Advertisement

ಹೆಗ್ಗವಾಡಿ ಗ್ರಾಮದಲ್ಲಿ ಸೌಲಭ್ಯ ಮರೀಚಿಕೆ

09:21 PM Jan 28, 2020 | Lakshmi GovindaRaj |

ಯಳಂದೂರು: ಕಳೆದ ಹಲವು ವರ್ಷಗಳಿಂದಲೂ ವಿದ್ಯುತ್‌ ಸಂಪರ್ಕಕ್ಕಾಗಿ ಬವಣೆ ಪಡುತ್ತಿರುವ ಜನರು, ಕುಡಿಯುವ ನೀರು ತುಂಬಿಸಿಕೊಳ್ಳಲು ಅಲೆಯುವ ನಾಗರಿಕರು, ಚರಂಡಿ, ರಸ್ತೆ ಇನ್ನೂ ಮರೀಚಿಕೆಯಾಗಿ ಕಚೇರಿಗಳಿಗೆ ಅಲೆದು ಅಲೆದು ಸುಸ್ತಾದ ಸಾರ್ವಜನಿಕರು.

Advertisement

ತಾಲೂಕಿನ ಹೆಗ್ಗವಾಡಿ ಗ್ರಾಮದ ಲಿಂಗಾಯಿತರ ಬಡಾವಣೆಯ ಪ್ರಸ್ತುತ ಪರಿಸ್ಥಿತಿ ಇದು. ಚಾಮರಾಜನಗರ ತಾಲೂಕು ಕುದೇರು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಈ ಗ್ರಾಮದ ಲಿಂಗಾಯಿತರ ಬಡಾವಣೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬಡಾವಣೆಯ ಕೆಲ ಕುಟುಂಬಗಳಿಗೆ ಇನ್ನೂ ಕೂಡ ಇಲ್ಲಿಗೆ ರಸ್ತೆ, ಚರಂಡಿ ನಿರ್ಮಾಣವಾಗಿಲ್ಲ. ಕುಡಿಯುವ ನೀರಿನ ಸಂಪರ್ಕ ಪಡೆದುಕೊಳ್ಳಲು ಪೈಪ್‌ಲೈನ್‌ ನಿರ್ಮಾಣವೇ ಮಾಡಿಲ್ಲ. ವಿದ್ಯುತ್‌ ಸಂಪರ್ಕವಂತೂ ಇಲ್ಲಿ ಮರೀಚಿಕೆಯಾಗಿದೆ.

ಇಲ್ಲಿಗೆ ಸಂಪರ್ಕ ರಸ್ತೆಯೇ ಇಲ್ಲ: ಇದಕ್ಕೆ ಇಲ್ಲಿಗೆ ಸಂಪರ್ಕ ಕಲ್ಪಿಸಲು ರಸ್ತೆ ಇಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಹತ್ತಾರು ವರ್ಷಗಳಿಂದಲೂ ಈ ಬಡಾವಣೆಯಲ್ಲಿ ಹಲವು ಕುಟುಂಬಗಳು ವಾಸವಾಗಿವೆ. ಆದರೆ, ಇದರ ನಕ್ಷೆಯಲ್ಲಿ ರಸ್ತೆಯೇ ಇಲ್ಲ. ಇಲ್ಲಿನ ಹತ್ತಕ್ಕೂ ಹೆಚ್ಚು ಕುಟುಂಬಗಳಿಗೆ ರಸ್ತೆಯೇ ಇಲ್ಲವಾಗಿದೆ.

ನೀರು ಹರಿಯುವುದೇ ಇಲ್ಲ: ಮಳೆ ಬಂದರೆ ನೀರು ಹರಿಯದೇ ಇಲ್ಲೇ ನಿಲ್ಲುತ್ತದೆ. ಜೋರಾದರೆ ಮನೆಗಳಿಗೂ ನುಗ್ಗುತ್ತದೆ. ಇದರೊಂದಿಗೆ ವಿಷ ಜಂತುಗಳು, ಕ್ರಿಮಿ ಕೀಟಗಳು ಮನೆಯೊಳಗೆ ನುಗ್ಗಿ ಹಲವು ಬಾರಿ ರಾಢಿ ಮಾಡಿರುವ ಘಟನೆಗಳೂ ನಡೆದಿವೆ. ಚರಂಡಿ ಇಲ್ಲದೇ ಮಳೆ ನೀರೂ ಕೂಡ ಇಲ್ಲಿ ಹರಿಯುವುದಿಲ್ಲ. ಇದರೊಂದಿಗೆ ವಿದ್ಯುತ್‌ ಕಂಬಗಳೂ ಇಲ್ಲದಿರುವುದರಿಂದ ಹತ್ತಾರು ವರ್ಷಗಳಿಂದಲೂ ಕಗ್ಗತ್ತಲಲ್ಲಿ ಕಾಲ ಕಳೆಯುವ ಪರಿಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ.

ವಿದ್ಯುತ್‌ ಬೆಳಕಿಲ್ಲದ ಪರಿಸ್ಥಿತಿ: ಇಲ್ಲಿ ಕೆಲವರು ಖಾಸಗಿಯಾಗಿ ತಮ್ಮ ಜಾಗದಲ್ಲಿ ವಿದ್ಯುತ್‌ ಕಂಬಗಳನ್ನು ಹಾಕಿಸಿಕೊಂಡಿದ್ದಾರೆ. ನಲ್ಲಿ ಸಂಪರ್ಕವನ್ನೂ ಪಡೆದುಕೊಂಡಿದ್ದಾರೆ. ಆದರೆ, ಇದರ ಲಾಭ ಪಡೆದುಕೊಳ್ಳುತ್ತಿರುವುದು ಬೆರಳೆಣಿಕೆಯಷ್ಟು ಜನರು ಮಾತ್ರ. ಉಳಿದವರೂ ಈ ಸೌಲಭ್ಯದಿಂದಲೂ ವಂಚಿತರಾಗಿದ್ದಾರೆ. ಬೇರೆಯವರ ಮನೆ ಮೇಲಿಂದ ವಿದ್ಯುತ್‌ ತಂತಿ ಹಾದು ಹೋಗಲು ಕೆಲವರು ಆಕ್ಷೇಪ ವ್ಯಕ್ತಪಡಿಸುವುದರಿಂದ ಮನೆಯೊಳಗೂ ವಿದ್ಯುತ್‌ ಬೆಳಕಿಲ್ಲದ ಸ್ಥಿತಿ ಇಲ್ಲಿನ ನಾಗರಿಕರದ್ದಾಗಿದೆ.

Advertisement

ಅನೇಕ ಬಾರಿ ಸಂಬಂಧಪಟ್ಟ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ ಕಚೇರಿಗಳಿಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಇಲ್ಲಿ ರಸ್ತೆಗೆ ಜಾಗ ಇಲ್ಲ ಎಂಬ ನೆಪವೊಡ್ಡಿ ಎಲ್ಲರೂ ವಾಪಸ್ಸಾಗುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹತ್ತಾರು ವರ್ಷಗಳ ಹಳೆಯದಾದ ಈ ಸಮಸ್ಯೆಗಳಿಗೆ ತಿಲಾಂಜಲಿ ನೀಡಬೇಕಾಗಿದೆ.
-ಮಹೇಶ್‌ ಕುಮಾರ್‌, ಹೆಗ್ಗವಾಡಿ

ಈ ಸ್ಥಳಕ್ಕೆ ಹಲವು ಬಾರಿ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಕೆಲ ಮನೆಗಳಿಗೆ ತೆರಳಲು ರಸ್ತೆ ಇಲ್ಲ. ಆ ಕಾಲದಿಂದ ಇಲ್ಲಿನವರು ಓಡಾಡುತ್ತಿದ್ದ ಜಾಗವನ್ನೇ ರಸ್ತೆ ಎಂದು ಭಾವಿಸಲಾಗಿದೆ. ಆದರೆ, ಇದು ಖಾಸಗಿಯವರ ಜಾಗ. ಈ ಬಗ್ಗೆ ನ್ಯಾಯಾಲಯದಲ್ಲಿ ವ್ಯಾಜ್ಯವೂ ಇದೆ. ಈ ಹಿನ್ನೆಲೆಯಲ್ಲಿ ಈ ಸಮಸ್ಯೆ ಇನ್ನೂ ಜಟಿಲವಾಗಿದೆ. ಖಾಸಗಿ ವ್ಯಕ್ತಿಗಳ ಮನವೊಲಿಸಿ ರಸ್ತೆ, ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡುವಂತೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು.
-ಮಮತಾ, ಪಿಡಿಒ, ಕುದೇರು ಗ್ರಾಪಂ

* ಫೈರೋಜ್‌ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next