Advertisement
ಹೌದು, ಬಾಗಲಕೋಟೆ ತಾಲೂಕಿನ ರಾಂಪುರ ಪುನರ್‌ವಸತಿ ಕೇಂದ್ರದಲ್ಲಿ ಸುಮಾರು 3500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾದ ರಾಂಪುರ, ಆಲೂರ, ಮಾಸ್ತಿಹಾಳ ಹಾಗೂ ಸೀತಿಮನಿ ಗ್ರಾಮಗಳನ್ನು ಜನರಿಗೆ ಪುನರ್‌ವಸತಿ ಕಲ್ಪಿಸಲು ರಾಂಪುರ ಪುನರ್‌ವಸತಿ ಕೇಂದ್ರ ನಿರ್ಮಿಸಲಾಗಿದೆ.
Related Articles
Advertisement
ಬಾರಾ ಕಮಾನ್ ಆದವು ಕಾಮಗಾರಿ: 9 ತಿಂಗಳ ಕಾಲಾವಧಿ ಇದ್ದರೂ ಎರಡು ವರ್ಷದಿಂದ ಕಾಮಗಾರಿ ಪೂರ್ಣಗೊಳ್ಳದಿರಲು ಹಲವು ಕಾರಣಗಳಿವೆ ಎನ್ನುತ್ತಾರೆ ಜನ. ಕೃಷ್ಣಾ ಮೇಲ್ದಂಡೆ ಯೋಜನೆ ಕಚೇರಿಯಿಂದ ಹಣ ಪಿಆರ್‌ಇಡಿಗೆ ನೀಡಿದ್ದು, ಎರಡೂ ಇಲಾಖೆಗಳು ಜಂಟಿಯಾಗಿ ಕಾಮಗಾರಿ ಪರಿಶೀಲನೆ ಮಾಡಬೇಕು. 3ನೇ ವ್ಯಕ್ತಿ ತಪಾಸಣೆ ವರದಿ ಕೊಡಬೇಕು. ಆ ಬಳಿಕ ಜಿಪಂನಿಂದ ಗುತ್ತಿಗೆದಾರರಿಗೆ ಬಿಲ್ ಬಿಡುಗಡೆ ಆಗಬೇಕು. ಆದರೆ, ಈ ಯಾವ ಕೆಲಸವೂ ನಡೆದಿಲ್ಲ. ಕೆಲವು ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಾಮಗಾರಿ ಪರಿಶೀಲಿಸಿದ್ದಾರೆ. ಇನ್ನು 3ನೇ ವ್ಯಕ್ತಿ ಕೂಡ ಕಚೇರಿಯಲ್ಲಿ ಕುಳಿತು ಕಾಮಗಾರಿ ತೃಪ್ತಿದಾಯಕ ಎಂಬ ಪ್ರಮಾಣ ಪತ್ರ ಕೊಟ್ಟಿದ್ದಾರೆ. ಇಷ್ಟೆಲ್ಲ ಆದರೂ, ಗುತ್ತಿಗೆದಾರರಿಗೆ ಪೂರ್ಣ ಪ್ರಮಾಣದ ಬಿಲ್ ಪಾವತಿಯಾಗಿಲ್ಲ. ಹೀಗಾಗಿ ಗುತ್ತಿಗೆದಾರರು, ತಾವು ಕೈಗೊಳ್ಳುತ್ತಿದ್ದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಎಲ್ಲ ಕಾಮಗಾರಿಗಳು ಕೇವಲ ಶೇ. 50 ಆಗಿವೆ. ಇದರಿಂದ ನಾವೆಲ್ಲ ಸಮಸ್ಯೆ ಎದುರಿಸುವಂತಾಗಿದೆ ಎಂದು ಗ್ರಾಮದ ಪ್ರಮುಖರು ವಿವರಿಸುತ್ತಾರೆ.
ಉಪಗುತ್ತಿಗೆ ಪರಿಣಾಮ: ಇನ್ನು ಕಾಮಗಾರಿ ಅವೈಜ್ಞಾನಿಕ ಹಾಗೂ ಅಪೂರ್ಣಗೊಳ್ಳಲು ಉಪಗುತ್ತಿಗೆ ನೀಡುವ ಪರಂಪರೆ ಕೂಡ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇಬ್ಬರೂ ಗುತ್ತಿಗೆದಾರರು ತಮಗೆ ಬೇಕಾದ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡಿ, ಕಾಮಗಾರಿ ಹೊಣೆ ವಹಿಸಿದ್ದಾರೆ. ಅವರೆಲ್ಲ ಸಣ್ಣ-ಪುಟ್ಟ ಕೆಲಸ ಮಾಡಿದವರಾಗಿದ್ದು, 4.95 ಕೋಟಿಯಷ್ಟು ಮುಂಗಡ ಹಣ ಹಾಕಿ ಕಾಮಗಾರಿ ಮಾಡುವವರಲ್ಲ. ಜಿಪಂನಿಂದ ಈಗ ಎಷ್ಟು ಬಿಲ್ ಬಿಡುಗಡೆಯಾಗಿದೆಯೋ ಅಷ್ಟೇ ಪ್ರಮಾಣದ ಕಾಮಗಾರಿ ಮಾಡಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ, ಬಿಲ್ ಪಡೆದಿಲ್ಲ ಎಂದು ಹೇಳಲಾಗಿದೆ.
ಬದುಕು ಅಯೋಮಯ: ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ಬದ್ಧತೆ ಇಲ್ಲದ ಪರಿಣಾಮ ರಾಂಪುರ ಪುನರ್‌ವಸತಿ ಕೇಂದ್ರದ ಜನರ ಬದುಕು ದುಸ್ತರವಾಗಿದೆ. ಇಲ್ಲಿ ನಿರ್ಮಾಣ ಮಾಡಿದ ಚರಂಡಿಗಳು, ಭೂ ಮಟ್ಟದಿಂದ 3 ಅಡಿ ಎತ್ತರದಲ್ಲಿವೆ. ಹೀಗಾಗಿ ಮಳೆ ಬಂದರೆ ಸಾಕು ಮನೆಗಳಿಗೆ ಮಳೆ ನೀರು ಬರುತ್ತದೆ. ಇನ್ನು ಮಹಿಳೆಯರು, ಮಕ್ಕಳು, ವೃದ್ಧರು ತಮ್ಮ ತಮ್ಮ ಮನೆಗೆ ಹೋಗಬೇಕಾದರೆ, ಚರಂಡಿ ದಾಟಿ ಹೋಗಲು ಹರಸಾಹಸಪಡುವಂತಾಗಿದೆ. ಚರಂಡಿ ನಿರ್ಮಾಣದ ವೇಳೆ ಎಂ ಸ್ಯಾಂಡ್ ಬಳಕೆಯ ಬದಲು, ಕಲ್ಲುಪುಡಿ ಬಳಸಿದ್ದು, ಚರಂಡಿ ಗೋಡೆ ಉದುರು ಬೀಳುತ್ತಿವೆ. ಸರಿಯಾದ ಕಾಮಗಾರಿ ನಡೆಯದೇ, ಸಂತ್ರಸ್ತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಉದ್ದೇಶ ಈಡೇರಿಲ್ಲ.
ನಮ್ಮ ಪುನರ್‌ವಸತಿ ಕೇಂದ್ರದಲ್ಲಿ ಕೈಗೊಂಡ ಚರಂಡಿ ಕಾಮಗಾರಿ ಸರಿಯಾಗಿ ನಡೆದಿಲ್ಲ. ಮೂರು ಅಡಿ ಎತ್ತರಕ್ಕೆ ನಿರ್ಮಿಸಿದ್ದು, ವೃದ್ಧರು, ಮಕ್ಕಳು ಮನೆಗೆ ಹೋಗಲು ಆಗದಂತಹ ಪರಿಸ್ಥಿತಿ ಇದೆ. ಎಲ್ಲ ಕಾಮಗಾರಿಗಳೂ ಅರ್ಧಕ್ಕೆ ನಿಂತಿವೆ. ಕೇಳಿದರೆ, ಗುತ್ತಿಗೆದಾರರಿಗೆ ಹಣ ಕೊಟ್ಟಿಲ್ಲ ಎನ್ನುತ್ತಾರೆ. ಅವರ ಸಮಸ್ಯೆ ಏನೇ ಇರಲಿ, 9 ತಿಂಗಳಲ್ಲಿ ಮುಗಿಬೇಕಿದ್ದ ಕೆಲಸಗಳು, ಎರಡು ವರ್ಷವಾದರೂ ಮುಗಿದಿಲ್ಲ. ನಮ್ಮ ಗೋಳು ಯಾರ ಮುಂದೆ ಹೇಳಬೇಕು.•ಜಗನ್ನಾಥ ಮುತ್ತತ್ತಿ ಮತ್ತು ಅರವಿಂದ ಆಲೂರ, ರಾಂಪುರ ಗ್ರಾಮಸ್ಥರು
ಕಾಮಗಾರಿ ಏಕೆ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂಬುದು ತಿಳಿದಿಲ್ಲ. ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು, ಪರಿಶೀಲಿಸುತ್ತೇನೆ. ಅಲ್ಲದೇ ಜಿಲ್ಲೆಯ ಪುನರ್‌ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕಾಮಗಾರಿಗಳು ಯಾವ ಹಂತದಲ್ಲಿವೆ. ಎಷ್ಟು ಕಾಮಗಾರಿ ಪೂರ್ಣಗೊಂಡಿವೆ ಎಂಬುದರ ವಿವರ ಪಡೆದು, ಪುನರ್‌ವಸತಿ ಕೇಂದ್ರಗಳ ಸಂತ್ರಸ್ತರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.•ಬಾಯಕ್ಕ ಮೇಟಿ, ಜಿಪಂ ಅಧ್ಯಕ್ಷೆ
•ಶ್ರೀಶೈಲ ಕೆ. ಬಿರಾದಾರ