ಬೆಂಗಳೂರು: “ಭಾರತದಲ್ಲಿ ಗಾಂಧೀಜಿಗಿಂತ ಶ್ರೇಷ್ಠ ಹಿಂದೂ ಬೇರೆ ಯಾರೂ ಇಲ್ಲ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬುಧವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ನಡೆದ ಸದ್ಭಾವನಾ ನಡಿಗೆಯಲ್ಲಿ ಪಾಲ್ಗೊಂಡು ನಂತರ ಸಮಾವೇಶದಲ್ಲಿ ಮಾತನಾಡಿದರು.
ರಾಮರಾಜ್ಯದ ಕನಸು ಕಂಡಿದ್ದ ಗಾಂಧೀಜಿ, ರಾಮನ ಹೆಸರಿನಲ್ಲಿ ದೇಶಕಟ್ಟಲು ಮುಂದಾಗಿದ್ದರು. ಅವರ ಎದೆಗೆ ಗುಂಡು ಬಿದ್ದಾಗ ಹೇ ರಾಮ್ ಎಂದು ಹೇಳಿದವರು ಗಾಂಧೀಜಿ. ಅವರು ನಿಜವಾದ ಹಿಂದೂವಾಗಿದ್ದರು. ಆದರೆ, ಈಗ ರಾಮನ ಹೆಸರಿನಲ್ಲಿ ದೇಶ ಒಡೆಯುವ ಕೆಲಸವಾಗುತ್ತಿದೆ. ಗಾಂಧಿ ಸ್ಮರಿಸಿದ ರಾಮ ಬೇರೆ, ಬಿಜೆಪಿಯವರ ರಾಮನೇ ಬೇರೆ ಎಂದರು. ಆರ್‌ಎಸ್‌ಎಸ್‌ನವರು ಸ್ವಾತಂತ್ರ್ಯ ಹೋರಾಟ ದಲ್ಲಿ ಪಾಲ್ಗೊಳ್ಳಲಿಲ್ಲ. ಈಗ ಮೋದಿಯನ್ನು ವಿರೋಧಿಸಿದರೆ ದೇಶ ದ್ರೋಹಿ ಗಳು ಎಂದು ಕರೆಯುತ್ತಾರೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಅಮಿತ್ ಶಾ ಮುಂದಾಗಿದ್ದಾರೆ. ಯಾರೇ ಬಂದರೂ, ಕಾಂಗ್ರೆಸ್ ಮುಕ್ತ ಭಾರತ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಟ್ರಂಪ್ ಗಾಂಧಿ ಬಗ್ಗೆ ತಿಳಿದುಕೊಳ್ಳಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದು ಕರೆದಿದ್ದಾರೆ. ನಿಜವಾಗಿಯು ಮೋದಿ ದೇಶಭಕ್ತರಾಗಿದ್ದರೆ ಅದನ್ನು ಖಂಡಿಸಬೇಕಿತ್ತು. ಟ್ರಂಪ್ ಅವರು, ಗಾಂಧೀಜಿ ಬಗ್ಗೆ ತಿಳಿದುಕೊಳ್ಳಬೇಕಿತ್ತು. ಜಗತ್ತಿನ ಬಲಿಷ್ಠ ರಾಷ್ಟ್ರದ ಅಧ್ಯಕ್ಷರಾಗಿ ಟ್ರಂಪ್ ಆ ರೀತಿ ಹೇಳಿಕೆ ಕೊಡುವುದು ಎಷ್ಟು ಸರಿ? ಅವರು ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರಿಂದ ಲಾದರೂ ಗಾಂಧೀಜಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಪ್ರಚಾರಕ್ಕಾಗಿ “ಹೌಡಿ ಮೋದಿ’ ಕಾರ್ಯಕ್ರಮ ನಡೆದಿತ್ತು. ಅಲ್ಲಿ ನರೇಂದ್ರ ಮೋದಿ ಅವರನ್ನು ಹೊಗಳಲು ಟ್ರಂಪ್‌ಗೆ ನಾಚಿಕೆಯಾಗಬೇಕಿತ್ತು ಎಂದು ಟೀಕಿಸಿದರು.
ಭಿನ್ನಾಭಿಪ್ರಾಯ ಮರೆತರೆ ಅಧಿಕಾರಕ್ಕೆ ಬರಬಹುದು: ಕಾಂಗ್ರೆಸ್ ನಾಯಕರು ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತರೆ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 10 ವರ್ಷ ದೇಶದ ಪ್ರಧಾನಿಯಾಗಿ ಆರ್ಥಿಕ ಪರಿಸ್ಥಿತಿಯನ್ನು ಸುಸ್ಥಿತಿಯಲ್ಲಿ ಇಟ್ಟಿದ್ದರು. ಈಗಿನ ಸರ್ಕಾರಕ್ಕೆ ಶೌಚಾಲಯ ಕಟ್ಟಿರುವುದೇ ದೊಡ್ಡ ಸಾಧನೆ ಎನ್ನುವುದಾದರೆ ಕಾಂಗ್ರೆಸ್ ಮಾಡಿರುವ ಸಾಧನೆ ದೊಡ್ಡದಿದೆ ಎಂದರು.
ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಳು ಮಾಡುವ ಗಾಂಧಿ ವಿರೋಧಿ ಸರ್ಕಾರ ಇದೆ. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕಾಶ್ಮೀರ ಸಮಸ್ಯೆ, ಅಸ್ಸಾಂ ಸಮಸ್ಯೆ, ಕರ್ನಾಟಕದ ಸಮಸ್ಯೆ ಎಲ್ಲದರ ಬಗ್ಗೆಯೂ ಪ್ರತಿಭಟನೆ ಮಾಡಬೇಕು.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದರೂ ಪ್ರವಾಹ ಪೀಡಿತ ಪ್ರದೇಶಕ್ಕೆ ಮೋದಿ ಭೇಟಿ ನೀಡಿಲ್ಲ. ಮೋದಿ ಒಬ್ಬ ಮನುಷ್ಯತ್ವ ಇಲ್ಲದ ವ್ಯಕ್ತಿ ಎನ್ನುವುದು ದೇಶದ ದುರಂತ. ದೇಶದಲ್ಲಿ ಇಂತಹ ವ್ಯಕ್ತಿ ಪ್ರಧಾನಿಯಾಗಿದ್ದಾರೆ ಎನ್ನುವುದೇ ದುರ್ದೈವ.
-ಸಿದ್ದರಾಮಯ್ಯ, ಮಾಜಿ ಸಿಎಂ