Advertisement
ಮೊದಲ ದಿನ ನೋಡಬೇಕಾದರೆ ಆಶ್ಚರ್ಯವಾಯಿತು. ಸುಮಾರು ಮೂರರಿಂದ ನಾಲ್ಕು ಸಾವಿರದಷ್ಟು ಒಂದಕ್ಕೊಂದು ಅಂಟಿಕೊಂಡು, ಮನೆಗಳಂತೆ ಕಾಣುವ ಕಾಂಕ್ರಿಟ್ ಕಟ್ಟಡಗಳು. ಒಂದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಎರಡು ಅಂಗನವಾಡಿಗಳನ್ನು ಈ ಕಾಲೊನಿ ಒಳಗೊಂಡಿತ್ತು. ಇಲ್ಲಿ ವಾಸಿಸುವ ಸುಮಾರು 80%ರಷ್ಟು ಜನ ಉತ್ತರಕರ್ನಾಟಕ ಹಾಗೂ ತಮಿಳುನಾಡಿನ ಹಳ್ಳಿಗಳಿಂದ ಉದ್ಯೋಗ ಅರಸಿ ವಲಸೆ ಬಂದವರು. ಈ ಕಾಲೊನಿಯ ಜನರ ಜೊತೆಯಲ್ಲಿ ಒಡನಾಡಿ ಅವರ ವೃತ್ತಿ, ಜೀವನ ಶೈಲಿ, ಸಂಪ್ರದಾಯ, ಸಂಸ್ಕೃತಿ, ದೈನಂದಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ನಮ್ಮಿಂದ ಸಾಧ್ಯವಾದಷ್ಟು ಅಲ್ಲಿಯ ಜನರಲ್ಲಿ ಆರೋಗ್ಯ, ಮಾಲಿನ್ಯ, ಶುಚಿತ್ವದ ಕುರಿತು ತಿಳುವಳಿಕೆ, ಅರಿವು ಮೂಡಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿತ್ತು. ಶಾಲಾಮಕ್ಕಳಿಗೆ ಹಾಗೂ ಅಂಗನವಾಡಿ ಪುಟಾಣಿಗಳಿಗೂ ಚಟುವಟಿಕೆ ನಡೆಸುವುದು ನಮ್ಮ ಗುರಿಯಾಗಿತ್ತು.
Related Articles
ಹೆಣ್ಣು ಸಂಸಾರದ ಕಣ್ಣು ಎನ್ನುತ್ತಾರೆ. ಒಂದು ಹೆಣ್ಣಾಗಿ ಹುಟ್ಟಿದ ಮೇಲೆ ಆಕೆ ಅನೇಕ ನೋವು-ನಲಿವುಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಇಲ್ಲಿನ ಪ್ರತಿಯೊಂದು ಹೆಣ್ಣಿನ ಬಾಳಲ್ಲೂ ಒಂದು ಕಣ್ಣೀರ ಕಥೆ ಇದೆ. ಎಷ್ಟೋ ಹೆಣ್ಣು ಮಕ್ಕಳ ಗಂಡಂದಿರು ಅವರನ್ನು ತೊರೆದು ಬೇರೆ ಹುಡುಗಿಯರನ್ನು ಮದುವೆಯಾಗಿದ್ದರು. ಸಮಾಜದ ಚುಚ್ಚು ಮಾತುಗಳ ನಡುವೆಯೂ ತಮ್ಮ ಮಕ್ಕಳಿಗಾಗಿ, ಹೊಟ್ಟೆಪಾಡಿಗಾಗಿ ದುಡಿದು ಜೀವನ ಸಾಗಿಸಲೇ ಬೇಕಿತ್ತು. ಗಂಡನ ಕುಡಿತ, ಹೊಡೆತಗಳಿಂದ ಬೇಸತ್ತು ತಮ್ಮ ಕುಟುಂಬವನ್ನು ನಿಭಾಯಿಸಲು ಹೆಣಗಾಡುತ್ತಿರುವ ಮಡದಿಯರು, ಇನ್ನೂ ಕಾಲೇಜಿಗೆ ಹೋಗುವ ವಯಸ್ಸಿನ ಯುವತಿಯರು ಮದುವೆ ಎಂಬ ಬಂಧನಕ್ಕೆ ಸಿಲುಕಿ ಜೀವನವನ್ನು ಅಡುಗೆ ಕೋಣೆಗೆ ಮಾತ್ರ ಸೀಮಿತವಾಗಿಟ್ಟುಕೊಂಡು ಬದುಕುವುದು ಅನಿವಾರ್ಯವಾಗಿತ್ತು.
Advertisement
ಹೀಗೆ ಪ್ರೀತಿ, ಭರವಸೆ, ವಿದ್ಯಾಭ್ಯಾಸದಿಂದ ವಂಚಿತರಾಗಿ ತಮ್ಮ ಕನಸುಗಳನ್ನು ಮೂಲೆಗಿಟ್ಟು ಬದುಕುವ ಅಸಹಾಯಕ ಜೀವಗಳು ಸಾಕಷ್ಟಿವೆ. ಆದರೂ ತಮ್ಮ ಮಕ್ಕಳು ವಿದ್ಯಾವಂತರಾಗಬೇಕು, ಜೀವನದಲ್ಲಿ ಯಶಸ್ವಿಯಾಗಬೇಕು, ತಮಗಾದ ಪರಿಸ್ಥಿತಿ ತನ್ನ ಮಕ್ಕಳಿಗೆ ಆಗಬಾರದು ಎಂಬ ಹಂಬಲ ಇವರಲ್ಲಿ ಬದುಕಿನ ಏರುಪೇರನ್ನು ಎದುರಿಸಿ ಜೀವನ ಸಾಗಿಸಲೇಬೇಕೆಂಬ ಛಲ ಮೂಡಿಸುತ್ತಿತ್ತು.
ಇಲ್ಲಿರುವ ಹಲವಾರು ಮಹಿಳೆಯರು ಹೊಟ್ಟೆಪಾಡಿಗೆ ಕಟ್ಟಡ ಕಾಮಗಾರಿ, ಮನೆಗೆಲಸಕ್ಕೆಂದು ಹೋಗುತ್ತಾರೆ. ಬಿಸಿಲಿನಲ್ಲಿ ಓಡಾಡಿದರೆ ಕಪ್ಪಾಗುತ್ತೇವೆ ಎಂಬ ಚಿಂತೆ ಇವರಿಗಿಲ್ಲ. ಜಾಸ್ತಿ ಅಲಂಕಾರ, ಆಡಂಬರ ಇಲ್ಲದಿದ್ದರೂ ದಿನಪೂರ್ತಿ ಮಳೆ-ಬಿಸಿಲು ಯಾವುದನ್ನೂ ಲೆಕ್ಕಿಸದೇ ದುಡಿಯುವ ಈ ಹೆಣ್ಣುಮಕ್ಕಳ ಅಂದಕ್ಕೇನೂ ಕೊರತೆ ಇರಲಿಲ್ಲ. ಸಬಲ ಮಹಿಳೆಯ ಕಳೆ ಇವರ ಮುಖದಲ್ಲಿ ಯಾವಾಗಲೂ ಕಾಣುತ್ತಿತ್ತು. ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಪರಿಸ್ಥಿತಿ ಎದುರಿಸಿ ಬದುಕುವುದು ಅಷ್ಟು ಸುಲಭವಲ್ಲ. ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಕಳೆಯುತ್ತಾ, ಮೋಸದ ಬಲೆಗೆ ಸಿಲುಕಿ, ಚಿಕ್ಕಪುಟ್ಟ ಕಷ್ಟ ಬಂದಾಗಲೂ ಎದುರಿಸಲಾಗದೇ, ಜೀವನದ ವಾಸ್ತವಕ್ಕೆ ಹೊಂದಿಕೊಳ್ಳದೇ ಜೀವನವೇ ಬೇಡ ಎಂದು ಕೊರಗುವ ಹಲವಾರು ಹೆಣ್ಣು ಮಕ್ಕಳಿಗೆ ಇವರ ಜೀವನವು ಒಂದು ಮಾದರಿಯಾಗಿದೆ. ಒಂದು ಹೆಣ್ಣಾಗಿ ಜೀವನದಲ್ಲಿ ಏನೇ ಕಷ್ಟಗಳು ಬಂದರೂ ಸ್ವಾವಲಂಬನೆಯಿಂದ ಬದುಕಿನಲ್ಲಿ ಬದುಕುವ ಛಲ ಹಾಗೂ ಧೈರ್ಯ ಇದ್ದರೆ ಏನನ್ನೂ ಬೇಕಾದರೂ ಎದುರಿಸಬಹುದು ಎಂದು ಈ ಹೆಣ್ಣು ಮಕ್ಕಳಿಂದ ನಾನು ಕಲಿತುಕೊಂಡ ಜೀವನ ಪಾಠ.
ಗ್ಲೋರಿಯಾ ಡಿಸೋಜಎಮ್ಎಸ್ಡಬ್ಲ್ಯೂ,ಸ್ಕೂಲ್ ಆಫ್ ಸೋಶಿಯಲ್ ವರ್ಕ್,
ರೋಶನಿ ನಿಲಯ, ಮಂಗಳೂರು