Advertisement

ಇಲಾಖೆಯಲ್ಲಿ ಲಿಂಗ ತಾರತಮ್ಯವಿಲ್ಲ

08:46 AM Nov 01, 2017 | Team Udayavani |

ಬೆಂಗಳೂರು: ಪೊಲೀಸ್‌ ಇಲಾಖೆಯಲ್ಲಿ ಮಹಿಳೆಯರು, ಪುರುಷರು ಎಂಬ ಬೇಧವಿಲ್ಲ. ಎಲ್ಲರೂ ಒಂದೇ. ಉತ್ತಮ ಕೆಲಸ ಮಾಡಬೇಕು ಅಷ್ಟೇ ಎಂದು ನೂತನ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ಎನ್‌. ರಾಜು ಹೇಳಿದರು.

Advertisement

ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮ ಸಂವಾದ ನಡೆಸಿದ ಅವರು, ನಾನು ಎಂದಿಗೂ ಮಹಿಳಾ ಅಧಿಕಾರಿ ಎಂದು ಕಾಣಿಸಿ
ಕೊಳ್ಳುವುದಿಲ್ಲ. ಬದಲಾಗಿ ಒಬ್ಬ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತೇನೆ. ಹೀಗಾಗಿ ಇಲಾಖೆಯಲ್ಲಿ ಪುರುಷರು ಮತ್ತು
ಮಹಿಳೆಯರು ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ, ನಾನೊಬ್ಬ ಮಹಿಳೆ ಎಂಬುದನ್ನು ಒಪ್ಪುತ್ತೇನೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಬಗ್ಗೆ ಕ್ರಮಕೈಗೊಳ್ಳಬೇಕಿದೆ. ಅಲ್ಲದೇ ಪೊಲೀಸ್‌ ಠಾಣೆಗಳನ್ನು ಮಹಿಳಾ ಸ್ನೇಹಿಯಾಗಿ ಮಾಡಲು ಇಲಾಖೆ ವರ್ಷಗಳ ಕಾಲ ಶ್ರಮಿಸಿದೆ. ಆದರೂ ಇದನ್ನು ಇನ್ನಷ್ಟು ಉನ್ನತಿಕರಿಸಬೇಕಿದೆ. ಠಾಣೆಗೆ ಬರುವ ಮಹಿಳೆಯರು ಮಾತ್ರವಲ್ಲ ಅಲ್ಲಿನ ಸಿಬ್ಬಂದಿಗೂ ಶೌಚಾಲಯ ಸೇರಿ ಉತ್ತಮ ಸೌಲಭ್ಯ ನೀಡಲು ಕ್ರಮಕೈಗೊಳ್ಳುತ್ತೇನೆ ಎಂದರು. ಮಹಿಳೆಯರು ಪೊಲೀಸ್‌ ಠಾಣೆಗೆ ಬರಲು ಈಗಲೂ ಹಿಂಜರಿಯುತ್ತಾರೆ. ಹಾಗಾಗಿ ಹೆಚ್ಚಿನ ಮಹಿಳಾ ಸಿಬ್ಬಂದಿ ನೇಮಕ ಮಾಡಲು ಸೂಚಿಸುತ್ತೇನೆ ಎಂದರು.

ಕಾನೂನು ಸುವ್ಯವಸ್ಥೆಯೇ ದೊಡ್ಡ ಸವಾಲು:
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟಿಪ್ಪು ಜಯಂತಿ ಮತ್ತು ಚುನಾವಣೆ ಎದುರಾಗುತ್ತಿದೆ. ಇವುಗಳನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ. ಎಲ್ಲ ವಿಭಾಗದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭದ್ರತೆಯ ಸವಾಲು ಎದುರಿಸುತ್ತೇನೆ ಎಂದರು.

ಇನ್ನೂ 15 ವರ್ಷ ಕನ್ನಡಿಗರಿಗಿಲ್ಲ ಅವಕಾಶ
ಪೊಲೀಸ್‌ ಇಲಾಖೆ ಸರ್ವೋಚ್ಚ ಹುದ್ದೆ ಅಲಂಕರಿಸುವ “ಭಾಗ್ಯ’ 15 ವರ್ಷಗಳ ಕಾಲ ಕನ್ನಡಿಗರಿಗಿಲ್ಲ. ಸೇವಾಹಿರಿತನದ ಆಧಾರದ ಮೇಲೆ ನೀಲಮಣಿರಾಜು ಅವರಿಗೆ ಡಿಜಿ ಹುದ್ದೆ ನೀಡಿರುವುದರಿಂದ ಕಿಶೋರ್‌ ಚಂದ್ರ ಅವರಿಗೆ ಕೈ ತಪ್ಪಿದೆ. ಆದರೆ, 1985ರಿಂದ ಇದುವರೆಗಿನ ಐಪಿಎಸ್‌ ಅಧಿಕಾರಿಗಳ ಪಟ್ಟಿ ಗಮನಿಸಿದಾಗ ರಾಜ್ಯದ ಯಾವ ಅಧಿಕಾರಿಗೂ ಈ ಪಟ್ಟ ಸಿಗುವುದಿಲ್ಲ. ಆದರೆ. 1996ನೇ ಬ್ಯಾಚ್‌ ಐಪಿಎಸ್‌ ಅಧಿಕಾರಿ ಹಾಗೂ ಸದ್ಯ ನಗರ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹಿತೇಂದ್ರ ಅವರಿಗೆ ಈ ಹುದ್ದೆ
ಸಿಗುವ ಸಾಧ್ಯತೆಯಿದೆ. ಅದು ಇನ್ನೂ 15 ವರ್ಷಗಳ ನಂತರ.

ಕಿಶೋರ್‌ ಚಂದ್ರ, ಎಂ.ಎನ್‌.ರೆಡ್ಡಿ ಗೈರು 
ಡಿಜಿ-ಐಜಿಪಿ ಹುದ್ದೆ ರೇಸ್‌ನಲ್ಲಿದ್ದ ಹಿರಿಯ ಐಪಿಎಸ್‌ ಅಧಿಕಾರಿಗಳಾದ ಕಿಶೋರ್‌ ಚಂದ್ರ ಮತ್ತು ಎಂ.ಎನ್‌.ರೆಡ್ಡಿ ಅವರು ನೂತನ ಪೊಲೀಸ್‌ ಮಹಾನಿರ್ದೇಶಕರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಅಚ್ಚರಿ ಮೂಡಿಸಿದರು. ಕಳೆದೆರಡು ಬಾರಿಯೂ ಪೊಲೀಸ್‌ ಇಲಾಖೆಯ ಸರ್ವೋಚ್ಚ ಹುದ್ದೆ ರೇಸ್‌ನಲ್ಲಿ ಈ ಇಬ್ಬರೂ ಅಧಿಕಾರಿಗಳ ಹೆಸರು ಕೇಳಿ ಬಂದಿತ್ತು. ಇಬ್ಬರ ಪರವಾಗಿ ಕೆಲ ರಾಜಕೀಯ ಮುಖಂಡರು ಮತ್ತು ಸಮುದಾಯದ ನಾಯಕರು, ಸ್ವಾಮೀಜಿಗಳು ಒತ್ತಡ ಹಾಕಿದ್ದರು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next