ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿನ ಪವಿತ್ರ ಸ್ಥಳ, ಭಕ್ತರ ನಂಬಿಕೆಯ ಆರಾಧ್ಯ ದೇವಿ ಅಕ್ಕನಾರ ಹಳ್ಳದ ಗಂಗಮ್ಮ, ಭಕ್ತರ ಸಂಕಷ್ಟಗಳನ್ನು ಪರಿಹಾರಿಸುವ ತಾಯಿಯಾಗಿದ್ದಾಳೆ. ಆದರೆ, ಈ ಪವಿತ್ರ ಸ್ಥಳಕ್ಕೆ ಹೋಗಲು ಯೋಗ್ಯವಾದ ರಸ್ತೆ ಇಲ್ಲದೇ ಭಕ್ತರಿಗೆ ಸಂಕಷ್ಟ ಎದುರಾಗಿದೆ.
ಮುದ್ದೇನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಅಕ್ಕನಾರ ಹಳ್ಳ, ಚಿಕ್ಕನಾಯಕನಹಳ್ಳಿಯಿಂದ ಸುಮಾರು 10 ರಿಂದ 12 ಕಿ.ಮಿ ದೂರದಲ್ಲಿದೆ. ತಾಲೂಕು ಸೇರಿದಂತೆ ವಿವಿಧ ಜಿಲ್ಲೆಗಳಿಂದ ವರ್ಷದ ಬಹುತೇಕ ದಿನಗಳಲ್ಲಿ ಸಾವಿರಾರು ಜನ ಈ ಸ್ಥಳಕ್ಕೆ ಆಗಮಿಸಿ,ತಮ್ಮ ಕಷ್ಟಗಳನ್ನು ಪರಿಹಾರಿಸಿಕೊಳ್ಳುತ್ತಿದ್ದಾರೆ. ಇಂತಹ ಪವಿತ್ರ ಸ್ಥಳ ತಾಲೂಕಿನಲ್ಲಿ ಇರುವುದು, ತಾಲೂಕಿಗೆ ಒಂದು ಗೌರವದ ಸಂಕೇತವಾಗಿದೆ. ಅದರೆ, ತಾಲೂಕು ಈ ಸ್ಥಳಕ್ಕೆ ಕನಿಷ್ಠ ಸೌಲಭ್ಯ ಮತ್ತು ಉತ್ತಮ ರಸ್ತೆ ನಿರ್ಮಿಸಲು ವಿಫಲವಾಗಿದೆ. ಇಲ್ಲಿಗೆ ಹೋಗುವ ಭಕ್ತರ ಕಷ್ಟಗಳು ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮನವರಿಕೆಯಾಗಿದ್ದರು ಸುಮ್ಮನಿರುವುದು ದುರಂತವೇ ಸರಿ.
ಪೂಜೆ ಸಲ್ಲಿಸಿದರೆ ಮಕ್ಕಳ ಭಾಗ್ಯ: ಅಕ್ಕನಾರಹಳ್ಳ ಗಂಗಮ್ಮ ತಾಯಿ ಭಕ್ತರ ಕಷ್ಟಗಳನ್ನು ಪರಿಹಾರಿಸಿಕೊಂಡು ಬರುತ್ತಿದ್ದು. ಮದುವೆಯಾದ ನೂತನ ದಂಪತಿಗಳು ಮತ್ತು ಮದುವೆಯಾಗಿ ಹಲವು ವರ್ಷಗಳು ಕಳೆದರು ಮಕ್ಕಳ ಭಾಗ್ಯವಿಲ್ಲದವರು ಇಲ್ಲಿಗೆ ಬಂದು ಗಂಗಮ್ಮ ಪೂಜೆ ಸಲ್ಲಿಸಿದರೆ, ಮಕ್ಕಳ ಭಾಗ್ಯ ಕಲ್ಪಿಸುತ್ತದೆ ಎಂಬ ನಂಬಿಕೆ ಇದೆ. ಪ್ರಕೃತಿಗೆ ಪೂಜೆ ಸಲ್ಲಿಸುವ ಪದ್ಧತಿ ಈ ನಿಜ ಸ್ಥಳದಲ್ಲಿದೆ. ಇಲ್ಲಿರುವ ಮರಕ್ಕೆ ಪೂಜೆ ಸಲ್ಲಿಸಿ, ಮಕ್ಕಳಾಗುವಂತೆ ಭಕ್ತಾದಿಗಳು ಕಟ್ಟಿರುವ ತೊಟ್ಟಿಲು ತೆಗೆದುಕೊಂಡು ಬಂದು, ಪೂಜೆ ಸಲ್ಲಿಸಿದರೆ ಮಕ್ಕಳು ಕರುಣಿಸುತ್ತದೆ ಎಂಬ ನಂಬಿಕೆ ಇದೆ. ಮಕ್ಕಳಾದ ನಂತರ ತೆಗೆದುಕೊಂಡು ಬಂದ ತೊಟ್ಟಿಲು ಜೊತೆಗೆ ಮತ್ತೂಂದು ತೊಟ್ಟಿಲನ್ನು ಈ ಮರಕ್ಕೆ ಕಟ್ಟುವ ಪದ್ಧತಿಯೂ ಸಹ ಇದೆ. ಅಂದುಕೊಂಡ ಕಾರ್ಯಕೈಗೊಂಡರೆ ಭಕ್ತರುಗಳು ಹೊಳಿಗೆ ತುಪ್ಪದ ಎಡೆ ಮಾಡಿ, ಪೂಜೆ ಸಲ್ಲಿಸಿ ಅಲ್ಲಿಯೇ ಊಟ ಮಾಡಿಕೊಂಡು ಬರುತ್ತಾರೆ.
ಅಕ್ಕನಾರಹಳ್ಳಕ್ಕೆ ಹೋಗಲು ಕಠಿಣ ದಾರಿ:
ಅಕ್ಕನಾರಹಳ್ಳಕ್ಕೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೇ ಭಕ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ದೊಡ್ಡಗುಂಡಿಗಳು, ಮುಳ್ಳು, ಹಳ್ಳ ಬಿದ್ದಿರುವ ರಸ್ತೆಗಳಲ್ಲಿ ಪ್ರಯಾಣ ಮಾಡುವುದು ಸಾಹಸವೇ ಸರಿ. ಮಳೆ ಬಂದರೆ ದಾರಿಯಲ್ಲಿಯೇ ನೀರು ನಿಂತುಕೊಂಡಿರುತ್ತದೆ. ಆಟೋ, ಕಾರು ಚಾಲಕರು ಇಲ್ಲಿಗೆ ಬರಲು ಹಿಂದೆ ಮುಂದೆ ನೋಡುತ್ತಿದ್ದು, ಈ ಸ್ಥಳಕ್ಕೆ ಹೋಗುವುದೇ ಭಕ್ತರಿಗೆ ದೊಡ್ಡ ಸಾಧನೆಯಾಗಿದೆ.
ಉತ್ತಮ ರಸ್ತೆ ಕಲ್ಪಿಸಲು ಭಕ್ತರ ಆಗ್ರಹ: ಅಕ್ಕನಾರಹಳ್ಳ ಒಂದು ರೀತಿಯಲ್ಲಿ ಭಕ್ತಿಯ ಸ್ಥಳವಾಗಿದ್ದು, ಎಲ್ಲಾಜನಾಂಗದ ಸಾವಿರಾರು ಜನ ಇಲ್ಲಿಗೆ ಬಂದು ಹೋಗುತ್ತರೆ. ಈ ಸ್ಥಳಕ್ಕೆ ಮೂಲಭೂತ ಸೌಲಭ್ಯವನ್ನುಕಲ್ಪಿಸಬೇಕಾಗಿದೆ. ವಾಹನಗಳು ಸಂಚಾರ ಮಾಡಲು ಯೋಗ್ಯ ರಸ್ತೆಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಇಲ್ಲಿಗೆ ಬರುವ ಭಕ್ತರದಾಗಿದೆ.
● ಚೇತನ್ ಪ್ರಸಾದ್