Advertisement

ಕೊಡಗಿನಲ್ಲಿ ಮಹಾಮಳೆ ಮುನ್ಸೂಚನೆ ಇಲ್ಲ : ಜಿಲ್ಲಾಧಿಕಾರಿ

12:44 AM May 01, 2019 | Team Udayavani |

ಮಡಿಕೇರಿ: ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರದಿಯಾಗಿದ್ದ ಮಾಹಿತಿ ಆಧರಿಸಿದಂತೆ ಈ ವರ್ಷವೂ ಸಹ ಕಳೆದ ವರ್ಷದಂತೆ ಕೇರಳ ಮಾದರಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮರುಕಳಿಸಲಿದೆ ಎಂದು ನಿವೃತ್ತ ಉಪ ಮಹಾ ನಿರ್ದೇಶಕರೊಬ್ಬರು ನೀಡಿರುವ ಹೇಳಿಕೆ ಪ್ರಕಟವಾಗಿತ್ತು.

Advertisement

ಇದು ಜಿಲ್ಲೆಯ ಜನತೆಯಲ್ಲಿ ಭೀತಿ ಉಂಟುಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಡಳಿತ ಈ ವಿಚಾರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಗಮನಕ್ಕೆ ತಂದಿತ್ತು, ಈ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ನಿರ್ದೇಶಕರು ಸ್ಪಷ್ಟೀಕರಣ ನೀಡಿದ್ದು, ವಿವರ ಹೀಗಿದೆ.ಕಳೆದ ವರ್ಷ ಕೊಡಗು ಜಿಲ್ಲೆ ಮತ್ತು ಕೇರಳದಲ್ಲಿ ಅಸಹಜ ರೀತಿಯ ಭಾರೀ ಮಳೆಯಾಗಿತ್ತು.

ಮಳೆ ಹಾಗೂ ಬೇರೆ ಭಾಗಗಳಲ್ಲಿ ಉಂಟಾಗುವ ಜ್ವಾಲಾಮುಖೀ ಸ್ಫೋಟಕ್ಕೂ ಸಂಬಂಧವಿರುವ ಬಗ್ಗೆ ವ್ಯವಸ್ಥಿತ ವೈಜ್ಞಾನಿಕ ಸಂಶೋಧನೆಗಳಿಂದ ಇನ್ನಷ್ಟೇ ದೃಢಪಡಬೇಕಿದೆ.

ಕಳೆದ ವಾರ ಕೊಡಗಿನಲ್ಲಿ ಬಿದ್ದ ಮಳೆಯು ಮುಂಗಾರು ಪೂರ್ವ ಮಳೆಯಾಗಿದ್ದು, ಸಾಮಾನ್ಯವಾದ ಗುಡುಗು-ಮಿಂಚಿನಿಂದ ಕೂಡಿದ್ದು, ಯಾವುದೇ ರೀತಿಯ ಜ್ವಾಲಾಮುಖೀ ಸ್ಫೋಟದ ಪರಿಣಾಮವಾಗಿರುವುದಿಲ್ಲ.

ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಈ ವರ್ಷ ಅತಿವೃಷ್ಟಿ ಹಾಗೂ ಸಂಬಂಧಿತ ಪ್ರವಾಹ ಉಂಟಾಗುವ ಬಗ್ಗೆ ಪ್ರಸ್ತುತ ಯಾವುದೇ ಮುನ್ಸೂ ಚನೆಗಳಿರುವುದಿಲ್ಲ.

Advertisement

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವತಿಯಿಂದ ರಾಜ್ಯದ ಹವಾಮಾನದಲ್ಲಿನ ಏರಿಳಿ ತಗಳನ್ನು ಗ್ರಾಮ ಪಂಚಾಯತ್‌ ವಾರು ನಿರಂತರವಾಗಿ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದು, ಹವಾಮಾನ ಮತ್ತು ಭೌಗೋಳಿಕ ವೈಪರೀತ್ಯದಿಂದ ಉಂಟಾಗಬಹುದಾದ ಪ್ರಕೃತಿ ವಿಕೋಪದ ಬಗ್ಗೆ ಪೂರ್ವಭಾವಿಯಾಗಿ ಅಧಿಕೃತವಾಗಿ ಮುನ್ನೆಚ್ಚೆರಿಕೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಮಳೆ ಸಂಬಂಧ ಯಾವುದೇ ರೀತಿಯ ದೃಢೀಕರಿಸಲಾಗದ ಅಥವಾ ಅಧಿಕೃತವಲ್ಲದ ಹೇಳಿಕೆಗಳಿಂದ ಜನರು ಭೀತಿ ಪಡದೆ, ಹವಾಮಾನ ಮತ್ತು ಮಳೆ ಬಗ್ಗೆ ಅಧಿಕೃತ ಮಾಹಿತಿಗಾಗಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next