Advertisement

ಯುವಜನತೆ ಆಮಿಷಗಳಿಗೆ ಮತ ಮಾರಿಕೊಂಡರೆ ಭವಿಷ್ಯವಿಲ್ಲ 

11:43 AM Jul 30, 2017 | |

ಮೈಸೂರು: ಯುವಜನತೆ ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಮತಗಳನ್ನು ಮಾರಾಟ ಮಾಡಿಕೊಂಡಲ್ಲಿ, ಮುಂದೆ ತಮ್ಮ ಭವಿಷ್ಯ ಕೆಟ್ಟದಾಗಿರುತ್ತದೆ ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಎಚ್ಚರಿಕೆ ನೀಡಿದರು. 

Advertisement

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಶೈಕ್ಷಣಿಕ ವರ್ಷದ ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದ ಅವರು, ಯುವ ಜನರು ದುಡಿಯುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಬಹುದು ಎಂದು ಹೇಳಿದರು.

ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಸಮಾನತೆಯ ಆಶಯ ಹೊಂದಿರುವ ಸಂವಿಧಾನವನ್ನು ಹೊಂದಿದ್ದು, ಜೊತೆಗೆ 130 ಕೋಟಿ ಜನಸಂಖ್ಯೆ ಮತ್ತು ಅಪಾರ ನೈಸರ್ಗಿಕ ಸಂಪತ್ತು ಹೊಂದಿದ್ದರೂ ಭಾರತ ಇಂದಿಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ.

ಹೀಗಾಗಿ ಇಂದಿನ ಯುವಜನತೆ ತಮ್ಮಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಮನಸ್ಥಿತಿಯೊಂದಿಗೆ ದುಡಿಯುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬಹುದು. ಅಲ್ಲದೆ ದೇಶವನ್ನು ಕಟ್ಟುವಂತಹ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿ ಯುವಜನರ ಮೇಲಿದೆ ಎಂದರು.

ಜೀವನದಲ್ಲಿ ಯಾರೊಬ್ಬರೂ ಹುಟ್ಟಿನಿಂದ ದಡ್ಡರಾಗಿರುವುದಿಲ್ಲ. ಬದಲಿಗೆ ಆಸಕ್ತಿ, ಪ್ರಯತ್ನ ಹಾಗೂ ಪರಿಶ್ರಮದಿಂದ ಬುದ್ಧಿವಂತರಾಗಿ ಬದುಕು ಕಟ್ಟಿಕೊಳ್ಳಬಹುದು. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ಪ್ರಾಮಾಣಿಕ ಪ್ರಯತ್ನದಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಬಹುದಾಗಿದ್ದು, ದೇಶವನ್ನು ಅಭಿವೃದ್ಧಿ ಪಥದತ್ತಲೂ ಕೊಂಡೊಯ್ಯಬಹುದು.

Advertisement

ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳ ಓದಿಗೆ ಪೂರಕವಾಗಿರಲಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿಯೂ ಪಾಲ್ಗೊಳ್ಳಬೇಕು ಎಂದು ಹೇಳಿದರು. ಸಮಾರಂಭ ಉದ್ಘಾಟಿಸಿದ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಹುಟ್ಟಿನಿಂದ ಯಾವುದೇ ವ್ಯಕ್ತಿಯ ಭ‌ವಿಷ್ಯ ನಿರ್ಧರಿಸಲು ಸಾಧ್ಯವಿಲ್ಲ, ವಿದ್ಯೆಗೆ ತಾರತಮ್ಯವೂ ಇಲ್ಲ.

ಹೀಗಾಗಿ ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದ್ದು, ಆ ಮೂಲಕ ಸತತ ಪರಿಶ್ರಮ, ಶ್ರದ್ಧೆಯಿಂದ ವಿದ್ಯಾವಂತರಾಗಿ ಭವಿಷ್ಯ ರೂಪಿಸಿಕೊಳ್ಳಬೇಕಿದೆ. ಆದರೆ, ಯಾವುದೇ ಶಿಕ್ಷಣ ಉದ್ಯೋಗ ನೀಡುವ ಮಾರುಕಟ್ಟೆಯಲ್ಲ, ಬದಲಿಗೆ ವ್ಯಕ್ತಿತ್ವ ರೂಪಿಸುವುದೇ ಶಿಕ್ಷಣದ ಮುಖ್ಯ ಆಶಯ.

ಹೀಗಾಗಿ ಜೀವನದಲ್ಲಿ ಕಡಿಮೆ ಅವಧಿಯವರೆಗೂ ಬದುಕಿದರು ಸದಾ ನೆನಪಿನಲ್ಲಿರುವಂತೆ ಪ್ರಜ್ವಲಿಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಸ್‌.ಮರೀಗೌಡ, ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷ ಎಸ್‌.ಎನ್‌.ಲಕ್ಷ್ಮೀನಾರಾಯಣ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next