Advertisement
ಬಲ್ಯ ಗ್ರಾಮದ ಸಂಪಡ್ಕ ದಿಲೀಪ್ ಕುಮಾರ್ ಅವರು ಆರ್‌ಟಿಐ ಅಡಿಯಲ್ಲಿ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್ ಪ್ರಸ್ ರೈಲುಗಳಿಗೆ ನಿಲುಗಡೆ ಇಲ್ಲದಿರುವ ಬಗ್ಗೆ ಮಾಹಿತಿ ಬಯಸಿದಾಗ ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳು ಕೋಡಿಂಬಾಳ ‘ಎಫ್’ ಕೆಟಗರಿ ರೈಲು ನಿಲ್ದಾಣವಾಗಿದ್ದು, ಲೋಕಲ್ ರೈಲು ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಈ ನಿಲ್ದಾಣದಲ್ಲಿ ಟಿಕೆಟ್ ಕೊಳ್ಳುವವರ ಸಂಖ್ಯೆ ಕಡಿಮೆ ಇರುವುದರಿಂದ, ಇಲಾಖೆಯ ಮುಂದೆ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡುವ ಪ್ರಸ್ತಾವ ಇರುವುದಿಲ್ಲ ಎನ್ನುವ ಉತ್ತರ ಸಿಕ್ಕಿದೆ.
ಕೇವಲ ಒಂದು ಲೋಕಲ್ ರೈಲು ಸಂಚರಿಸುವುದರಿಂದ ಸಹಜವಾಗಿ ಇಲ್ಲಿ ಟಿಕೆಟ್ ಕೊಳ್ಳುವವರ ಸಂಖ್ಯೆಯೂ ಕಡಿಮೆ ಇರುತ್ತದೆ. ಈ ಲೋಕಲ್ ರೈಲಿಗೆ ಕೋಡಿಂಬಾಳದಿಂದ ಸುಬ್ರಹ್ಮಣ್ಯ ದವರೆಗೆ ಒಂದು ನಿಲುಗಡೆ ಮಾತ್ರ ಇರುತ್ತದೆ. ಈ ರೈಲು ದಿನಕ್ಕೆ ಒಂದು ಬಾರಿ ಮಾತ್ರ ಈ ಮಾರ್ಗದಲ್ಲಿ ಮಂಗಳೂರು ವರೆಗೆ ಸಂಚರಿಸುತ್ತದೆ. ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಪ್ರಧಾನ ಮಂತ್ರಿ ಅವರಿಗೂ ದಿಲೀಪ್ ಕುಮಾರ್ ಸಂಪಡ್ಕ ಮನವಿ ಮಾಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ರೈಲ್ವೇ ಅಧಿಕಾರಿಗಳಿಗೆ ಈ ಕುರಿತು ಸೂಚನೆ ಹೋಗಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು, ಒಂದು ಮನವಿ ಮಾತ್ರ ಬಂದಿರುವುದರಿಂದ ಮನವಿಗೆ ಸ್ಪಂದಿಸಲು ಸಾಧ್ಯವಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಅವರು ಸ್ಥಳೀಯ ಸಂಸದರು, ಜಿಲ್ಲೆಯ ಎಲ್ಲ ಶಾಸಕರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಪರಿಸರದ ಜನರಿಗೆ ಅನುಕೂಲ
ಕೋಡಿಂಬಾಳ ರೈಲು ನಿಲ್ದಾಣ ತಾಲೂಕು ಕೇಂದ್ರ ಕಡಬಕ್ಕೆ ಸನಿಹ ದಲ್ಲಿರುವುದರಿಂದ ಈ ರೈಲು ನಿಲ್ದಾಣ ಮೇಲ್ದರ್ಜೆಗೇರಿದರೆ ಜನರಿಗೆ ಅನು ಕೂಲವಾಗಲಿದೆ. ಕಡಬ ಮಾತ್ರವಲ್ಲದೆ ಹತ್ತಿರದ ಸುಳ್ಯ ತಾಲೂಕಿನ ಪಂಜ, ಬಳ್ಪ ಮೊದಲಾದ ಪ್ರದೇಶಗಳಿಗೂ ಈ ರೈಲು ನಿಲ್ದಾಣ ತುಂಬಾ ಹತ್ತಿರ. ಆದರೆ ಇಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಗೇಜ್ ಪರಿವರ್ತನೆಯ ಬಳಿಕ ಲೋಕಲ್ ರೈಲು ಮಾತ್ರ ಇಲ್ಲಿ ನಿಲುಗಡೆಯಾಗುತ್ತಿದೆ. ಬೆಂಗಳೂರು ರೈಲು ಹಿಡಿಯಬೇಕಾದರೆ ನೆಟ್ಟಣ (ಸುಬ್ರಹ್ಮಣ್ಯ ರಸ್ತೆ) ರೈಲು ನಿಲ್ದಾಣಕ್ಕೆ ಹೋಗಬೇಕು. ಹಿಂದೆ ಬೆಂಗಳೂರು-ಮಂಗಳೂರು ರೈಲು ಇಲ್ಲಿ ನಿಲುಗಡೆ ಇತ್ತು. ಈ ಸಂದರ್ಭ ದೊಡ್ಡ ಸಂಖ್ಯೆಯ ಪ್ರಯಾಣಿಕರು ಆ ವ್ಯವಸ್ಥೆಯ ಪ್ರಯೋಜನ ಪಡೆಯಲು ಸಾಧ್ಯವಾಗಿತ್ತು.
Related Articles
ರೈಲ್ವೇ ಇಲಾಖೆ ಇಲ್ಲಿ ಯಾವುದೇ ಸೌಲಭ್ಯಗಳನ್ನು ನೀಡುವ ಲಕ್ಷಣಗಳು ಕಾಣಿಸುತ್ತಿಲ್ಲ. ಆದುದರಿಂದ ಸಾರ್ವಜನಿಕರೇ ಈ ಸೌಲಭ್ಯಗಳನ್ನು ಒದಗಿಸಿ ಇಲ್ಲಿ ಎಕ್ಸ್‌ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡಲು ವ್ಯವಸ್ಥೆ ಮಾಡಲು ಮನವಿ ಮಾಡಬೇಕಾಗಿದೆ. ಹರಿಯಾಣದ ತಾಜ್‌ನಗರ ರೈಲು ನಿಲ್ದಾಣದಲ್ಲಿಯೂ ಇದೇ ಸಮಸ್ಯೆ ಇದ್ದಾಗ ಅಲ್ಲಿನ ಜನರು ಜತೆಗೂಡಿ 21 ಲಕ್ಷ ರೂ. ವ್ಯಯಿಸಿ ರೈಲು ನಿಲ್ದಾಣಕ್ಕೆ ಸೌಕರ್ಯಗಳನ್ನು ಕಲ್ಪಿಸಿದ್ದರು. ಇದು ಭಾರತದಲ್ಲಿ ರೈಲ್ವೆ ಇಲಾಖೆಯಿಂದ ಅನುದಾನ ಪಡೆಯದೇ ಸಾರ್ವಜನಿಕರೇ ಸೌಲಭ್ಯ ನೀಡಿದ ಮೊದಲ ರೈಲು ನಿಲ್ದಾಣವಾಗಿದೆ.
Advertisement
ಆಂಧ್ರಪ್ರದೇಶದ ಶಂಕಪುರ ರೈಲು ನಿಲ್ದಾಣ, ರಾಜಸ್ಥಾನದ ರಾಷಿದ್‌ಪುರು ಕೋರಿ, ಬಲವಂತ್‌ಪುರ್ ಚಲಸಿ ಮತ್ತು ಹರಿಯಾಣದ ಲಕನ್ ಮರ್ಜ ರೈಲು ನಿಲ್ದಾಣಗಳು ಸಾರ್ವಜನಿಕರ ದೇಣಿಗೆಯಿಂದ ಸವಲತ್ತು ಪಡೆದು ರೈಲು ನಿಲುಗಡೆ ಪಡೆಯುವುದರಲ್ಲಿ ಯಶಸ್ವಿಯಾಗಿವೆ. ಕೋಡಿಂಬಾಳ ಪರಿಸರದ ಜನರು ಕೂಡ ಈ ನಿಟ್ಟಿನಲ್ಲಿ ಮನಸ್ಸು ಮಾಡಿದರೆ ಯಶಸ್ಸು ಖಂಡಿತ ಎಂದು ಸಾಮಾಜಿಕ ಕಾರ್ಯಕರ್ತ ದಿಲೀಪ್‌ಕುಮಾರ್ ಸಂಪಡ್ಕ ಹೇಳಿದ್ದಾರೆ.
ರೈಲು ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲ ಕೋಡಿಂಬಾಳದಲ್ಲಿ ಈಗ ಇರುವ ರೈಲು ನಿಲ್ದಾಣದಲ್ಲಿ ಯಾವುದೇ ಸೌಕರ್ಯಗಳಿಲ್ಲ. ಪ್ಲಾಟ್‌ಫಾರಂ ನಿರ್ಮಾಣವೂ ಸಮರ್ಪಕವಾಗಿಲ್ಲ. ರೈಲು ಬಂಡಿಯ ಬಾಗಿಲು ಮತ್ತು ಪ್ಲಾಟ್‌ಫಾರಂ ನಡುವೆ ಇರುವ ದೊಡ್ಡ ಅಂತರದಿಂದಾಗಿ ಇಲ್ಲಿ ಪುರುಷ ಪ್ರಯಾಣಿಕರೇ ರೈಲು ಏರಲು ಹರಸಾಹಸ ಪಡಬೇಕು. ವೃದ್ಧರು, ಮಕ್ಕಳು ಹಾಗೂ ಮಹಿಳಾ ಪ್ರಯಾಣಿಕರ ಪಾಡಂತೂ ಹೇಳತೀರದು. ಪ್ಲಾಟ್‌ಫಾರಂ ಎತ್ತರಿಸಿ ಎಂದು ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿ ಹೋರಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು
ಕೋಡಿಂಬಾಳ ರೈಲು ನಿಲ್ದಾಣ ಮೇಲ್ದರ್ಜೆಗೇರಬೇಕು. ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆಯಾಗಬೇಕು. ಲೋಕಲ್ ರೈಲುಗಳ ಓಡಾಟವನ್ನು ಹೆಚ್ಚಿಸಬೇಕು ಮೊದಲಾದ ಬೇಡಿಕೆಗಳೊಂದಿಗೆ ಇಲ್ಲಿ ಬೃಹತ್ ಪ್ರತಿಭಟನೆ ನಡೆಸಿದರೂ, ಹೋರಾಟಗಾರರ ಮೇಲೆ ಕೇಸು ದಾಖಲಾಗಿರುವುದು ಬಿಟ್ಟರೆ ಬೇರೇನೂ ಪ್ರಯೋಜನವಾಗಿಲ್ಲ. ರೈಲ್ವೇ ಅಧಿಕಾರಿಗಳ ವಿರುದ್ಧ ಇಲ್ಲಿನ ಜನರು ದಂಗೆ ಏಳುವ ಮುನ್ನ ಅವರು ಜನರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಬೇಕು.
-ಸಯ್ಯದ್ ಮೀರಾ ಸಾಹೇಬ್
ಸಂಚಾಲಕರು, ರೈಲು ನಿಲ್ದಾಣ
ಅಭಿವೃದ್ಧಿ ಹೋರಾಟ ಸಮಿತಿ ನಾಗರಾಜ್ ಎನ್.ಕೆ.