Advertisement

ಬಹೂಪಯೋಗಿ ಆಹಾರ ಫ‌ಲ ಹಲಸು ಇದ್ದಲ್ಲಿ ಬರಗಾಲವಿಲ್ಲ

12:56 AM Jul 05, 2019 | sudhir |

ಬದಿಯಡ್ಕ: ಹಲಸು ಎಲ್ಲಾ ಕಾಲಕ್ಕೂ ಆಗುವ ಆಹಾರ. ಹಲಸಿನ ಸೊಳೆ, ಬೀಜಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿಟ್ಟಲ್ಲಿ ಬೇಕಾದಾಗ ತೆಗೆದು ಉಪಯೋಗಿಸಬಹುದು. ಕಡಿಮೆಯೆಂದರೂ 6-8ತಿಂಗಳ ಕಾಲ ಹಲಸನ್ನು ವಿವಿಧ ರೂಪಗಳಲ್ಲಿ ಸೇವಿಸುವವರು ನಾವು. ಹಸಿಯಾಗಿಯೂ, ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿಯೂ ಉಪಯೋಗಿಸುವ ಹಲಸು ಇದ್ದಲ್ಲಿ ಬರಗಾಲವಿಲ್ಲ ಎಂದು ಬದಿಯಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಎನ್‌.ಕೃಷ್ಣ ಭಟ್ ಹೇಳಿದರು.

Advertisement

ಅವರು ಪಂಚಾಯತ್‌ಕುಟುಂಬಶ್ರೀ, ಸ್ವಸಹಾಯ ಸಂಘಗಳು, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದೊಂದಿಗೆ ಬದಿಯಡ್ಕ ಗುರುಸದನದಲ್ಲಿ ಜರಗಿದ ಹಲಸು ಮೇಳ ಉದ್ಘಾಟಿಸಿ ಮಾತನಾಡಿದರು.

ಹಿಂದಿನಿಂದಲೇ ಜನರು ಹಲಸಿನ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದು ಬಡವರ ಹಸಿವು ನೀಗುತ್ತಿದ್ದ ಹಲಸಿನ ಸೊಳೆಗಳನ್ನು ಉಪ್ಪಿನಲ್ಲಿ ಹಾಕಿಟ್ಟು ವರ್ಷದುದ್ದಕ್ಕೂ ಬಳಸುತ್ತಿದ್ದರು. ಉಂಡಲಕಾಳು ಹಪ್ಪಳ ಮುಂತಾದ ಪದಾರ್ಥಗಳು ತುಂಬಾ ದಿನ ಹಗಾಳಾಗದೆ ಉಳಿಯುವುದರಿಂದ ಬೇಸಗೆಯಲ್ಲಿ ಅವುಗಳನ್ನು ತಯಾರಿಸಿ ಮಳೆಗಾಲದಲ್ಲಿ ಉಪಯೋಗಿಸು ತ್ತಿದ್ದರು. ಹಳ್ಳಿಗಳಲ್ಲಿ ಈಗಲೂ ಇದನ್ನು ಕಾಣಬಹುದು. ಆದುದರಿಂದ ಹಲಸು ಬಡವರ ಪಾಲಿನ ಅನ್ನವಾಗುವ ಏಕೈಕ ಫಲ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಪಂಚಾಯತು ಉಪಾಧ್ಯಕ್ಷೆ ಸೈಬುನ್ನಿಸ ಅಧ್ಯಕ್ಷತೆ ವಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಶ್ಯಾಮ ಪ್ರಸಾದ್‌ ಮಾನ್ಯ ಮಾತನಾಡಿ ಹಲಸಿನ ಹಣ್ಣು ಮತ್ತು ಇತರ ಉತ್ಪನ್ನಗಳಿಗೆ ದೇಶ ವಿದೇಶಗಳಲ್ಲಿ ಅಪಾರವಾದ ಬೇಡಿಕೆಯಿದೆ. ಅದನ್ನು ಅರಿತು ಸರಿಯಾದ ಮಾರ್ಗದರ್ಶನ ಪಡೆದು ಹಲಸಿನ ತಿನಿಸುಗಳನ್ನು ವಿದೇಶಗಳಿಗೆ ರಫ್ತು ಮಾಡುವತ್ತ ಹೆಚ್ಚು ಪ್ರಯತ್ನ ಮಾಡಬೇಕು. ಖರ್ಚಿಲ್ಲದೆ ಬೆಳೆಯುವ ಬೆಳೆ ಇದಾಗಿದ್ದು ಹೆಚ್ಚು ಆದಾಯ ಗಳಿಸುವಲ್ಲಿ ನೆರವಾಗುವ ಗುಣವನ್ನು ಹೊಂದಿದೆ. ಹಲಸಿನ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವುದರಿಂದ ಸ್ವಾಲಂಭಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಬದಿಯಡ್ಕ ಗ್ರಾಮ ಪಂಚಾಯತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅನ್ವರ್‌ ಓಝೋನ್‌ ಹಾಗೂ ಸದಸ್ಯರುಗಳಾದ ಶಂಕರ ಡಿ, ಮುನೀರ್‌, ಜಯಶ್ರೀ, ರಾಜೇಶ್ವರಿ, ಜಯಂತಿ, ಪ್ರಸನ್ನ, ಲಕ್ಷ್ಮಿ ನಾರಾಯಣ ಪೈ, ವಿಶ್ವನಾಥ ಪ್ರಭು, ಮೊಹಮ್ಮದ್‌, ಪುಷ್ಪಕುಮಾರಿ, ಬಾಲಕೃಷ್ಣ ಶೆಟ್ಟಿ, ಪ್ರೇಮ ಕುಮಾರಿ, ಅನಿತಾ ಕ್ರಾಸ್ತಾ, ಶಾಂತಾ ಮತ್ತು ವಿವಿಧ ಕುಟುಂಬಶ್ರೀ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಬದಿಯಡ್ಕ ಕೃಷಿ ಭವನದ ಉದ್ಯೋಗಸ್ಥರು ಉಪಸ್ಥಿತರಿದ್ದರು.

ಹೆಚ್ಚಿದ ಬೇಡಿಕೆ

Advertisement

ನೂರಾರು ಹಲಸು ಪ್ರಿಯರು ಹಲಸಿನ ಮೇಳಕ್ಕೆ ಆಗಮಿಸಿದ್ದು ತಿನಿಸುಗಳನ್ನು ಕೊಂಡುಕೊಳ್ಳುವಲ್ಲಿ ಹೆಚ್ಚಿನ ಆಸಕ್ತಿ ತೋರಿದರು. ಪ್ರತಿ ಸ್ಟಾಲ್ನಲ್ಲಿಯೂ ಜನರ ಗುಂಪು ಆವರಿಸಿರುವುದು ಕಂಡುಬಂತು.

ಕನಿಷ್ಠ ವೆಚ್ಚ, ಗರಿಷ್ಠ ಲಾಭ ಸುಲಭವಾಗಿ ಲಭ್ಯವಾಗುವ ಹಲಸನ್ನು ಉಪಯೋಗಿಸಿ ತಯಾರಿಸಿದ ವಸ್ತುಗಳಿಗೆ ಬಹಳ ಬೇಡಿಕೆಯಿದೆ. ನಾವು ಬೇರೆ ಬೇರೆ ವಸ್ತುಗಳನ್ನು ಮನೆಯಲ್ಲಿ ತಯಾರಿಸಿ ಮಾರಾಟ ಮಾಡುತ್ತೇವೆ. ಹಲಸಿಗಿರುವ ಬೇಡಿಕೆ ಬೇರೆ ಯಾವ ವಸ್ತುಗಳಿಗಿಲ್ಲ. ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಲಾಭ ಗಳಿಸಬಹುದು.

-ವಿಜಯಲಕ್ಷ್ಮೀ ಮಾನ್ಯ, ಸ್ಥಳೀಯ ಹಲಸಿನ ಉತ್ಪನ್ನಗಳ ಮಾರಾಟಗಾರರು.

50ಕ್ಕೂ ಮಿಕ್ಕಿದ ಹಲವು ತರಹದ ಖಾದ್ಯಗಳು

ವೈವಿಧ್ಯಮಯವಾದ, ಶುಚಿ ರುಚಿಯಾದ 50ಕ್ಕೂ ಮಿಕಕಿದ ಹಲವು ತರಹದ ಖಾದ್ಯಗಳು ಹಲಸು ಪ್ರಿಯರನ್ನು ತನ್ನತ್ತ ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಹಲಸಿನ ದೋಸೆ, ಹಲಸಿನ ಕಡುಬು, ಹಲಸಿನ ಪಾಯಸ, ಹಲಸಿನ ಚಿಪ್ಸ್‌, ಹಲಸು ಮಂಚೂರಿ, ಹಲಸಿನ ಕಾಯಿ ಹಪ್ಪಳ, ಹಲಸಿನ ಹಣ್ಣಿನ ಹಪ್ಪಲ, ಹಲಸಿನ ಸೆಂಡಿಗೆ, ಹಲಸಿನ ಹಲ್ವಾ, ಹಲಸು ಸೋಳೆ, ಹಲಸಿನ ಮಾಂಬಳ, ಹಲಸು ಡ್ರೈ, ಬೇಯಿಸಿದ ಹೆಬ್ಬಲಸು, ಹಲಸಿನ ಐಸ್‌ಕ್ರೀಂ, ಬೇಯಿಸಿದ ಮಾವು, ಬೇಯಿಸಿದ ಅತ್ತಿಕಾಯಿ, ನೆಲ್ಲಿಕಾಯಿ ಉಪ್ಪುನೀರು, ಮಾವಿನ ಮಾಂಬಳ, ಬೆಳ್ಳುಳ್ಳಿ ಸಂಡಿಗೆ, ನೀರುಳ್ಳಿ ಸಂಡಿಗೆ, ಅಕ್ಕಿ ಸಂಡಿಗೆ, ನುಗ್ಗೆ ಸೊಪ್ಪು ಸಂಡಿಗೆ, ರಾಗಿ ಸಂಡಿಗೆ, ಸಾಬಕ್ಕಿ ಸಂಡಿಗೆ, ಒಣಗಿಸಿದ ಲಿಂಬೆ, ಒಣಗಿಸಿದ ಹಲಸಿನ ಬೀಜ, ಮಜ್ಜಿಗೆ ಮೆಣಸು, ರಾಗಿ ಮಾಲ್r, ಕಷಾಯ ಹುಡಿ, ರಸಂ ಮತ್ತು ಅವಲಕ್ಕಿ ಮಸಾಲೆ, ಸಾಂಬಾರು ಹುಡಿ, ಹುರಿದ ಹುಣಸೆ ಬೀಜ, ಕೆತ್ತೆ ಹುಳಿ, ಬಟಾಟೆ ಹಪ್ಪಲ, ಗೆಣಸಿನ ಹಪ್ಪಲ, ಮಾವಿನ ಉಪ್ಪಿನಕಾಯಿ, ದೊಡ್ಲಿ ಉಪ್ಪಿನಕಾಯಿ, ಅಪ್ಪೆಮಿಡಿ ಉಪ್ಪಿನಕಾಯಿ, ಮಿಡಿ ಅಂಬಟೆವ ಉಪ್ಪಿನಕಾಯಿ, ಕರಂಡಿ ಉಪ್ಪಿನಕಾಯಿ, ನೆಲ್ಲಿ ಉಪ್ಪಿನಕಾಯಿ, ಉದ್ದಿನ ಖಾರ ಹಪ್ಪಲ, ಗಜನಿಂಬೆ ಉಪ್ಪಿನಕಾಯಿ, ಬೇಯಿಸಿ ಒಣಗಿಸಿದ ಗೆಣಸು, ಈಂದ್‌ ಹುಡಿ, ಜುಮ್ಮನ ಕಾಯಿ (ಕಾವಂಟೆ ಕಾಯಿ) ಸೇರಿದಂತೆ ಬಣ್ಣ ಬಣ್ಣದ ರುಚಿ ರುಚಿಯಾದ ತಿನಿಸುಗಳ ಪರಿಮಳ ಬಾಯಿ ಚಪ್ಪರಿಸುವಂತೆ ಮಾಡಿತು.
ಖಾದ್ಯಗಳ ಆಕರ್ಷಣೆ

ಅಧ್ಯಯನ ನಡೆಸಲು ಈ ತಿಂಗಳಲ್ಲಿ ಸತ್ವಯುತ ಆಹಾರವಾಗಿರುವ ಹಲಸಿನಕಾಯಿ, ಹಣ್ಣುಗಳಲ್ಲಿ ಇರುವ ಪೌಷ್ಠಿಕಾಂಶ ಮತ್ತು ಪ್ರಕೃತಿದತ್ತವಾದ ಗುಣಗಳು ಇಂದಿನ ಫಾಸ್ಟ್‌ಫುಡ್‌ಗಳಿಂದ ಲಭಿಸದು. ಕೃತಕ ಬಣ್ಣ, ಪರಿಮಳದಿಂದ ನಾಲಗೆಗೆ ರುಚಿಯೆನಿಸುವ ತಿನಿಸುಗಳು ದೇಹಕ್ಕೆ ಅಪಾಯಕಾರಿ. ಆದರೆ ಹಲಸಿನ ರುಚಿ, ಪರಿಮಳ, ಸತ್ವ ಎಲ್ಲವೂ ದೇಹಕ್ಕೆ ಹಿತ ಆದುದರಿಂದ ಮಳಿಗೆಯಲ್ಲಿ ಹೆಚ್ಚು ಹಲಸಿನ ಉತ್ಪನ್ನಗಳು ಮಾರಾಟ ಆಗುತ್ತಿವೆ.
-ಗಣೇಶ ಪ್ರಭು ಮೂಲ್ಕಿ, ಕಾಹಲಸಿನ ಉತ್ಪನ್ನಗಳ ಮಾರಾಟಗಾರರು.
Advertisement

Udayavani is now on Telegram. Click here to join our channel and stay updated with the latest news.

Next