ಗದಗ: ವಾಯು ಹಾಗೂ ಶಬ್ಧ ಮಾಲಿನ್ಯಕ್ಕೆ ಕಾರಣವಾಗುವ ಪಟಾಕಿಗಳನ್ನು ತ್ಯಜಿಸಿ, ಪರಿಸರ ಸ್ನೇಹಿಯಾಗಿ ಬೆಳಕಿನ ಹಬ್ಬ ದೀಪಾವಳಿ ಆಚರಿಸಬೇಕು ಎಂಬ ಆದೇಶ ಜಿಲ್ಲೆಯಲ್ಲಿ ಘೋಷಣೆಗೆ ಸೀಮಿತವಾಗಿದೆ.
ಪರಿಸರಸ್ನೇಹಿ ದೀಪಾವಳಿ ಆಚರಣೆ ಬಗ್ಗೆ ಮಾಧ್ಯಮಗಳ ಮೂಲಕ ಜಿಲ್ಲಾಡಳಿತ ಒಂದಿಷ್ಟು ಜಾಗೃತಿ ಮೂಡಿಸವುದು, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಪಟಾಕಿ ಸ್ಟಾಲ್‌ಗಳಿಗೆ ಭೇಟಿ ನೀಡಿ ಸಾಂಕೇತಿಕವಾಗಿ ಜನರಿಗೆ ಒಂದಷ್ಟು ಭಿತ್ತಿಪತ್ರ ವಿತರಿಸುವುದು ಮಾಡಿದೆ. ಹೊರತಾಗಿ ಪರಿಣಾಮಕಾರಿಯಾಗಿ ಜಾಗೃತಿ ಮೂಡಿಸುವ ಕೆಲಸಗಳಾಗುತ್ತಿಲ್ಲ. ಇನ್ನು, ಹಸಿರು ಪಟಾಕಿ(ಸುಧಾರಿತ ಕಡಿಮೆ ಮಾಲಿನ್ಯದ ಪಟಾಕಿಗಳು) ಬಗ್ಗೆ ಸ್ಥಳೀಯ ಜನರಿಗೆ ಮಾಹಿತಿಯೇ ಇಲ್ಲ.
ಏನಿದು ಹಸಿರು ಪಟಾಕಿ?: ಹೆಚ್ಚು ಶಬ್ಧ ಹಾಗೂ ಹೊಗೆಗೆ ಕಾರಣವಾಗುವ ರಾಸಾಯನಿಕಗಳ ಬದಲಾಗಿ, ಕಡಿಮೆ ಶಬ್ಧ ಹಾಗೂ ಹೊಗೆಯನ್ನು ಹೊರಸೂಸುವ ಪಟಾಕಿಗಳನ್ನು ತಯಾರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಈ ವಿಧಾನದಲ್ಲಿ ತಯಾರಿಸಲಾಗುವ ಪಟಾಕಿಗಳನ್ನೇ ಹಸಿರು ಪಟಾಕಿಗಳು ಎಂದು ಕರೆಯಲಾಗುತ್ತದೆ. ಈಗಾಗಲೇ ಹಸಿರು ಪಟಾಕಿಗಳ ಉತ್ಪಾದನೆ ಶುರುವಾಗಿದೆ.
ಇಲ್ಲಿನ ವಿಡಿಎಸ್‌ಟಿಸಿ ಮೈದಾನ, ಟಾಂಗಾ ಕೂಟ ಸೇರಿದಂತೆ ನಗರದಲ್ಲಿ 16 ಮಳಿಗೆಗಳಲ್ಲಿ ಪಟಾಕಿಗಳನ್ನು ಮಾರಾಟ ಮಾಡಲಾಗುತ್ತದೆ. ಆ ಪೈಕಿ ಅಲ್ಲೊಂದು ಇಲ್ಲೊಂದು ಅಂಗಡಿಯಲ್ಲಿ ಹಸಿರು ಪಟಾಕಿಗಳು ಲಭ್ಯವಿದ್ದರೂ ಅವುಗಳಿಂದಾಗುವ ಉಪಯೋಗದ ಬಗ್ಗೆ ಜಿಲ್ಲೆಯ ವರ್ತಕರಿಗೂ ಸ್ಪಷ್ಟತೆ ಇಲ್ಲ. ಈ ಕುರಿತು ಯಾವೊಬ್ಬ ಅಧಿಕಾರಿಯೂ ಹೆಚ್ಚಿನ ತಿಳಿವಳಿಕೆ ನೀಡಿಲ್ಲ. ಅಲ್ಲದೇ, ಜಿಲ್ಲೆಯಲ್ಲಿ ದೀಪಾವಳಿಗಿಂತ ಗಣೇಶ ಚತುರ್ಥಿಗೆ ಹೆಚ್ಚಿನ ಪಟಾಕಿಗಳು ಮಾರಾಟಗೊಳ್ಳುತ್ತವೆ. ಗಣೇಶ ಹಬ್ಬಕ್ಕೆ ತಂದ ಪಟಾಕಿಗಳನ್ನೇ ಇದೀಗ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಹಸಿರು ಪಟಾಕಿಗಳು ಹೆಚ್ಚಿನ ಸಂಖ್ಯೆಯಲ್ಲಿಲ್ಲ. ಈ ಬಾರಿ ಬರ-ನೆರೆಯಿಂದ ಪಟಾಕಿ ವ್ಯಾಪಾರ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ವಿಡಿಎಸ್ ಟಿಸಿ ಮೈದಾನದಲ್ಲಿನ ಪಟಾಕಿ ಮಾರಾಟಗಾರರು.
ಯಾವಾಗ ಪಟಾಕಿ ಸಿಡಿಸಬೇಕು: ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿ ಪ್ರಕಾರ ರಾತ್ರಿ 8ರಿಂದ 10ರ ವರೆಗೆ ಮಾತ್ರ ಪಟಾಕಿ ಸಿಡಿಸಬಹುದಾಗಿದೆ. ರಾತ್ರಿ 10ರಿಂದ ಬೆಳಗ್ಗೆ 6ರ ನಡುವೆ ಪಟಾಕಿ ಹಚ್ಚುವುದು ಅಪರಾಧವಾಗಿದೆ.ಆಸ್ಪತ್ರೆ, ವೃದ್ಧಾಶ್ರಮ, ಶಾಲಾ- ಕಾಲೇಜುಗಳ ವಸತಿ ನಿಲಯ, ಪ್ರಾಣಿ- ಪಕ್ಷಿ ಸಂಕುಲಕ್ಕೆ ಹಾನಿ ಯಾಗುವಂತೆ ಪಟಾಕಿ ಸಿಡಿಸುವುದೂ ಅಪರಾಧವಾಗಿದೆ.
ಇನ್ನು, ಪಟಾಕಿಗಳಿಂದ ಸಂಭವಿಸಬಹುದಾದಯಾವುದೇ ಬಗೆಯ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಅಗ್ನಿಶಾಮಕ ದಳ, ತುರ್ತು ಚಿಕಿತ್ಸೆಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಜಿಲ್ಲಾಸ್ಪತ್ರೆ, ತಾಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.
-ವೀರೇಂದ್ರ ನಾಗಲದಿನ್ನಿ