವಿಲೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ ಈ ಗಿರಿಜನ ಹಾಡಿ ಜನರಿಗೆ ತಾಲೂಕು ಆಡಳಿತದ ಸಹಕಾರ ದಿಂದ ಪೈಪ್ ಅಳವಡಿಸಿ ನೀರನ್ನು ಒದಗಿಸಲಾ ಗಿದೆ . ಅಲ್ಲದೆ, ಲತಾರಿಗೆ ಈಗಾಗಲೇ ರೇಷನ್ ಕಾರ್ಡ್ ನೋಂದಾಯಿಸಲಾಗಿದ್ದು ಆಹಾರ ಇಲಾಖೆಯಿಂದ ಕಾರ್ಡ್ ವಿತರಿಸಬೇಕಿದೆ ಎಂದರು.
ಸೌಲಭ್ಯ ನೀಡಲು ಆಗುತ್ತಿಲ್ಲ: 2005ರ ಅರಣ್ಯ ಹಕ್ಕು ಕಾಯಿದೆಯಡಿ ಇವರು ಸೇರ್ಪಡೆಯಾ ಗಿಲ್ಲ ಎಂಬ ಕಾರಣಕ್ಕೆ ಸೌಲಭ್ಯ ನೀಡಲು ತಾಂತ್ರಿಕ ತೊಂದರೆಗಳಿವೆ. ಉಪವಿಭಾಗಾಧಿಕಾರಿಗಳಿಗೆ ಕ್ರಮ ವಹಿಸುವಂತೆ ಮನವಿ ಮಾಡಿಕೊಳ್ಳಲಾ ಗಿದೆ ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ ತಿಳಿಸಿದರು.