Advertisement
ಸೂಕ್ತ ವೈದ್ಯಕೀಯ ಸವಲತ್ತುಗಳು ಇಲ್ಲದೆ ಕಡಬ ಭಾಗದ ಜನತೆ ದೂರದ ಪುತ್ತೂರು, ಮಂಗಳೂರಿಗೆ ಚಿಕಿತ್ಸೆಗಾಗಿ ತೆರಳಬೇಕಾದ ಅನಿವಾರ್ಯ ಇದೆ. ಕೇಂದ್ರ ಸರಕಾರದ ಆಯುಷ್ಮಾನ್ ಭಾರತ ಯೋಜನೆಯ ಮೂಲಕ ಆರೋಗ್ಯ ಇಲಾಖೆಯಿಂದ ಬಿಪಿಎಲ್ ಪಡಿತರದಾರರಿಗೆ ವಾರ್ಷಿಕ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಪಡಿತರದಾರಿಗೆ ಶೇ. 30ರಷ್ಟು ಉಚಿತ ಚಿಕಿತ್ಸೆಗಳ ಸೌಲಭ್ಯ ಇದೆ. ಕಡಬ ತಾ|ನ ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ ಭಾಗದಲ್ಲಿ ಆಸ್ಪತ್ರೆಗಳಿದ್ದರೂ ಉಚಿತ ಚಿಕಿತ್ಸೆಗೆ ಈ ಭಾಗದ ಜನತೆ ಮಾತ್ರ ಪುತ್ತೂರು, ಮಂಗಳೂರಿಗೆ ಹೋಗಬೇಕಿದೆ. ಕಡಬ ತಾ| ವ್ಯಾಪ್ತಿಯ ಸುಬ್ರಹ್ಮಣ್ಯದಲ್ಲಿ ದಿನಂಪ್ರತಿ ಸಾವಿರಾರು ಯಾತ್ರಿಕರು ಬರುತ್ತಿದ್ದರೂ ಅಲ್ಲಿಯೂ ಸಮರ್ಪಕ ವೈದ್ಯಕೀಯ ಸವಲತ್ತುಗಳಿಲ್ಲದೆ ಜನರು ಪರದಾಡುವಂತಾಗಿದೆ.
ಕಡಬದಲ್ಲಿ ಸುಮಾರು 5 ಕೋಟಿ ರೂ.ಗಳಿಗೂ ಹೆಚ್ಚು ಅನುದಾನ ವ್ಯಯಿಸಿ ಸಮುದಾಯ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿಗೆ ಅಗತ್ಯ ತಜ್ಞ ವೈದ್ಯರ ನೇಮಕವಾಗಿಲ್ಲ. ಸಿಬಂದಿ ಕೊರತೆ, ವೈದ್ಯಕೀಯ ಸಲಕರಣೆಗಳ ಕೊರತೆಯಿಂದ ಈ ಆಸ್ಪತ್ರೆ ತಲೆನೋವು, ಜ್ವರ ಹಾಗೂ ಅಪಘಾತ ನಡೆದಾಗ ಪ್ರಥಮ ಚಿಕಿತ್ಸೆ ಮೊದಲಾದ ಸೀಮಿತ ಚಿಕಿತ್ಸೆಗಳಿಗೆ ಮೀಸಲಾಗಿದೆ. ಈ ಮಧ್ಯೆ ಸ್ಥಳೀಯ ಜನರು ಕಡಬದಲ್ಲಿ ಹೊಸದಾಗಿ ಆರಂಭಗೊಂಡಿರುವ ಖಾಸಗಿ ಚಿಕಿತ್ಸಾಲಯಕ್ಕೆ ತೆರಳುವ ಅನಿವಾರ್ಯ ಎದುರಾಗಿದೆ. ಆದರೆ ಅಲ್ಲಿ ದುಬಾರಿ ಶುಲ್ಕ ಪಡೆಯಲಾಗುತ್ತಿದೆ ಎಂಬ ದೂರುಗಳೂ ಕೇಳಿಬರುತ್ತಿವೆ. ಕಡಬ ಸಮುದಾಯ ಆಸ್ಪತ್ರೆಗೆ ತಜ್ಞ ವೈದ್ಯರು, ವೈದ್ಯಕೀಯ ಸಲಕರಣೆ ನೀಡಿ ಸೌಲಭ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳು ಸೂಕ್ತ ರೀತಿಯಲ್ಲಿ ಪ್ರಯತ್ನಿಸುತ್ತಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ತಜ್ಞ ವೈದ್ಯರ ನೇಮಕ ಬಳಿಕ ಸೌಲಭ್ಯ
ಆಯುಷ್ಮಾನ್ ಯೋಜನೆಯಡಿಯಲ್ಲಿ ಉಚಿತ ಚಿಕಿತ್ಸೆ ಸೌಲಭ್ಯವನ್ನು ಆಸ್ಪತ್ರೆಗೆ ನೀಡಬೇಕಾದರೆ ತಜ್ಞ ವೈದ್ಯರು ಇರಬೇಕು. ಆದರೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಇಲ್ಲದಿರುವುದರಿಂದ ಅಲ್ಲಿಗೆ ನೀಡಲಾಗಿಲ್ಲ, ತಜ್ಞ ವೈದ್ಯರ ನೇಮಕವಾದ ಬಳಿಕವಷ್ಟೇ ಆಯುಷ್ಮಾನ್ ಸೌಲಭ್ಯವನ್ನು ನೀಡಲಾಗುತ್ತದೆ.
-ಡಾ| ರಾಮಚಂದ್ರ ಬಾಯರಿ, ಡಿಎಚ್‌ಒ
Related Articles
Advertisement