ಭಾಲ್ಕಿ: ಜಗತ್ತಿನಲ್ಲಿ ಗುರುವಿಗೆ ಪವಿತ್ರ ಸ್ಥಾನವಿದೆ. ಶಿಕ್ಷಕರು ಗುರುಗಳಾಗಿ ಕಾರ್ಯನಿರ್ವಹಿಸುವರು. ಹೀಗಾಗಿ ಶಿಕ್ಷಕರಿಗೆ ಸಮಾನವಾದ ವೃತ್ತಿ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಪರಿವರ್ತನೆಯ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಭಾರತೀಯ ಯುವ ಜನಾಂಗದ ಬುದ್ಧಿ ಪ್ರಕಾಶಮಾನವಾಗಿ ಮಾಡುವ ಕಾರ್ಯ ಶಿಕ್ಷಕರದ್ದಾಗಿದೆ. ಶಿಕ್ಷಕರು ದೇಶದ ಬೆನ್ನೆಲಬು. ತಾಲೂಕಿನ ಎಲ್ಲ ಶಿಕ್ಷಕರೂ ಉತ್ತಮ ಶಿಕ್ಷಕರೇ ಆಗಿದ್ದೀರಿ. ಹೀಗಾಗಿ ಶಿಕ್ಷಕ ದಿನಾಚರಣೆಯಾದ ಇಂದು ಎಲ್ಲ ಶಿಕ್ಷಕರನ್ನು ಸತ್ಕರಿಸಿ ಗೌರವಿಸುವ ಕಾರ್ಯ ಮಾಡಲಾಗುತ್ತಿದೆ. ಜನಾಭಿಪ್ರಾಯ ಮೂಡಿಸುವ ಶಕ್ತಿ ಶಿಕ್ಷಕರಿಗೆ. ಶಿಕ್ಷಕರು ಓದುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನವ ಭಾರತ ನಿರ್ಮಾಣ ಶಾಲೆಯಿಂದಲೇ ಆಗುವುದು. ಹೀಗಾಗಿ ನಮ್ಮಲ್ಲಿ ನೈಜ ಪರೀಕ್ಷೆ ನಡೆಸಿ ಈ ವರ್ಷ ಎಸ್‌ಎಸ್ ಎಲ್‌ಸಿ ಯಲ್ಲಿ ಪ್ರತಿಶತ ಫಲಿತಾಂಶ ತರುವ ಗುರಿ ಹೊಂದಬೇಕು. ಆತ್ಮವಿಶ್ವಾಸವಿದ್ದರೇ ಎಲ್ಲವೂ ಸಾಧ್ಯ ಎಂದು ಹೇಳಿದರು.
ಸಾನ್ನಿಧ್ಯವಹಿಸಿ ಮಾತನಾಡಿದ ಹಿರೇಮಠದ ಡಾ| ಬಸವಲಿಂಗ ಪಟ್ಟದ್ದೇವರು, ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉತ್ತಮ ಸ್ಥಾನವಿದೆ. ಶಿಕ್ಷಕರು ಗುರುವಿನ ಸ್ಥಾನದಲ್ಲಿದ್ದು ವಿದ್ಯಾರ್ಥಿಗಳ ಬುದ್ಧಿಮಟ್ಟ ಹೆಚ್ಚಿಸುವ ಕಾರ್ಯ ಮಾಡಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಸವಂತರಾಯ ಜಿಡ್ಡೆ ಮಾತನಾಡಿದರು. ಇದೇ ವೇಳೆ ತಾಲೂಕಿನ 230 ಪ್ರಾಥಮಿಕ ಮತ್ತು 30 ಪ್ರೌಢಶಾಲೆಯ ಒಟ್ಟು 1850 ಶಿಕ್ಷಕರಿಗೆ ಶಾಸಕ ಈಶ್ವರ ಖಂಡ್ರೆ ಸನ್ಮಾನಿಸಿ ಗೌರವಿಸಿದರು. ಆಣದೂರಿನ ವರಜ್ಯೋತಿ ಭಂತೆ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಅಶೋಕ ಗಾಯಕವಾಡ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಕ್ಷೇತ್ರ ಸಮನ್ವಯಾಧಿಕಾರಿ ಮನೋಹರ ಹೊಳಕರ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರೋಹಿದಾಸ ರಾಠೊಡ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲಿನಾಥ ಸಜ್ಜನ, ಕಾಂಗ್ರೆಸ್ ಮುಖಂಡ ಹಣಮಂತರಾವ ಚವ್ಹಾಣ, ರಾಜೆಪ್ಪ ಪಾಟೀಲ, ನಿರ್ಮಲಾ ಚಲವಾ, ಅಶೋಕ ಕುಂಬಾರ, ಬಾಲಾಜಿ ಕಾಂಬಳೆ, ಜೀತೆಂದ್ರ ಬಿರಾದಾರ, ರಾಜಕುಮಾರ ಜೊಳದಪಕೆ, ಬಬನ ಬಿರಾದಾರ, ಅಶೋಕ ತಾಂಬೋಳೆ, ಭೀಮಣ್ಣ ಕೊಂಕಣೆ, ಐಜಿಕ ಬಂಗಾರೆ, ಹಣಮಂತ ಕಾರಾಮುಂಗೆ, ಸೋಮನಾಥ ಹೊಸಾಳೆ, ಕೀರ್ತಿಲತಾ ಹೊಸಾಳೆ, ಮಾಯಾದೇವಿ ಗೋಖಲೆ, ಭಗವಾನ ವಲಂಡೆ, ಗದಗೆಪ್ಪ ಪಾಟೀಲ, ವಸಂತ ಹುಣಸನಾಳೆ, ನಿರಂಜಪ್ಪ ಪಾತ್ರೆ, ಸುಭಾಷ ಇಟಗೆ, ಸುಧಾಕರ ಗಾಯಕವಾಡ, ಪರಮೇಶ್ವರ ಕರಡ್ಯಾಳೆ, ಸಂತೋಷ ವಾಡೆ, ಶಕುಂತಲಾ ಸಾಲಮನಿ, ನಾಗನಾಥ ದುಬಲಗುಂಡೆ ಉಪಸ್ಥಿತರಿದ್ದರು.