Advertisement

ಕಾಪು ತಾಲೂಕಾಗಿ ವರ್ಷ ಕಳೆದರೂ ಪೂರ್ಣಾವಧಿ ತಹಶೀಲ್ದಾರ್‌ ಇಲ್ಲ

06:56 PM Jan 28, 2019 | Harsha Rao |

ಕಾಪು: 2017ರ ಬಜೆಟ್‌ನಲ್ಲಿ ಘೋಷಣೆ ಯಾಗಿ, 2018ರ ಫೆಬ್ರವರಿ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಲೂಕು ಪೂರ್ಣಾವಧಿ ತಹಶೀಲ್ದಾರ್‌ ಇಲ್ಲದೇ ಬಡವಾಗಿದೆ. ಉದ್ಘಾಟನೆ ಗೊಂಡು ವರ್ಷ ಪೂರ್ಣಗೊಳಿಸುವ ಮುನ್ನವೇ ಇಬ್ಬರು ತಹಶೀಲ್ದಾರರು ಬಂದು ಹೋಗಿದ್ದು, ಮತ್ತೂಬ್ಬರು 3ನೇ ಬಾರಿಗೆ ಉಡುಪಿಯ ಜತೆಗೆ ಹೆಚ್ಚುವರಿಯಾಗಿ ಕಾಪು ತಾಲೂಕಿನ ಜವಾಬ್ದಾರಿ ಯನ್ನು ಹೊತ್ತುಕೊಂಡಿದ್ದಾರೆ.

Advertisement

ಉಡುಪಿ ತಾಲೂಕಿನೊಂದಿಗೆ ಸೇರಿದ್ದ ಕಾಪು ಹೋಬಳಿ ಮತ್ತು ಅದರ ವ್ಯಾಪ್ತಿಯ 30 ಗ್ರಾಮಗಳನ್ನು ಸೇರಿಸಿಕೊಂಡು ರಚಿಸಲಾದ ಕಾಪು ತಾಲೂಕಿನಲ್ಲಿ ಪೂರ್ಣಕಾಲಿಕ ತಹಶೀಲ್ದಾರ್‌ ಇಲ್ಲದಿರುವ ಕಾರಣ  ಉಡುಪಿ ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಅವರು  ಪ್ರಭಾರ ತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಮೂವರಿಂದ ಕರ್ತವ್ಯ ನಿರ್ವಹಣೆ 2018ರ ಫೆ. 14ರಂದು ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಅಧಿಕೃತವಾಗಿ ಉದ್ಘಾಟನೆಗೊಂಡು, ಘೋಷಣೆಯಾಗಿದ್ದ ಕಾಪು ತಾಲೂಕಿನಲ್ಲಿ ಈಗಾಗಲೇ ಇಬ್ಬರು ತಹಶೀಲ್ದಾರರು ಕರ್ತವ್ಯ ನಿರ್ವಹಿಸಿ, ನಿರ್ಗಮಿಸಿದ್ದಾರೆ. ಅವರ ನಡುವೆ ಪ್ರದೀಪ್‌ ಕುಡೇìಕರ್‌ ಆಗೊಮ್ಮೆ,  3 ಬಾರಿ ಪ್ರಭಾರ ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ.  

ತಾಲೂಕು ಉದ್ಘಾಟನೆ ಸಂದರ್ಭ ಉಡುಪಿ ತಹಶೀಲ್ದಾರ್‌ ಆಗಿದ್ದ ಪ್ರದೀಪ್‌ ಕುಡೇì ಕರ್‌ ಅವರು ಕಾಪು ತಹಶೀಲ್ದಾರ್‌ ಆಗಿ ಪ್ರಭಾರ ಕಾರ್ಯ ನಿರ್ವಹಿಸಿದ್ದರು. ಅನಂತರ ಮಾರ್ಚ್‌ನಿಂದ ಮೇ ತಿಂಗಳ ವರೆಗೆ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಅವರು ತಹಶೀಲ್ದಾರ್‌ ಆಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಮತ್ತೆ ಪ್ರದೀಪ್‌ ಕುಡೇìಕರ್‌ ಅವರು ಜವಾಬ್ದಾರಿ ವಹಿಸಿಕೊಂಡಿದ್ದು, ಜುಲೈಯಿಂದ ಸೆಪ್ಟಂಬರ್‌ವರೆಗೆ ಗುರುಸಿದ್ಧಯ್ಯ ಅವರು ಪ್ರೊಬೆಶನರಿ ಹುದ್ದೆಯಲ್ಲಿ ತಹಶೀಲ್ದಾರ್‌ ಆಗಿ ಕರ್ತವ್ಯ ನಿರ್ವಹಿಸಿದ್ದರು. ಗುರುಸಿದ್ಧಯ್ಯ ಅವರು ವರ್ಗಾವಣೆಗೊಂಡ ಬಳಿಕ  4 ತಿಂಗಳಿನಿಂದ ಮತ್ತೆ ಪ್ರದೀಪ್‌ ಕುಡೇìಕರ್‌ ಪ್ರಭಾರ ಹೊಣೆಯಲ್ಲಿದ್ದಾರೆ.

ತಾಲೂಕು ಕಚೇರಿಯಲ್ಲಿ ಲಭ್ಯ ಸೇವೆಗಳು
ಕಾಪು ತಾಲೂಕು ಕಚೇರಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಕಾಲ, ಅಟಲ್‌ ಜೀ ಜನಸ್ನೇಹಿ ಸಹಿತವಾದ ವಿವಿಧ ನಾಗರಿಕ ಸೇವೆಗಳು, ರೇಷನ್‌ ಕಾರ್ಡ್‌, ವಂಶ ವೃಕ್ಷ, ಕೃಷಿ ಕುಟುಂಬ ದೃಢಪತ್ರ, ಕೃಷಿಕ ದೃಢಪತ್ರ, ಜಾತಿ ಪ್ರಮಾಣ ಪತ್ರ, ನಿರಾಕ್ಷೇಪಣ ಪತ್ರಗಳು, ವಿವಾದಾಸ್ಪದ ಪ್ರಕರಣಗಳು, ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ಕರ್ತವ್ಯ ನಿರ್ವಹಣೆ, ಪ್ರಾಕೃತಿಕ ವಿಕೋಪದ ನಿರ್ವಹಣೆ, ನ್ಯಾಯಾಲಯ ವ್ಯಾಜ್ಯ, ವಿವಿಧ ಪಿಂಚಣಿ ವೇತನಗಳು, ಅಕ್ರಮ – ಸಕ್ರಮಗಳು, ಫಾರ್ಮ್ ನಂ. 57, 94 ಸಿ, 94 ಸಿಸಿ, ಭೂ ಪರಿವರ್ತನೆ, ಜಮೀನು ಮಂಜೂರಾತಿ, ಜಮೀನು ಕಾಯ್ದಿರಿಸುವಿಕೆ, ಆಆರ್‌ಟಿ ಪ್ರಕರಣ ಗಳು, ಭೂ ಸ್ವಾಧೀನ, ಪಿಟಿಸಿಎಲ್‌ ನಿರಾಕ್ಷೇಪಣ ಪತ್ರಗಳು, ಎಸ್ಸಿ – ಎಸ್ಟಿ ಭೂ ಮಂಜೂರಾತಿ ಹಾಗೂ ವಿವಿಧ ಚುನಾವಣಾ ಕರ್ತವ್ಯ (ಸ್ಥಳೀಯಾಡಳಿತ ಸಂಸ್ಥೆಗಳು ಮತ್ತು ವಿಧಾನಸಭೆ, ವಿಧಾನ ಪರಿಷತ್‌, ಲೋಕಸಭೆ) ನಿರ್ವಹಣೆ ಕೂಡಾ  ನಡೆಯಲಿದೆ.

ಉಡುಪಿಯ ಅವಲಂಬನೆೆ
ಕಂದಾಯ ಮತ್ತು ಅದಕ್ಕೆ ಸಂಬಂಧಪಟ್ಟ ಪೂರ್ಣ ಇಲಾಖೆ ಕಾಪುವಿಗೆ ಬಂದಿದ್ದರೂ ಅದನ್ನು ಜನರಿಗೆ ನೀಡಬೇಕಾದ ಅಧಿಕಾರಿ ಇಲ್ಲ. ತಾಲೂಕು ಕಚೇರಿಯಲ್ಲೇ ಸಿಗಬೇಕಾದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಿರಾಕ್ಷೇಪಣ ಪತ್ರಗಳು, ಯಾವುದೇ ಪ್ರಕರಣದಲ್ಲೂ ಪೊಲೀಸ್‌ ಇಲಾಖೆಯೊಂದಿಗೆ ಕೈ ಜೋಡಿಸಬೇಕಾದ ತಾಲೂಕು ದಂಡಾಧಿಕಾರಿ ಸಹಿತವಾಗಿ ಇತರೆಲ್ಲ ಕಾರ್ಯ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಜನತೆ ಮತ್ತು ಪೊಲೀಸರು ಮತ್ತೆ ಮತ್ತೆ ಉಡುಪಿಗೆ ಹೋಗ ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಪೂರ್ಣಕಾಲಿಕ ತಹಶೀಲ್ದಾರ್‌ ಬಂದರೆ ಇವೆಲ್ಲ ಸೌಲಭ್ಯಗಳು ಮುಂದೆ ಕಾಪುವಿನಲ್ಲೇ ದೊರಕಲಿವೆ.

Advertisement

ಕಾಪು ತಾಲೂಕು ವ್ಯಾಪ್ತಿಯ ಗ್ರಾಮಗಳು
ಕಾಪು ಹೋಬಳಿಯ 16 ಗ್ರಾಮ ಪಂಚಾಯತ್‌ಗಳು ಮತ್ತು 1 ಪುರಸಭೆ ತಾಲೂಕಿನ ವ್ಯಾಪ್ತಿಗೆ ಬರಲಿವೆ. ಏಣಗುಡ್ಡೆ, ಮೂಡಬೆಟ್ಟು, ಕೋಟೆ, ಮಟ್ಟು, ಉಳಿಯಾರಗೋಳಿ, ಪಡು, ಮೂಳೂರು, ಮಲ್ಲಾರು, ಪಾಂಗಾಳ, ಇನ್ನಂಜೆ, ಕಟ್ಟಿಂಗೇರಿ, ಶಿರ್ವ, ಬೆಳ್ಳೆ, ಕುರ್ಕಾಲು, ಹೇರೂರು, ಮಜೂರು, ಪಾದೂರು, ಸಾಂತೂರು, ಪಿಲಾರು, ಕಳತ್ತೂರು, ಕುತ್ಯಾರು, ನಡಾÕಲು, ಪಾದೆಬೆಟ್ಟು, ಹೆಜಮಾಡಿ, ನಂದಿಕೂರು, ಪಲಿಮಾರು, ತೆಂಕ, ಬಡಾ, ಎಲ್ಲೂರು, ಬೆಳಪು ಗ್ರಾಮಗಳು ಕಾಪು ತಾಲೂಕಿನ ವ್ಯಾಪ್ತಿಯಲ್ಲಿವೆ. 2011ರ ಜನಗಣತಿಯ ಪ್ರಕಾರ ತಾಲೂಕಿನ ಒಟ್ಟು ಜನಸಂಖ್ಯೆ 1,41,098.

ಇನ್ನೂ 15 ಹುದ್ದೆಗಳು ಖಾಲಿ
ಉಡುಪಿ ತಾಲೂಕಿನಿಂದ ಕಾಪು ಹೋಬಳಿ ಬೇರ್ಪಟ್ಟಾಗ ಅಲ್ಲಿಂದ ಓರ್ವ ಸಿಬಂದಿ ಕಾಪು ತಾ| ನಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಒಬ್ಬ ಮತ್ತು ಗ್ರಾಮ ಕರಣಿಕರಾಗಿದ್ದ 6 ಮಂದಿಯನ್ನು ತಾಲೂಕು ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ತಾಲೂಕಿಗೆ ಮಂಜೂರಾಗಿದ್ದ 2 ತಹಶೀಲ್ದಾರ್‌ ಹುದ್ದೆ (ಗ್ರೇಡ್‌ -1, ಗ್ರೇಡ್‌-2) 2 ಕೂಡಾ ಖಾಲಿಯಾಗಿದೆ. 2 ಡೆಪ್ಯುಟಿ ತಹಶೀಲ್ದಾರ್‌ ಹುದ್ದೆಗಳ ಪೈಕಿ 1 ಭರ್ತಿಯಿದೆ. ಉಳಿದಂತೆ ಪ್ರಥಮ ದರ್ಜೆ ಸಹಾಯಕ – 3ರಲ್ಲಿ 1 ಹುದ್ದೆ ಭರ್ತಿ, ದ್ವಿತೀಯ ದರ್ಜೆ ಸಹಾಯಕ ಹುದ್ದೆ – 4ರಲ್ಲಿ 1 ಭರ್ತಿ, ಡಿ ಗ್ರೂಪ್‌ -1, ವಾಹನ ಚಾಲಕ -1, ಭೂಮಿ ವಿಭಾಗ – 5 ಹುದ್ದೆ ಇನ್ನೂ ಖಾಲಿಯಿದ್ದು, ತಹಶೀಲ್ದಾರ್‌ ಸೇರಿದಂತೆ 15 ಹುದ್ದೆಗಳು ಇನ್ನೂ ಕೂಡಾ ಭರ್ತಿಯಾಗಿಲ್ಲ.

– ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next