Advertisement

ಗಣರಾಜ್ಯೋತ್ಸವ 55 ವರ್ಷಗಳ ಬಳಿಕ ವಿದೇಶಿ ಮುಖ್ಯ ಅತಿಥಿ ಇಲ್ಲ

01:31 AM Jan 16, 2021 | Team Udayavani |

ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಂಗ್ಲೆಂಡಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಬೇಕಿತ್ತು. ಆದರೆ ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಅವರು ಭಾರತ ಪ್ರವಾಸವನ್ನು ಮುಂದೂಡಿದ್ದಾರೆ. ಅವರ ಬದಲು ಸುರಿನಾಮ್‌ ಅಧ್ಯಕ್ಷ ಚಂದ್ರಿಕಾ ಪ್ರಸಾದ್‌ ಅವರನ್ನು ಆಹ್ವಾನಿಸಲಾಗುತ್ತದೆ ಎನ್ನಲಾಗಿತ್ತಾದರೂ ಬಳಿಕ ನಿರ್ಧಾರವನ್ನು ಕೈಬಿಡಲಾಯಿತು. ಹೀಗಾಗಿ ಕಳೆದ 55 ವರ್ಷಗಳಲ್ಲಿ ಇದೇ ಮೊದಲ ಬಾರಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಖ್ಯ ಅತಿಥಿ ಇಲ್ಲದೆ ನಡೆಯಲಿದೆ.

Advertisement

1966 ರ ಬಳಿಕ ಇಂತಹ ವಿದ್ಯಮಾನ ನಡೆಯುತ್ತಿದೆ. ಸಾಮಾನ್ಯವಾಗಿ ಗಣರಾಜ್ಯೋತ್ಸವದ ಅತಿಥಿಗಳನ್ನು ತಿಂಗಳುಗಳ ಮೊದಲೇ ಘೋಷಿಸಲಾಗುತ್ತದೆ. ಆದರೆ ಒಮ್ಮೆ ವಿಳಂಬವಾಗಿತ್ತು. 2019ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಲಾಗಿತ್ತು. ಕಡೆಯ ಕ್ಷಣದಲ್ಲಿ ಅವರು ಭಾರತ ಭೇಟಿ ರದ್ದುಗೊಳಿಸಿದ್ದರಿಂದಾಗಿ ದ. ಆಫ್ರಿಕಾದ ಅಧ್ಯಕ್ಷ ಸಿರಿಲ್‌ ರಾಮಾಫೋಸಾ ಅವರಿಗೆ ಆಹ್ವಾನ ನೀಡಲಾಗಿತ್ತು.

ಉದ್ದೇಶ ಏನು? :

ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿದೇಶಿ ನಾಯಕರನ್ನು ಆಹ್ವಾನಿಸುವುದರ ಮುಖ್ಯ ಉದ್ದೇಶ ಉಭಯ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸುವುದಾಗಿದೆ. ಈ ಸಂದರ್ಭದಲ್ಲಿ ಆಯೋಜಿಸಲಾಗುವ  ಪರೇಡ್‌ನ‌ಲ್ಲಿ ದೇಶದ ವೈವಿಧ್ಯಮಯ ಸಂಸ್ಕೃತಿ ಮತ್ತು ದೇಶದ ಸೇನಾ ಪಡೆಗಳ ಶಕ್ತಿ, ಸಾಮರ್ಥ್ಯವನ್ನು ಪ್ರದರ್ಶಿಸಲಾಗುತ್ತದೆ.

1950 ‌ ಜನವರಿ 26ರಂದು ನಡೆದ ಮೊದಲ ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿ ಇಂಡೋನೇಷ್ಯಾದ ಅಧ್ಯಕ್ಷ ಡಾ| ಸುಕನೊì ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. 1955ರಲ್ಲಿ ರಾಜ್‌ಪಥ್‌ನಲ್ಲಿ ಮೊದಲ ಪರೇಡ್‌ ನಡೆದಾಗ ಪಾಕಿಸ್ಥಾನದ ಗವರ್ನರ್‌ ಜನರಲ್‌ ಮಲಿಕ್‌ ಗುಲಾಮ್‌ ಮೊಹಮ್ಮದ್‌ ಅವರನ್ನು ಆಹ್ವಾನಿಸಲಾಯಿತು.

Advertisement

1950 ರಿಂದ 1954ರ ವರೆಗೆ ಪರೇಡ್‌ಗೆ ರಾಜ್‌ಪಥ್‌ ಕೇಂದ್ರವಾಗಿರಲಿಲ್ಲ. ಈ ವರ್ಷಗಳಲ್ಲಿ ಪರೇಡ್‌ ಅನ್ನು ಕ್ರಮವಾಗಿ ಇರ್ವಿನ್‌ ಕ್ರೀಡಾಂಗಣ (ಈಗ ರಾಷ್ಟ್ರೀಯ ಕ್ರೀಡಾಂಗಣ), ಕಿಂಗ್ಸ್‌ವೇ, ಕೆಂಪು ಕೋಟೆ ಮತ್ತು ರಾಮ್‌ಲೀಲಾ ಮೈದಾನದಲ್ಲಿ ನಡೆಸಲಾಗಿತ್ತು. 1955ರಿಂದ ಪರೇಡ್‌ಗೆ ರಾಜ್‌ಪಥ್‌ ಶಾಶ್ವತ ಸ್ಥಳವಾಯಿತು. ರಾಜಪಥದ ಹಳೆಯ ಹೆಸರು ಕಿಂಗ್ಸ್‌ವೇ.

ಗಣ್ಯರ ಪ್ರತಿನಿಧಿ ಹಾಜರ್‌! :

ಕೆಲವೊಮ್ಮೆ ಆಹ್ವಾನಿತ ರಾಷ್ಟ್ರದ ರಾಷ್ಟ್ರಪತಿ ಅಥವಾ ಸರಕಾರದ ಮುಖ್ಯಸ್ಥರು ತಮ್ಮ ಪ್ರತಿನಿಧಿಗಳನ್ನು ಕಳುಹಿಸಿದ ಸಂದರ್ಭಗಳಿವೆ. 1955ರಲ್ಲಿ ಪಾಕಿಸ್ಥಾನ ಮಾಡಿದಂತೆ ಗಣರಾಜ್ಯೋತ್ಸವ ಪರೇಡ್‌ಗೆ ಸಾಕ್ಷಿಯಾಗಲು ಗವರ್ನರ್‌-ಜನರಲ್‌ ಮಲಿಕ್‌ ಗುಲಾಮ್‌ ಮುಹಮ್ಮದ್‌ ಅವರನ್ನು ಕಳುಹಿಸಿದ್ದರು. ಹೀಗೆ 1957, 1958, 1959, 1964, 1965, 1977 ಮತ್ತು 1989ರಲ್ಲಿ ಗಣ್ಯರ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

3 ಬಾರಿ ವಿದೇಶಿ ಅತಿಥಿಗಳಿರಲಿಲ್ಲ :

ಈ ವರೆಗೆ ಒಟ್ಟು 3 ಬಾರಿ ಯಾವುದೇ ವಿದೇಶಿ ಅತಿಥಿಗಳನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿಲ್ಲ. ಅದು 1952, 1953 ಮತ್ತು 1966ರಲ್ಲಿ. ಇನ್ನು 4 ಗಣರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಇಬ್ಬರಿಗಿಂತ ಹೆಚ್ಚು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಅದರಲ್ಲೂ 2018ರಲ್ಲಿ 10 ಆಸಿಯಾನ್‌ ರಾಷ್ಟ್ರಗಳ ಹತ್ತು ಪ್ರಮುಖರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ಅತ್ಯುನ್ನತ ಗೌರವ :

ಭಾರತದ ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಮುಖ್ಯ ಅತಿಥಿಗೆ ಪ್ರೊಟೋಕಾಲ್‌ ಮೂಲಕ ದೇಶದ ಅತ್ಯುನ್ನತ ಗೌರವವನ್ನು ನೀಡಲಾಗುತ್ತದೆ. ಪರೇಡ್‌ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವುದು ವಿದೇಶಿ ಗಣ್ಯರಿಗೆ ಭಾರತ ಸರಕಾರ ನೀಡುವ ಅತ್ಯುನ್ನತ ಗೌರವವೆಂದು ಪರಿಗಣಿಸಲಾಗಿದೆ. ಪರೇಡ್‌ನೊಂದಿಗೆ ಪ್ರಧಾನಿ ಮತ್ತು ಆಹ್ವಾನಿತ ಮುಖ್ಯ ಅತಿಥಿಗಳ ನಡುವೆ ದ್ವಿಪ ಕ್ಷೀಯ ಶೃಂಗ ಸಭೆಯೂ ನಡೆಯುವುದರಿಂದ ಇದೊಂದು ಮಹತ್ವಪೂರ್ಣ ರಾಜತಾಂತ್ರಿಕ ಉಪಕ್ರಮ.

Advertisement

Udayavani is now on Telegram. Click here to join our channel and stay updated with the latest news.

Next