ಕಲಬುರಗಿ: ಜಿಲ್ಲೆಯಲ್ಲಿ ಸಾಕಷ್ಟು ಗೋಶಾಲೆಗಳು ಇದ್ದರೂ ಅವುಗಳ ನಿರ್ವಹಣೆಗೆ ಬೇಕಾದ ಆರ್ಥಿಕ, ಮಾನವ, ವೈದ್ಯಕೀಯ ಸಂಪನ್ಮೂಲ ಕೊರತೆಯಿಂದ ಸೊರಗುವಂತೆ ಆಗಿವೆ. ಗೋವುಗಳಿಗೆ ಬೇಕಾದ ಮೇವು, ವೈದ್ಯಕೀಯ ಚಿಕಿತ್ಸೆ, ಗೋ ಶಾಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ನೀಡಲಾಗದೆ ನರಳುವಂತೆ ಆಗಿವೆ. ರೈತರು ತಮಗೆ ಬೇಡವಾದ ಆಕಳು, ಎತ್ತುಗಳನ್ನು ಕೊಂಡೊಯ್ದರೂ ಸ್ವೀಕರಿಸದ ಪರಿಸ್ಥಿತಿಯಲ್ಲಿ ಗೋಶಾಲೆಗಳು ಇವೆ.
ಜಿಲ್ಲೆಯಲ್ಲಿ ಒಟ್ಟಾರೆ 3,87,375 ಆಕಳು ಮತ್ತು ಎತ್ತುಗಳು ಹಾಗೂ 73,644 ಎಮ್ಮೆಗಳು ಇವೆ. ಆದರೆ, ಸರ್ಕಾರದಿಂದ ನೇರವಾಗಿ ನಿರ್ವಹಣೆಗೆ ಒಳಪಡುವ ಯಾವುದೇ ಗೋಶಾಲೆಗಳು ಇಲ್ಲ. ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ನಡೆಸುತ್ತಿರುವ 35ಕ್ಕೂ ಅಧಿಕ ಗೋಶಾಲೆಗಳು ಇವೆ. ಇವುಗಳಿಗೆ ಸರ್ಕಾರದಿಂದ ಯಾವುದೇ ಸವಲತ್ತು ಸಮರ್ಪಕವಾಗಿ ದೊರೆಯುತ್ತಿಲ್ಲ.
ಗೋಶಾಲೆಗಳ ನಿರ್ವಹಣೆಗಾಗಿ ಪಶು ಸಂಗೋಪಾನೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ. ಆದರೆ, ಇದಕ್ಕಾಗಿ ಪ್ರತಿ ವರ್ಷವೂ ಸರ್ಕಾರಿ ಕಚೇರಿಗೆ ಅಲೆಯಬೇಕು. ಇಂತಹ ತಾಪತ್ರಯದಿಂದ ಸರ್ಕಾರಕ್ಕೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. 2019-20ನೇ ಸಾಲಿನಲ್ಲಿ 35 ಗೋ ಶಾಲೆಗಳು ಅರ್ಜಿ ಸಲ್ಲಿಸಿದ್ದವು. ಈ ಬಾರಿ ಸ್ವಾಮಿ ಸಮರ್ಥ, ಶ್ರೀರಾಮ ಸಂಸ್ಥೆ, ಶ್ರೀಮಾಧವ, ಆರ್ಯನ್ ಸೇರಿ ಕೇವಲ ಐದು ಗೋಶಾಲೆಗಳು ಅರ್ಜಿ ಸಲ್ಲಿಸಿವೆ. ಪ್ರತಿ ಪಶುವಿಗೆ ಪ್ರತಿ ದಿನಕ್ಕೆ 17ರೂ. ಸಹಾಯಧನ ನಿಗದಿ ಮಾಡಲಾಗಿದೆ. ಆದರೆ, ಇಲಾಖೆಯಲ್ಲಿ ಅನುದಾನ ಲಭ್ಯವಿದ್ದರೆ ಮಾತ್ರ ಸಹಾಯಧನ ನೀಡಲಾಗುತ್ತದೆ. ಇಲ್ಲವಾದಲ್ಲಿ ಇಲ್ಲ ಎನ್ನುವಂತೆ ಆಗಿದೆ.
ದಾನಿಗಳಿಂದ ಉಳಿದಿವೆ: ಮುಖ್ಯವಾಗಿ ಪಶುಗಳನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದೇ ಗೋಶಾಲೆಗಳ ಸವಾಲಿನ ಕೆಲಸ. ಯಾವುದೇ ರೋಗ-ರುಜಿ ಕಾಣಿಸಿಕೊಂಡರೆ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಪರದಾಡುವಂತೆ ಆಗಿದೆ. ಸಕಾಲಕ್ಕೆ ಪಶು ಸಂಗೋಪಾಲನೆ ಇಲಾಖೆ ವೈದ್ಯರೂ ಸ್ಪಂದಿಸುವುದಿಲ್ಲ. ಜತೆಗೆ ನಿರ್ವಹಣೆಗೆ ಸರ್ಕಾರದಿಂದ ಸಿಗಬೇಕಾದ ನೆರವು ವರ್ಷ ಪೂರ್ತಿ ಸಿಗುವುದೇ ಇಲ್ಲ. ಇಲಾಖೆಯಲ್ಲಿ ಅನುದಾನ ಇದ್ದರೆ ಆರೇಳು ತಿಂಗಳಲ್ಲಿ ಒಮ್ಮೆ ಬಿಡಿಗಾಸಿನಷ್ಟು ಸಹಾಯಧನ ಸಿಗುತ್ತದೆ. ದಾನಿಗಳಿಂದ ಸಹಾಯದಿಂದಲೇ ಗೋಶಾಲೆಗಳು ಉಳಿದಿವೆ ಎನ್ನುತ್ತಾರೆ ಗೋಶಾಲೆಗಳ ಅಧ್ಯಕ್ಷರು.
ಮಾದರಿ ಮಾಧವ ಗೋಶಾಲೆ ಬಹುತೇಕ ಗೋಶಾಲೆಗಳು ಕೇವಲ ಗೋಪಾಲನೆಯಲ್ಲಿ ತೊಡಗಿದ್ದರೆ, ಕಲಬುರಗಿ ತಾಲೂಕಿನ ಕುಸನೂರ ಬಳಿಯ ಶ್ರೀಮಾಧವ ಗೋಶಾಲೆ ಗೋ ಸಂರಕ್ಷಣೆಯೊಂದಿಗೆ ಸಗಣಿಯ ಉಪ ಉತ್ಪನ್ನಗಳಿಂದ ಗಮನ ಸೆಳೆದಿದೆ. ಹಳೆ ಡೈರಿ ಜಾಗದಲ್ಲಿ 12 ಸಾವಿರ ರೂ. ಬಾಡಿಗೆ ನೀಡಿ ಮಹೇಶ ಬೀದರಕರ್ ಎನ್ನುವರು ಇದನ್ನು ನಡೆಸುತ್ತಿದ್ದು, ಗೋಶಾಲೆಯಲ್ಲಿ 100 ಜಾನುವಾರುಗಳು ಇವೆ.
ಅವುಗಳು ಪಾಲನೆ ಮಾತ್ರವಲ್ಲದೇ ಗೋಮಯ ಹಣತೆ, ಪಾತ್ರೆ ತೊಳೆಯುವ ಪುಡಿ, ಗೋಮಯ ಕಟ್ಟಿಗೆ, ಅಗಿಹೋತ್ರ ಕುಳ್ಳು ಸೇರಿ ಸುಮಾರು 15 ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಇದರಿಂದ ಹಣ ಬರುತ್ತಿದ್ದು, ಆರ್ಥಿಕವಾಗಿ ಸ್ವಲ್ಪ ಕೈ ಹಿಡಿದಂತೆ ಆಗಿದೆ. ಗೋವುಗಳ ಆರೈಕೆ, ಚಿಕಿತ್ಸೆ, ದೇಸಿ ಗೋ ತಳಿಗಳ ಅಭಿವೃದ್ಧಿ ಹಾಗೂ ಉತ್ಪನ್ನಗಳೊಂದಿಗೆ ಗೋಶಾಲೆ ನಿರ್ವಹಣೆಗಾಗಿ ಇತ್ತೀಚೆಗೆ “ಐಎಸ್‌ಒ’ ಪ್ರಮಾಣಪತ್ರ ದೊರೆತಿದೆ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಶುತಾಯಿ ಗೋಶಾಲೆ ನಂತರ “ಐಎಸ್‌ಒ’ ಪ್ರಮಾಣಪತ್ರ ಪಡೆದ ಎರಡನೇ ಗೋಶಾಲೆ ಇದಾಗಿದೆ. ಅಲ್ಲದೇ, ರಾಮಚಂದ್ರಪುರದ ನಂತರ ಗೋಮೂತ್ರ ಶುದ್ಧೀಕರಣ ಯಂತ್ರ ಹೊಂದಿದ್ದು, ಎರಡನೇ ಗೋಶಾಲೆ ಎನ್ನು ಹೆಗ್ಗಳಿಕೆ ಮಾಧವ ಗೋಶಾಲೆ ಪಾತ್ರವಾಗಿದೆ ಎನ್ನುತ್ತಾರೆ ಮಹೇಶ ಬೀದರಕರ್.
ನಮ್ಮ ಗೋಶಾಲೆಯಲ್ಲಿ 300 ಆಕಳು, ಎತ್ತುಗಳು ಇವೆ. ಕೆಲ ಗೋಮಯ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಆದರೆ, ಗೋಗಳ ಪಾಲನೆ ಮತ್ತು ಚಿಕಿತ್ಸೆಗೆ ಸರಿಯಾದ ವೈದ್ಯಕೀಯ ಸೇವೆ ಕೊರತೆಯಿಂದ ಬಳಲುವಂತೆ ಆಗಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ, ಅವುಗಳನ್ನು ಸಂರಕ್ಷಿಸಲು ಸರ್ಕಾರದಿಂದ ಪ್ರತಿ ಗೋಶಾಲೆಗೆ ಒಬ್ಬ ಪಶು ವೈದ್ಯನನ್ನು ಕಲ್ಪಿಸಲು ಕೆಲಸ ಮಾಡಬೇಕು.
ಬಸವರಾಜ ಮಾಡಗಿ, ಅಧ್ಯಕ್ಷ, ಸ್ವಾಮಿ ಸರ್ಮಥ ಸೇವಾ ಕಲ್ಯಾಣ ಕೇಂದ್ರ, ಕಲಬುರಗಿ
*ರಂಗಪ್ಪ ಗಧಾರ