ಬೆಂಗಳೂರು: ಈಗಾಗಲೇ ಸರಕಾರ ಬಡವರ ಮತ್ತು ಜನಪರವಾದ ಐದು ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಹಡಪದ ಸಮಾಜ ಅಭಿವೃದ್ಧಿ ನಿಗಮಕ್ಕೆ ಈ ಬಾರಿ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ರವೀಂದ್ರ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಡಪದ ಸಮುದಾಯದವರು ನಿಗಮ ಮಂಡಳಿಗೆ ಅನುದಾನ ನೀಡುವಂತೆ ಸರಕಾರಕ್ಕೆ ಬೇಡಿಕೆ ಸಲ್ಲಿಸಿದ್ದಾರೆ. ಆದರೆ ಸರಕಾರ ಈಗ ಗ್ಯಾರಂಟಿ ಯೋಜನೆ ಜಾರಿಗೆ ಮುಂದಾಗಿದ್ದು, ಆ ಹಿನ್ನೆಲೆಯಲ್ಲಿ ಈ ಬಾರಿ ಆ ನಿಗಮಕ್ಕೆ ಅನುದಾನ ನೀಡಲು ಸಾಧ್ಯವಾಗುವುದಿಲ್ಲ. ಮುಂದಿನ ವರ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ನಾನು ಕುರಿ ಕಾಯ ಬೇಕಾ? ಜಾತಿಯಲ್ಲಿ ಯಾರೂ ಶ್ರೇಷ್ಠರಲ್ಲ . ನಮ್ಮ ತಾತ, ನಮ್ಮಪ್ಪ ಕುರಿ ಕಾಯುತ್ತಿದ್ದರು. ಹಾಗಂತ ನಾನೂ “ಅಪ್ಪ ಹಾಕಿದ ಆಲದ ಮರ’ ಎಂದು ಅದಕ್ಕೆ ನೇಣು ಹಾಕಿಕೊಳ್ಳಲಾಗದು. ವೃತ್ತಿ ನಂಬಿಕೊಂಡು ಉದ್ಯೋಗ ಮಾಡಲಾಗದು. ಅಂಬೇಡ್ಕರ್ ಅವರು ಸಂವಿಧಾನ ನೀಡದೆ ಇದ್ದಿದ್ದರೆ ನಾನು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಕುರಿ, ಎಮ್ಮೆ ಕಾಯುತ್ತಾ ಇರಬೇಕಾಗಿತ್ತು. ಸಚಿವ ಶಿವರಾಜ ತಂಗಡಗಿ ಕಲ್ಲು ಕುಟ್ಟುತ್ತಾ ಇರಬೇಕಾಗಿತ್ತು ಎಂದು ಜಾತಿ ವ್ಯವಸ್ಥೆ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು.
ಹಡಪದ ಸಮುದಾಯದ ಶ್ರೀಗಳಾದ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಮಾತನಾಡಿ, ಸರಕಾರ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೇಂದ್ರ ತೆರೆಯಲು ಬೆಂಗಳೂರಿನಲ್ಲಿ 5 ಎಕ್ರೆ ಭೂಮಿ ನೀಡಬೇಕು ಎಂದು ಮನವಿ ಮಾಡಿದರು.