Advertisement

ಕಬ್ಬು ಬೆಳೆಗಾರರಿಗಿಲ್ಲ “ಸಂಕ್ರಾಂತಿ’ಸಿಹಿ

12:40 PM Jan 15, 2022 | Team Udayavani |

ಬೀದರ: ಮಕರ ಸಂಕ್ರಾಂತಿ ಹಬ್ಬದವರೆಗೆ ಸಿಹಿ ಸುದ್ದಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಕಬ್ಬು ಬೆಳೆಗಾರರಿಗೆ ಕಹಿ ಅನುಭವ ಆಗಿದೆ. ಕ್ರಷಿಂಗ್‌ ಶುರುವಾಗಿ ತಿಂಗಳುಗಳು ಕಳೆದರೂ ಕಬ್ಬಿನ ದರ ಘೋಷಿಸದಿರುವುದು ಸತತ ಆರ್ಥಿಕ ಹೊಡೆತಕ್ಕೆ ಒಳಗಾಗುತ್ತಿರುವ ಕೃಷಿಕರಲ್ಲಿ ಆತಂಕ ಹೆಚ್ಚಿದೆ.

Advertisement

ಕಾರ್ಖಾನೆಗಳು ಕ್ರಷಿಂಗ್‌ ಆರಂಭಕ್ಕೂ ಮುನ್ನವೇ ಕಬ್ಬಿನ ದರವನ್ನು ಘೋಷಿಸಬೇಕು. ಆದರೆ, ದರ ನಿಗದಿಪಡಿಸದೆ ಹಂಗಾಮು ಆರಂಭಿಸುವ ಪರಂ ಪರೆಯನ್ನು ಸಹಕಾರ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳು ಮುಂದುವರೆಸಿಕೊಂಡು ಬರುತ್ತಿವೆ. ಹೀಗಾಗಿ ರೈತರು ವರ್ಷವಿಡೀ ಕಷ್ಟಪಟ್ಟು ಬೆಳೆದ ಟನ್‌ ಕಬ್ಬಿಗೆ ಎಷ್ಟು ಬೆಲೆ ಸಿಗುತ್ತದೆಯೋ ಎಂಬ ಗೊಂದಲದಲ್ಲೇ ಕಾರ್ಖಾನೆಗೆ ಕಬ್ಬನ್ನು ಸಾಗಿಸುವ ಸ್ಥಿತಿ ಬಂದಿದೆ.

ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ), ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ (ಎಂಜಿಎಸ್‌ಎಸ್‌ ಕೆ), ಬೀದರ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್‌ ಎಸ್‌ಕೆ)ಗಳು ಮತ್ತು ಖಾಸಗಿ ಕಾರ್ಖಾನೆಗಳಾದ ಭಾಲ್ಕೇಶ್ವರ, ಬೀದರ ಕಿಸಾನ್‌, ಭವಾನಿ ಶುಗರ್ ಇದ್ದು, ಎಲ್ಲ ಕಾರ್ಖಾನೆಗಳು ಪ್ರಸಕ್ತ ಸಾಲಿಗೆ ಕ್ರಷಿಂಗ್‌ ಆರಂಭಿಸಿ ಎರಡು ತಿಂಗಳು ಕಳೆಯುತ್ತ ಬಂದಿವೆ. ಆದರೆ, ಈವರೆಗೆ ಯಾವೊಂದು ಕಾರ್ಖಾನೆ ಸಹ ಕಬ್ಬಿನ ದರ ನಿಗದಿಪಡಿಸಿಲ್ಲ.

ಚುನಾಯಿತ ಪ್ರತಿನಿಧಿಗಳು ಮತ್ತು ಉದ್ಯಮಗಳನ್ನು ನಡೆಸುವವರೂ ಒಬ್ಬರೇ ಆಗುತ್ತಿರುವುದರಿಂದ ಜನಸಾಮಾನ್ಯರ, ರೈತರ ಹಿತಕ್ಕೆ ಧಕ್ಕೆ ಆಗುವುದನ್ನು ತಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲಾಡಳಿತ ಮತ್ತು ಸರ್ಕಾರದ ಹಿಡಿತ ಇಲ್ಲವಾಗಿದೆ. ಇದೊಂದು ರೀತಿ ಕಾಯುವವರನ್ನೇ ಕೊಲ್ಲಲು ಸಜ್ಜಾದಂಥ ಪರಿಸ್ಥಿತಿ. ಕಬ್ಬು ಬೆಳೆಗಾರರು ಈಗ ಅಕ್ಷರಶಃ ಇಂಥದ್ದೆ ತೋಳಲಾಟದಲ್ಲಿ ಸಿಲುಕಿ ನರಳಾಡುತ್ತಿದ್ದಾರೆ.

ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗಾಗಿ ರೈತರ ಕೂಗು ಅರಣ್ಯ ರೋದನವಾಗಿಯೇ ಉಳಿದಿದೆ. ಈ ಮಧ್ಯ ಪ್ರಕೃತಿ ವಿಕೋಪದ ನಡುವೆಯೂ ಬೆಳೆಯುವ ವಾಣಿಜ್ಯ ಬೆಳೆಗೆ ಮುಂಚಿತವಾಗಿ ಬೆಲೆ ನಿಗದಿಪಡಿಸಿ ರೈತರಿಗೆ ಅಭಯ ನೀಡಬೇಕಾದ ಕಾರ್ಖಾನೆ ಮಾಲೀಕರು ಮೌನಕ್ಕೆ ಜಾರಿದ್ದಾರೆ.

Advertisement

ಕಬ್ಬಿಗೆ ವೈಜ್ಞಾನಿಕ ದರ ಮತ್ತು ಕೃಷಿಂಗೂ ಮುನ್ನ ಬೆಲೆ ಘೋಷಣೆ ವಿಷಯಗಳ ಬಗ್ಗೆ ಕಾರ್ಖಾನೆ ಮಾಲೀಕರನ್ನು ಕೇಳುವ ಧೈರ್ಯವನ್ನು ಯಾರೊಬ್ಬ ಸಚಿವರು ಮತ್ತು ಶಾಸಕರು ತೋರುತ್ತಿಲ್ಲ. ಹೀಗಾಗಿ ಅವರು ಮಾಡಿದ್ದೇ ಸರಿ ಎಂಬಂಥ ಪರಿಸ್ಥಿತಿ ಇದೆ. ತಮಗಿಷ್ಟ ಬಂದಷ್ಟು ಮುಂಗಡ ಹಣ ಕೊಡುತ್ತಿವೆ. ನಂತರ ಹಂಗಾಮಿನ ಕೊನೆಗೂ ಇಂತಿಷ್ಟು ದರ ಹೇಳಿ ಕೈತೊಳೆದುಕೊಳ್ಳುತ್ತಿವೆ. ಇವರ ಧೋರಣೆ ಅನ್ನದಾತರನ್ನು ಅತಂತ್ರರನ್ನಾಗಿ ಮಾಡುತ್ತಿದೆ.

ಕ್ರಷಿಂಗ್‌ ಆರಂಭಕ್ಕೂ ಮುನ್ನವೇ ಕಬ್ಬಿಗೆ ದರ ನಿಗದಿ ನಿಯಮವನ್ನು ಯಾವುದೇ ಕಾರ್ಖಾನೆಗಳು ಪಾಲಿಸುತ್ತಿಲ್ಲ. ಪ್ರತಿ ಬಾರಿ ಅವರು ಕೊಟ್ಟಷ್ಟೇ ರೈತರು ಪಡೆಯುವಂತಾಗಿದೆ. ನಾವು ಬೊಬ್ಬೆ ಹೊಡೆದರೂ ನಮ್ಮ ಗೋಳು ಕೇಳುವರ್ಯಾರು ಇಲ್ಲ. ಈ ಬಾರಿ ಸರ್ಕಾರ ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಿಸಿದ್ದು, ಕಾರ್ಖಾನೆಗಳು ಟನ್‌ ಕಬ್ಬಿಗೆ 2,400 ರೂ. ನಿಗದಿಪಡಿಸಬೇಕು. ಜಿಲ್ಲಾಡಳಿತ, ಸಚಿವರು ರೈತ ಹಿತ ಕಾಪಾಡುವಲ್ಲಿ ಮುಂದಾಗಬೇಕು.-ಮಲ್ಲಿಕಾರ್ಜುನ ಸ್ವಾಮಿ ಜಿಲ್ಲಾಧ್ಯಕ್ಷ, ರೈತ ಸಂಘ, ಬೀದರ

-ಶಶಿಕಾಂತ ಬಂಬುಳಗ

Advertisement

Udayavani is now on Telegram. Click here to join our channel and stay updated with the latest news.

Next