Advertisement

ಲಿಂಗಾಯತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ

12:13 PM May 17, 2022 | Team Udayavani |

ಬೆಳಗಾವಿ: ಲಿಂಗಾಯತರೆಲ್ಲ ಸಂಘಟಿತರಾಗದಿದ್ದರೆ ಅವರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ. ಒಳಪಂಗಡಗಳೆಲ್ಲ ಭಿನ್ನಮತ ಮರೆತು ಸಂಘಟಿತರಾಗಲೇಬೇಕಾದ ಕಾಲ ಬಂದಿದೆ ಎಂದು ಗದುಗಿನ ಶ್ರೀ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ| ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.

Advertisement

ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ರಾಷ್ಟೀಯ ಬಸವ ಸೇನೆ ಜಿಲ್ಲಾ ಘಟಕ ಸಂಯುಕ್ತವಾಗಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಬಸವ ದರ್ಶನ ಪ್ರವಚನ ಮಂಗಲ ಸಮಾರಂಭದಲ್ಲಿ ಮಾತನಾಡಿದ ಅವರು, ಲಿಂಗಾಯಿತ ಸಮಾಜದ ಸಂಘಟನೆ ರಾಜಕಾರಣಿಗಳಿಂದ, ರಾಜಕೀಯ ವ್ಯಕ್ತಿಗಳಿಂದ ಮತ್ತು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ. ರಾಜಕೀಯೇತರ ವ್ಯಕ್ತಿಗಳಿಂದ ಮಾತ್ರ ಅದು ಸಾಧ್ಯ ಎಂದರು.

ರಾಜಕಾರಣಿಗಳು ಸಂಘಟನೆಗೆ ಬಂದರೆ ಸಂಘಟನೆ ರಾಜಕೀಯಕ್ಕೆ ಬಳಕೆಯಾಗುತ್ತದೆ. ಅದಾಗಬಾರದು. ಲಿಂಗಾಯತ ಸಂಘಟನೆಯಿಂದ ರಾಜಕೀಯವನ್ನು, ರಾಜಕಾರಣಿಗಳನ್ನು ದೂರ ಇಡಬೇಕು. ಆಡಳಿತ ನಡೆಸುವವರು ಲಿಂಗಾಯಿತರನ್ನೇ ಕೇಳಿ ಆಡಳಿತ ನಡೆಸುವಂತಾಗಬೇಕು. ಲಿಂಗಾಯತರು ಕಿಂಗ್‌ ಆಗುವುದಕ್ಕಿಂತ ಕಿಂಗ್‌ ಮೇಕರ್‌ ಆಗಬೇಕು. ಈ ನಿಟ್ಟಿನಲ್ಲಿ ಲಿಂಗಾಯತರು ಚಿಂತನೆ ಮಾಡಬೇಕು ಎಂದರು.

ಯಾರನ್ನೇ ಆಗಲಿ ದ್ವೇಷಿಸುವುದು ಬೇಡ. ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಬೇಕು . ಪರಧರ್ಮದ ಬಗ್ಗೆ ಸಹಿಷ್ಣುತೆ ಬೇಕು. ಪರರನ್ನು ಮತ್ತು ಪರರ ಧರ್ಮವನ್ನು ದ್ವೇಷ ಮಾಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಶ್ರೀಗಳು ಹೇಳಿದರು.

ವೀರಶೈವ ಹೆಸರಿಟ್ಟು ಲಿಂಗಾಯಿತ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ. ವೀರಶೈವ ಅದೊಂದು ಪಂಗಡ. ವೀರಶೈವರನ್ನು ದೂರವಿಟ್ಟಿಲ್ಲ. ವೀರಶೈವ ಮಹಾಸಭೆಯ ದ್ವಂದ್ವ ನೀತಿಯಿಂದ ಸಂಘಟನೆಗೆ ಕಷ್ಟವಾಗುತ್ತಿದೆ. ಒಂದು ಕಡೆ ತಾವು ಹಿಂದೂಗಳೆಂದು ಹೇಳಿಕೊಳ್ಳುವ ವೀರಶೈವರು ಮತ್ತೂಂದು ಕಡೆ ಪ್ರತ್ಯೆಕ ಧರ್ಮ, ಸ್ವತಂತ್ರ ಧರ್ಮ ಬೇಕೆಂದು ಬೇಡಿಕೆ ಮಂಡಿಸುವುದು ಸಾಧ್ಯವಿಲ್ಲ. ಅವೈದಿಕ ಧರ್ಮ ಲಿಂಗಾಯತ. ಅದಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು. ಇಂದಲ್ಲ ನಾಳೆ ಸಿಕ್ಕೇ ಸಿಗುತ್ತದೆ. ಭವಿಷ್ಯದ ದೃಷ್ಟಿಕೋನ ಬಹಳ ಮುಖ್ಯ. ಅದಕ್ಕಾಗಿ ಹೋರಾಟ ಅಗತ್ಯ, ಸಂಘಟನೆ ಅಗತ್ಯ ಎಂದು ಹೇಳಿದರು.

Advertisement

ಬಸವಪರ ಲಿಂಗಾಯತ ಮಠಗಳ ಒಕ್ಕೂಟ ರಚನೆ ಆಗಿದೆ. 150 ಮಠಗಳ ಮಠಾಧೀಶರು ಸ್ವಯಂ ಪ್ರೇರಣೆಯಿಂದ ಇದರಲ್ಲಿ ಸೇರ್ಪಡೆಯಾಗಿದ್ದಾರೆ. ಇದೊಂದು ಸಕಾರಾತ್ಮಕ ವಾತಾವರಣ. ನೂರಾರು ವರ್ಷಗಳ ಹಿಂದೆ ಧರ್ಮ ಸಂರಕ್ಷಣೆ ಮತ್ತು ಧರ್ಮ ಜಾಗೃತಿಗಾಗಿ ಗದುಗಿನ ತೋಂಟದ ಸಿದ್ದಲಿಂಗ ಶಿವಯೋಗಿಗಳಿಂದಲೇ ಲಿಂಗಾಯತ ಮಠಗಳ ಪರಂಪರೆ ಪ್ರಾರಂಭವಾಯಿತು. ಅದನ್ನು ನಾವೀಗ ಮುನ್ನಡೆಸುತ್ತಿದ್ದೇವೆ ಎಂದರು.

ಸಾನ್ನಿಧ್ಯ ವಹಿಸಿದ್ದ ಇಳಕಲ್ಲಿನ ಚಿತ್ತರಗಿ ಸಂಸ್ಥಾನಮಠದ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಲಿಂಗಾಯತರು ಮಾನಸಿಕ ಗುಲಾಮಗಿರಿಯಿಂದ ಹೊರಬರಬೇಕು. ಜ್ಯೋತಿಷ್ಯದ ಗುಲಾಮಗಿರಿಯಿಂದ ಹೊರಬರಬೇಕು. ಪಂಚಾಂಗದ ಗುಲಾಮಗಿರಿಯಿಂದ ಹೊರಬರಬೇಕು. ಜ್ಯೊತಿಷಿಗಳು ದಾರ್ಶನಿಕರಲ್ಲ. ಪಂಚಾಂಗ ಧರ್ಮಗ್ರಂಥವಲ್ಲ. ಬಸವಣ್ಣನೇ ಧರ್ಮಗುರು. ವಚನ ಸಾಹಿತ್ಯವೇ ಧರ್ಮಗ್ರಂಥ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟೀಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌ ಎಂ ಜಾಮದಾರ್‌ ಮಾತನಾಡಿ ಬಸವಣ್ಣನನ್ನು ಒಪ್ಪದವರು ಲಿಂಗಾಯತರೇ ಅಲ್ಲ. ಲಿಂಗಾಯತರಿಗೆ ಬಸವ ಜಯಂತಿ ದೊಡ್ಡ ಹಬ್ಬ. ದೇವಸ್ಥಾನದ ಸಂಸ್ಕೃತಿಯನ್ನು ತಿರಸ್ಕರಿಸಿದ ಧರ್ಮ ಲಿಂಗಾಯತ. ತೀರ್ಥಯಾತ್ರೆಯನ್ನು ಮತ್ತು ಉಪವಾಸ ವನವಾಸಗಳನ್ನು ಬೇಡವೆಂದು ತಿರಸ್ಕರಿಸಿದ ಧರ್ಮ ಲಿಂಗಾಯತ. ವಿವಿಧ ಪಂಗಡಗಳಲ್ಲಿ ಹಂಚಿ ಹೋದವರನ್ನು ಮತ್ತೆ ಒಂದುಗೂಡಿಸುವ ದಿನವೇ ಬಸವ ಜಯಂತಿ ಇದನ್ನು ಲಿಂಗಾಯತರೆಲ್ಲ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ವಾಗ್ದೇವಿ ತಾಯಿಯವರು ಮಾತನಾಡಿ, ವಿವಿಧ ಪಂಗಡಗಳಲ್ಲಿರುವ ಸಮಾಜದ ಹಿರಿಯರು ತಮ್ಮ ಹಮ್ಮು ಬಿಮ್ಮುಗಳನ್ನು ಬಿಟ್ಟಾಗ ಸಮಾಜ ಒಂದಾಗುತ್ತದೆ ಮತ್ತು ಬಲಿಷ್ಠವಾಗುತ್ತದೆ ಎಂದರು. ಅಥಣಿಯ ಮೋಟಗಿಮಠದ ಪ್ರಭುಚನ್ನಬಸವ ಸ್ವಾಮಿಗಳು ಮಾತನಾಡಿ, 19 ನೇ ಶತಮಾನದ ಸೂಫಿ ಕವಿ ಬಸವಣ್ಣನವರನ್ನು ಹೊಗಳಿ ಕವನ ರಚಿಸಿ ಹಾಡಿದ್ದನ್ನು ನೆನೆದು ಜಗತ್ತೇ ಬಸವಣ್ಣನನ್ನು ಕೊಂಡಾಡಿದೆ ಎಂದರು.

ಬಸವ ದರ್ಶನ ಪ್ರವಚನದಲ್ಲಿ 11ದಿನಗಳ ಕಾಲ ಭಾಗವಹಿಸಿದ ಕುಷ್ಟಗಿಯ ಶಾಂತಾನಂದ ಗವಾಯಿಗಳು ಮತ್ತು ಚಳ್ಳಕೆರೆಯ ತಬಲಾ ವಾದಕ ಜ್ಞಾನಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರಿನ ಡಾ ಗುರುರಾಜ್‌ ಗೋಶೆಟ್ಟಿ ಅವರು ರಚಿಸಿದ ಸತ್ಸಂಗ ಗ್ರಂಥವನ್ನು ಡಾ.ತೋಂಟದ ಸಿದ್ಧರಾಮ ಸ್ವಾಮಿಗಳು ಲೋಕಾರ್ಪಣೆಗೊಳಿಸಿದರು. ಮಮ್ಮಿಗಟ್ಟಿಯ ಡಾ. ಬಸವಾನಂದ ಸ್ವಾಮಿಗಳು ಮಂಗಲ ನುಡಿಗಳನ್ನಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರದ ಪ್ರಮುಖ ಬಡಾವಣೆಗಳಲ್ಲಿ ಡಾ ಅಲ್ಲಮಪ್ರಭು ಸ್ವಾಮೀಜಿ ನೇತೃತ್ವದಲ್ಲಿ 11 ದಿನಗಳ ಕಾಲ ಧರ್ಮ ಜಾಗೃತಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಂತಿಮ ದಿನ ಮಹಾಂತೇಶ ನಗರದ ಮಹಾಂತ ಭವನದಿಂದ ಶಿವಬಸವನಗರದಲ್ಲಿರುವ ನಾಗನೂರ ರುದ್ರಾಕ್ಷಿ ಮಠದವರೆಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೆರವಣಿಗೆಯಲ್ಲಿ ಕಾರಂಜಿ ಮಠದ ಕಿರಿಯ ಶ್ರೀಗಳಾದ ಡಾ. ಶಿವಯೋಗಿ ದೇವರು, ಕಮತೇನಟ್ಟಿಯ ಅಲ್ಲಮಪ್ರಭು ಮಠದ ಗುರುದೇವ ದೇವರು, ಚನ್ನಮ್ಮನ ಕಿತ್ತೂರಿನ ಓಂ ಗುರೂಜಿ, ವಿಜಯ ಮಹಾಂತ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಹಳಂಗಳಿಯ ಶಿವಾನಂದ ದೇವರು, ಕುಮುದಿನಿ ತಾಯಿ, ಶಾಸಕರಾದ ಲಕ್ಷ್ಮೀ ಹೆಬ್ಟಾಳಕರ, ಅನಿಲ ಬೆನಕೆ, ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಸುಲ್ತಾನ್‌ ಪುರ,ಲಿಂಗಾಯತ ಸಂಘಟನೆಯ ಪದಾಧಿಕಾರಿಗಳಾದ ಎಸ್‌ ಎಚ್‌ ಸಿದ್ನಾಳ, ಪ್ರೇಮಕ್ಕ ಅಂಗಡಿ, ಮಾಜಿ ನಗರ ಸೇವಕಿ ಸರಳಾ ಹೇರೇಕರ, ವಿಜಯಲಕ್ಷ್ಮೀ  ಪುಟ್ಟಿ ಮತ್ತು ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಂಕರ ಗುಡುಸ ಉಪಸ್ಥಿತರಿದ್ದರು.

ನಯನಾ ಗಿರಿಗೌಡರ ಅವರ ವಚನ ಹಾಡಿದರು. ಸಿ.ಜಿ.ಮಠಪತಿ ನಿರ್ವಹಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶಿ ಸಿ.ಎಂ. ಬೂದಿಹಾಳ ವಂದಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next