Advertisement

ಹಳ್ಳಿ-ನಗರದಲ್ಲಿ ಸರ್ವರ್‌ ಸಮಸ್ಯೆಗೆ ಕೊನೆಯೇ ಇಲ್ಲ !

02:40 AM Apr 11, 2019 | mahesh |

ವಿಟ್ಲ: ಯಾವ ಪಕ್ಷ ಅಧಿಕಾರಕ್ಕೆ ಬಂದರೇನು? ಯಾವ ಅಭ್ಯರ್ಥಿ ಗೆದ್ದರೇನು? ಜನಸಾಮಾನ್ಯರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸುವವರಿಲ್ಲ. ಹತ್ತಾರು ವರ್ಷಗಳು ಕಳೆದರೂ ನೆಮ್ಮದಿ ಕೇಂದ್ರ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು ಜನೋಪ ಯೋಗಿಯಾಗಲಿಲ್ಲ. ನಾಗರಿಕರು ತಮಗೆ ಅವಶ್ಯವಿರುವ ದಾಖಲೆ ಪಡೆಯಲು ಪರದಾಡುವುದು ತಪ್ಪಲಿಲ್ಲ. ಎಲ್ಲ ಪಕ್ಷಗಳ ಅವಧಿಯಲ್ಲಿ ಪ್ರಗತಿ ಕಾಣಲೇ ಇಲ್ಲ. ಇಂದಿನ ವರೆಗೂ ಸರ್ವರ್‌ ಸಮಸ್ಯೆ ನಿವಾರಿಸಲು ಯಾರ ಆಡಳಿತದಲ್ಲಿಯೂ ಸಾಧ್ಯವಾಗಲಿಲ್ಲ. ದಿನಗಟ್ಟಲೆ ಸರದಿ ಸಾಲಲ್ಲಿ ನಿಂತು ಸೋತು ಹೋಗಿದ್ದೇವೆ, ಕಂಗಾಲಾಗಿದ್ದೇವೆ ಎಂದು ನಾಗರಿಕರು ದೂರುತ್ತಿದ್ದಾರೆ.

Advertisement

ನೆಮ್ಮದಿ ಕೇಂದ್ರ
ಹತ್ತಾರು ವರ್ಷಗಳ ಹಿಂದೆ ನೆಮ್ಮದಿ ಕೇಂದ್ರ ಹೋಬಳಿ ಕೇಂದ್ರಗಳಲ್ಲಿ ತೆರೆಯ ಲ್ಪಟ್ಟಿತು. ಜನರು ಪಹಣಿ ಪತ್ರಿಕೆಗೆ ತಾ| ಕೇಂದ್ರಕ್ಕೆ ತೆರಳುವುದನ್ನು ತಪ್ಪಿಸುವ ಕ್ರಮದ ಬಗ್ಗೆ ಸಂತಸಪಟ್ಟರು. ಸಮಯ, ಆರ್ಥಿಕ ಉಳಿತಾಯವಾಯಿತೆಂದು ಊಹಿಸಿದ್ದರೆ ಕೆಲವೇ ಸಮಯದ ಬಳಿಕ ನೆಮ್ಮದಿ ಕೇಂದ್ರವು ಜನರ ನೆಮ್ಮದಿ ಕೆಡಿಸಲು ಆರಂಭಿಸಿತು. ಬಳಿಕ ಅದಕ್ಕೆ ಅಟಲ್‌ಜೀ ಜನಸ್ನೇಹಿ ಕೇಂದ್ರವೆಂದು ನಾಮಕರಣ ಮಾಡಲಾಯಿತು. ಹೆಸರು ಬದಲಾವಣೆಯಿಂದ ನೆಮ್ಮದಿ ಬರಲೇ ಇಲ್ಲ.

ಬಾಪೂಜಿ ಸೇವಾ ಕೇಂದ್ರ!
ಬಾಪೂಜಿ ಸೇವಾ ಕೇಂದ್ರ! ಇದು ಪ್ರತಿ ಗ್ರಾ.ಪಂ.ನಲ್ಲಿ ತೆರೆಯಲಾದ ಯೋಜನೆ. ಇಲ್ಲಿ 100ಕ್ಕೂ ಅಧಿಕ ಸೌಲಭ್ಯಗಳು ನಾಗರಿಕ ರಿಗೆ ಸಿಗಬೇಕೆಂದು ಸರಕಾರ ಯೋಜನೆ ರೂಪಿಸಿತ್ತು. ಪ್ರತಿ ಗ್ರಾ.ಪಂ.ಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆರ್‌ಟಿಸಿ (ಪಹಣಿ ಪತ್ರಿಕೆ), ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ವಾಸ್ತವ್ಯ ದೃಢೀಕರಣ ಪತ್ರ, ವಿಧವಾ ದೃಢೀಕರಣ ಪತ್ರ, ನಿರುದ್ಯೋಗಿ ದೃಢೀಕರಣ ಪತ್ರ ಮತ್ತು ಇತರ ಹಲವಾರು ಮಾಹಿತಿ ಮತ್ತು ಪತ್ರಗಳನ್ನು ಈ ಸೇವಾ ಕೇಂದ್ರದಲ್ಲಿ ಗ್ರಾಮಸ್ಥರಿಗೆ ಒದಗಿಸಬೇಕು. ಅಂದರೆ ಪಂ.ನಲ್ಲಿ ಈ ವರೆಗೆ ನೀಡುತ್ತಿದ್ದ ವ್ಯವಸ್ಥೆಗಳಲ್ಲದೇ ಕಂದಾಯ ಇಲಾಖೆಯ ನೂರಾರು ದಾಖಲೆ ಒದಗಿಸ ಬೇಕಾದ ಜವಾಬ್ದಾರಿಯಿದೆ. ಹಳ್ಳಿಯಿಂದ ತಾ| ಕೇಂದ್ರಕ್ಕೆ ತೆರಳುವ ಬದಲಾಗಿ ಮನೆ ಬಾಗಿಲಲ್ಲೇ ಸೇವೆ ಒದಗಿಸುವ ಉದ್ದೇಶವಿದೆ. ಆದರೆ ಇದಾವುದೂ ತತ್‌ಕ್ಷಣ ನಾಗರಿಕರನ್ನು ಸ್ಪಂದಿಸುತ್ತಿಲ್ಲ. ಇದೀಗ ಸರಕಾರ 100 ಸೌಲಭ್ಯ ಗಳನ್ನು 55ಕ್ಕಿಳಿಸಿದ್ದೇ ಹೊಸ ಬೆಳವಣಿಗೆ.

ಪ್ರಗತಿಯ ಹೆಜ್ಜೆಯಲ್ಲಿ
ಪ್ರಗತಿ ಹೆಜ್ಜೆಯಲ್ಲಿ ಕೆಲವು ಅಂಶಗಳು ಇದೀಗ ನಾಗರಿಕರಿಗೆ ಒದಗಿಸಲಾಗುತ್ತದೆ. ವಿದ್ಯುತ್‌ ಸಮಸ್ಯೆ, ಸರ್ವರ್‌ ಸಮಸ್ಯೆ ಹೊರತು ಪಡಿಸಿದ ದಿನಗಳಲ್ಲಿ ಪಂ.ಕಾರ್ಯಾಲಯ ನೀಡಬೇಕಾದ ಕೆಲವು ಸೌಲಭ್ಯ ಗಳನ್ನೂ ಇದೇ ಬಾಪೂಜಿ ಸೇವಾ ಕೇಂದ್ರದಲ್ಲಿ ಒದಗಿಸುತ್ತಿದೆ. ಆಯಾ ಗ್ರಾ.ಪಂ.ಗಳಲ್ಲಿ ಈ ಸೌಲಭ್ಯ ಕಲ್ಪಿಸಬಹುದಾಗಿದ್ದರೂ ಪಹಣಿ ಸಿಗುತ್ತಿಲ್ಲ ಎಂಬ ವಿಚಾರ ವಿಷಾದನೀಯ.

ಆಧಾರ್‌ ಕಾರ್ಡ್‌
ಸರಕಾರದ ನಿಯಮಾವಳಿಗಳ ಪ್ರಕಾರ ಪ್ರತಿಯೊಂದಕ್ಕೂ ಆಧಾರ್‌ ಕಾರ್ಡ್‌ ಬೇಕು. ಆದರೆ ನೆಮ್ಮದಿ ಕೇಂದ್ರಗಳಲ್ಲಿ, ಬಾಪೂಜಿ ಸೇವಾ ಕೇಂದ್ರಗಳಲ್ಲಿ ಆಧಾರ್‌ ಕಾರ್ಡ್‌ ಪಡೆಯುವುದಕ್ಕೆ ತಿಂಗಳುಗಳ ಕಾಲ ಕಾಯಬೇಕು. ಒಂದು ನೆಮ್ಮದಿ ಕೇಂದ್ರದಲ್ಲಿ ದಿನವೊಂದಕ್ಕೆ ಗರಿಷ್ಠವೆಂದರೆ 40-50 ಆಧಾರ್‌ ಕಾರ್ಡ್‌ ನೋಂದಣಿಯಾಗುತ್ತದೆ. ಆದರೆ ಅದಕ್ಕಾಗಿ 6 ತಿಂಗಳ ಮುನ್ನ ಟೋಕನ್‌ ಪಡೆಯುವ ಸಂಕಷ್ಟವಿತ್ತು. ಈ ಟೋಕನ್‌ ಪಡೆಯಲು ಸರದಿ ಸಾಲಲ್ಲಿ ನಿಲ್ಲಬೇಕು. ಆಮೇಲೆ ಆ ಟೋಕನ್‌ ಪಡೆದುಕೊಂಡು ಮತ್ತೆ ನೋಂದಣಿಗೆ ಸರದಿ ಸಾಲಲ್ಲಿ ನಿಲ್ಲಬೇಕು. ಆಗ ವಿದ್ಯುತ್‌ ಕೈಕೊಡುತ್ತದೆ, ಸರ್ವರ್‌ ಸಮಸ್ಯೆ ಉಂಟಾಗುತ್ತದೆ. ಮತ್ತೆ ಮರುದಿನ ಬರಬೇಕು. ಆಗ ಆ ದಿನ ಟೋಕನ್‌ ಪಡೆದವರ ಸಾಲು ಉದ್ದವಾಗಿ ರುತ್ತದೆ. ಇಂತಹ ಕಷ್ಟ ಜನಪ್ರತಿನಿಧಿಗಳಅಧಿಕಾರಿಗಳ ಮೇಲೆ ಪರಿಣಾಮ ಬೀರಿಲ್ಲ.

Advertisement

ಹಳ್ಳಿಯಿಂದ ತಾ| ಕೇಂದ್ರದವರೆಗೂ ಸರ್ವರ್‌ ಸಮಸ್ಯೆ
ಹಿಂದೆ ಹಳ್ಳಿಗರು 40 ಕಿ.ಮೀ. ದೂರದ ತಾ| ಕೇಂದ್ರಗಳಿಗೆ ತೆರಳಿ ಸೌಲಭ್ಯಗಳನ್ನು ಪಡೆಯಬೇಕಾಗುತ್ತಿತ್ತು. ಹಲವು ಬಾರಿ ಅಷ್ಟು ದೂರ ತೆರಳಿ, ಯಾವುದೋ ಸಮಸ್ಯೆಯಿಂದ ಅದು ಸಿಗದೇ ಹಿಂದಿರುಗಬೇಕಾಗುತ್ತಿತ್ತು. ಈ ಸಮಸ್ಯೆ ಬಗೆಹರಿಸಲು ಆಯಾ ಹೋಬಳಿ ಕೇಂದ್ರದಲ್ಲಿ ನೆಮ್ಮದಿ ಕೇಂದ್ರಗಳನ್ನು ತೆರೆಯಲಾಯಿತು. ಇಲ್ಲಿ ಪಹಣಿ ಪತ್ರಿಕೆ ನೀಡಲಾಗುತ್ತಿತ್ತು. ಇಲ್ಲಿ ಸರ್ವರ್‌ ಸಮಸ್ಯೆ. ಗ್ರಾ.ಪಂ. ಗಳಲ್ಲೇ ಇರುವ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಆ ವ್ಯವಸ್ಥೆ ಕಲ್ಪಿಸುವುದು ಉತ್ತಮವೇ. ಆದರೆ ಇಲ್ಲಿಯೂ ಸರ್ವರ್‌ ಸಮಸ್ಯೆ. ಹಳ್ಳಿಗರು ಇಲ್ಲಿ ಕಾಯುವುದಕ್ಕಿಂತ ಹೋಬಳಿ ಕೇಂದ್ರಕ್ಕೆ, ಅಲ್ಲಿ ಕಾದು ಸಿಗದೆ, ತಾ| ಕೇಂದ್ರಕ್ಕೆ ತೆರಳಿ, ದಿನಗಟ್ಟಲೆ ಅಲೆಯುವ ಪರಿಸ್ಥಿತಿ ಮುಂದುವರಿದಿದೆ. ಅಂದರೆ ವ್ಯವಸ್ಥೆಯ ಹೆಸರುಗಳು ಬದಲಾಗಿವೆ. ಆದರೆ ಹಳ್ಳಿಯ ಕೇಂದ್ರದಿಂದ ತಾಲೂಕು ಕೇಂದ್ರದವರೆಗೂ ಸಮಸ್ಯೆ ಒಂದೇ! ಅದು ಸರ್ವರ್‌ ಸಮಸ್ಯೆ!

ತಾಂತ್ರಿಕ ವೇಗ ಎಲ್ಲಿ ಹೋಯಿತು ?
ದೇಶ ತಾಂತ್ರಿಕವಾಗಿ ವೇಗವಾಗಿದೆ, ಆಧುನಿಕ ತಂತ್ರಜ್ಞಾನಗಳು ಹೆಗ್ಗಳಿಕೆಯಿದೆ. ಆದರೆ ಸರ್ವರ್‌ ಸಮಸ್ಯೆ ಹತ್ತು ವರ್ಷಗಳಿಂದಲೂ ಕಾಟ ಕೊಡುತ್ತಿದೆ. ಇದು ತಾಂತ್ರಿಕ ವ್ಯವಸ್ಥೆಯ ದುರಂತ. ಇದು ಬೆಂಗಳೂರು ಭೂಮಿ ಕೇಂದ್ರದಿಂದ ಸರಿಪಡಿಸಬೇಕಾದ ವ್ಯವಸ್ಥೆ. ಅಧಿಕಾರಿಗಳು, ಜನಪ್ರತಿನಿಧಿಗಳು ಬೆಂಗಳೂರಿನ ಭೂಮಿ ಕೇಂದ್ರಕ್ಕೆ ದೂರನ್ನು ತಲುಪಿಸಿಲ್ಲವೇನೋ ಎಂದು ನಾಗರಿಕರು ಚಿಂತಿಸುತ್ತಿದ್ದಾರೆ.

 ಚುನಾವಣೆಯ ಬಳಿಕ ಕ್ರಮ
ನೆಮ್ಮದಿ ಕೇಂದ್ರಗಳಲ್ಲಿ ಸಮಸ್ಯೆಯಿದೆ. ಸರ್ವರ್‌ ಸಮಸ್ಯೆ ಪರಿಹರಿಸಲು ನಮ್ಮಿಂದ ಅಸಾಧ್ಯ. ಬೆಂಗಳೂರು ಭೂಮಿ ಕೇಂದ್ರದವರು ಸರಿಪಡಿಸಬೇಕು. ಚುನಾವಣೆಯ ಬಳಿಕ ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರುತ್ತೇವೆ.
ಸಣ್ಣರಂಗಯ್ಯ, ತಹಶೀಲ್ದಾರರು, ಬಂಟ್ವಾಳ

 ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next