Advertisement

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸಿಬಂದಿಯಿಲ್ಲ, ವೈದ್ಯರೇ ಎಲ್ಲ !

09:15 AM Jul 11, 2019 | sudhir |

ಕುಂದಾಪುರ: ತಿಂಗಳೊಂದಕ್ಕೆ 10,684 ಹೊರರೋಗಿಗಳು, ಇರುವ 30 ಹಾಸಿಗೆಗಳಿಗೆ ತಿಂಗಳೊಂದರಲ್ಲಿ ದಾಖಲಾಗುವ 1,061 ರೋಗಿಗಳು, ಮಾಸಿಕ ಸರಾಸರಿ 100ಕ್ಕಿಂತ ಹೆಚ್ಚು ಹೆರಿಗೆಗಳು. ಐಸಿಯು, ಡಯಾಲಿಸಿಸ್‌, ತುರ್ತು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಹೀಗೆ ಎಲ್ಲ ಸೌಕರ್ಯ ಹೊಂದಿದ ತಾ. ಸ. ಆಸ್ಪತ್ರೆಯ ಸಿಬಂದಿ ಕೊರತೆ ತುಂಬಿಸಲು ಸಾಧ್ಯವೇ ಆಗಿಲ್ಲ.

Advertisement

ಕುಂದಾಪುರ ಉಪವಿಭಾಗದ ಆಸ್ಪತ್ರೆಯಾದ ಕಾರಣ ಇದು ರಾಜ್ಯ ವಲಯದ ಆಸ್ಪತ್ರೆ.

ಖಾಸಗಿಯನ್ನೂ ಮೀರಿದ ಸೌಲಭ್ಯ

ವಿಶೇಷ ಮಕ್ಕಳ ಚಿಕಿತ್ಸಾ ವಿಭಾಗವಿದ್ದು 6 ಬೆಡ್‌ಗಳಿವೆ. ಅವಧಿಪೂರ್ವ ಪ್ರಸವದ ಮಕ್ಕಳು, ಹುಟ್ಟುತ್ತಲೇ ಜಾಂಡಿಸ್‌ನಂತಹ ಕಾಯಿಲೆಗೆ ಒಳಗಾದ ಮಕ್ಕಳಿಗಾಗಿ ರೇಡಿಯಂಟ್ ವಾರ್ಮರ್ಸ್‌, ಫೋಟೋಥೆರಪಿ ಘಟಕಗಳು ಇವೆ ಎಂದು ವಿವರಿಸುತ್ತಾರೆ ಚಿಕಿತ್ಸಕ ಆಡಳಿತ ವೈದ್ಯಾಧಿಕಾರಿ ಡಾ| ರಾಬರ್ಟ್‌ ರೆಬೆಲ್ಲೋ.

ಅಪೌಷ್ಟಿಕ ಮಕ್ಕಳಿಗೆ

Advertisement

ಅಪೌಷ್ಟಿಕ ಮಕ್ಕಳ ಪುನಶ್ಚೇತನ ಕೇಂದ್ರವಿದೆ. ವಯಸ್ಸು, ಎತ್ತರಕ್ಕೆ ಅನುಗುಣವಾಗಿ ತೂಕ ಇಲ್ಲದಿದ್ದರೆ ಗ್ರಾಮಾಂತರ ಆಸ್ಪತ್ರೆಯಿಂದ ಶಿಫಾರಸ್ಸಾದ ಮಕ್ಕಳಿಗೆ 14 ದಿನಗಳು ಪೌಷ್ಟಿಕ ಆಹಾರ ತಯಾರಿಸಿ ಚಿಕಿತ್ಸೆ ನೀಡಲಾಗುತ್ತದೆ. 6 ತಿಂಗಳಲ್ಲಿ 37 ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ. ಅಂತಹ ಮಕ್ಕಳ ಪೋಷಕರೊಬ್ಬರಿಗೆ ನರೇಗಾ ಪ್ರಕಾರ ದಿನಕ್ಕೆ 259 ರೂ. ಕೂಲಿ, 125 ರೂ. ಊಟದ ಭತ್ತೆಯನ್ನು ನೇರ ಖಾತೆಗೆ ಜಮೆ ಮಾಡಲಾಗುತ್ತದೆ.

ಡಯಾಲಿಸಿಸ್‌

5 ಡಯಾಲಿಸಿಸ್‌ ಘಟಕಗಳು ಬಿ.ಆರ್‌.ಎಸ್‌. ಟ್ರಸ್ಟ್‌ ಮೂಲಕ ನಿರ್ವಹಿಸಲ್ಪಡುತ್ತಿದೆ. ಶವಗಳನ್ನು ಇಡಲು 2 ಫ್ರೀಝರ್‌ಗಳಿದ್ದು ರೋಟರಿ ವತಿಯಿಂದ ಇನ್ನೆರಡು ಕೊಡುಗೆಯಾಗಿ ದೊರೆಯಲಿವೆೆ.

ಇ ಹಾಸ್ಪಿಟಲ್

ಡಿಜಿಟಲ್ ಎಕ್ಸ್‌ರೇ ಮೂಲಕ ಪ್ರಿಂಟ್ಗಿಂತ ಮುನ್ನ ವೈದ್ಯರ ಕಂಪ್ಯೂಟರ್‌ನಲ್ಲಿ ಚಿತ್ರ ಮೂಡುತ್ತದೆ. ಪ್ರಯೋಗಾಲಯ ಕೂಡಾ ಖಾಸಗಿ ಆಸ್ಪತ್ರೆಯನ್ನೂ ಮೀರಿಸುವಂತೆ ಕಂಪ್ಯೂಟರೀಕರಣವಾಗಿದೆ.

ಸರಕಾರಿ ವಿಮೆ

ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ಮಾಡಿಕೊಡಲಾಗುತ್ತದೆ. ಈ ಸೌಲಭ್ಯದ ಚಿಕಿತ್ಸೆಗಳೂ ಇವೆ. ಇದರನ್ವಯ ಆಸ್ಪತ್ರೆಗೆ ಜೂನ್‌ ಅಂತ್ಯದವರೆಗೆ 5.5 ಲಕ್ಷ ರೂ. ಸರಕಾರದಿಂದ ಬಂದಿದೆ. ಇದು ಆರೋಗ್ಯ ರಕ್ಷಾ ನಿಧಿ ಮೂಲಕ ಆಸ್ಪತ್ರೆ ಅಭಿವೃದ್ಧಿಗೆ ವಿನಿಯೋಗವಾಗಲಿದೆ.

ವೈದ್ಯರ ಕೊರತೆ

ಆಸ್ಪತ್ರೆಯಲ್ಲಿ ಮಂಜೂರುಗೊಂಡ ಹುದ್ದೆಗಳು ಭರ್ತಿಯಾಗಿಲ್ಲ. 24 ತಾಸು ನಿರಂತರ ಸೇವೆ ನೀಡಬೇಕಾದರೆ 4 ಮಂದಿ ಕ್ಯಾಶುವಾಲಿಟಿ ವೈದ್ಯರ ಅಗತ್ಯವಿದೆ. ಸ್ಕ್ಯಾನಿಂಗ್‌ ವೈದ್ಯರಿಲ್ಲ. ಚರ್ಮರೋಗ ತಜ್ಞರ ಹುದ್ದೆ ಸೃಜಿಸಬೇಕಿದೆ. ಫಿಸೀಶಿಯನ್‌ ಹುದ್ದೆ ಒಂದೇ ಇದೆ. ಸೇವೆಯಲ್ಲಿರುವ 9 ಮಂದಿ ಶಸ್ತ್ರಚಿಕಿತ್ಸಾ ವೈದ್ಯರೇ ಹೊರರೋಗಿ ವಿಭಾಗವನ್ನೂ ನೋಡಿಕೊಳ್ಳಬೇಕು, ತುರ್ತು ಚಿಕಿತ್ಸಾ ಘಟಕವನ್ನೂ ನೋಡಿಕೊಳ್ಳಬೇಕು, ಇತರ ಚಿಕಿತ್ಸಾ ವಿಭಾಗದಲ್ಲೂ ಕರ್ತವ್ಯ ನಿರ್ವಹಿಸಬೇಕಾದ ಒತ್ತಡದಲ್ಲಿದ್ದಾರೆ. ಇಬ್ಬರು ವೈದ್ಯರ ಹುದ್ದೆ ಖಾಲಿಯಿದೆ.

ನೂತನ ಆಸ್ಪತ್ರೆ

ಆಸ್ಪತ್ರೆ ಪಕ್ಕದಲ್ಲಿ ಕೊಡುಗೆಯಾಗಿ ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮೂಲಕ ಸುಸಜ್ಜಿತ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಾರ್ಡ್‌ ನಿರ್ಮಾಣ ಕಾರ್ಯ ನಡೆದಿದೆ. ಸೋಮವಾರ ರಾತ್ರಿ ಪೂಜಾವಿಧಿಗಳು ಜರಗಿವೆೆ. 2007ರಲ್ಲಿ 30 ಹಾಸಿಗೆಗಳ ಆಸ್ಪತ್ರೆ ಕಟ್ಟಡ ನೀಡಿದ್ದ ಅವರು ಇಲ್ಲಿ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾದುದನ್ನು ಗಮನಿಸಿ ಬೇಡಿಕೆಯಂತೆ 100 ಹಾಸಿಗೆಗಳ ಆಧುನಿಕ ಸೌಕರ್ಯಗಳುಳ್ಳ ಸುಸಜ್ಜಿತ ಆಸ್ಪತ್ರೆ ಕಟ್ಟಡ ನೀಡಿದ್ದಾರೆ.

ಪ್ರತ್ಯೇಕ ಆಸ್ಪತ್ರೆಗೆ ಬೇಡಿಕೆ

ಜಿಲ್ಲಾ ಆರೋಗ್ಯಾಧಿಕಾರಿ ಮೂಲಕ ಮಹಿಳೆ ಮತ್ತು ಮಕ್ಕಳ ಚಿಕಿತ್ಸೆಗೆ ಪ್ರತ್ಯೇಕ ಆಸ್ಪತ್ರೆ ಮಂಜೂರಿಗೆ ಸರಕಾರಕ್ಕೆ ಬರೆದುಕೊಳ್ಳಲಾಗಿದೆ. ಮಂಜೂರಾದರೆ ಹೆಚ್ಚಿನ ಸೌಲಭ್ಯ, ಚಿಕಿತ್ಸೆ ದೊರೆಯಲಿದೆ.

ಶುಶ್ರೂಷಕ ಅಧೀಕ್ಷಕ ಗ್ರೇಡ್‌ 1ರಲ್ಲಿ ಮಂಜೂರಾದ 1 ಹುದ್ದೆ, ಗ್ರೇಡ್‌ 2ರಲ್ಲಿ ಮಂಜೂರಾದ 2 ಹುದ್ದೆ, ಸೀನಿಯರ್‌ ಸ್ಟಾಫ್ ನರ್ಸ್‌ 2 ಹುದ್ದೆಗಳಲ್ಲಿ 2, ಕಚೇರಿ ಪ್ರ.ದ. ಗುಮಾಸ್ತ 1, ದ್ವಿ.ದ.ಗುಮಾಸ್ತ 3ರಲ್ಲಿ 2, ಟೈಪಿಸ್ಟ್‌ 2ರಲ್ಲಿ 1, ಕಿರಿಯ ಆರೋಗ್ಯ ಸಹಾಯಕಿ 2ರಲ್ಲಿ 2, ಎಕ್ಸ್‌ರೇ ಸಹಾಯಕ 3ರಲ್ಲಿ 3, ಪ್ರಯೋಗಾಲಯ ಸಹಾಯಕ 1, ಅಡುಗೆಯವರು 2ರಲ್ಲಿ 1, ಡಿ ದರ್ಜೆ 22ರಲ್ಲಿ 16 ಹುದ್ದೆ ಖಾಲಿಯಿದೆ. ಹೊಸ ಕಟ್ಟಡ ಕಾಮಗಾರಿಗಾಗಿ 100 ಹಾಸಿಗೆಗಳಿದ್ದ ಆಸ್ಪತ್ರೆ ಈಗ 60 ಹಾಸಿಗೆಗಳಿಗೆ ಇಳಿದಿದೆ. ಇದರಲ್ಲಿ 30 ಹೆರಿಗೆ ಪ್ರಕರಣಗಳಿಗೆ, 30 ಇತರರಿಗೆ ದೊರೆಯುತ್ತದೆ. ಹಾಗಿದ್ದರೂ ದಾಖಲಾಗುವ ರೋಗಿಗಳ ಸಂಖ್ಯೆ ತಿಂಗಳಲ್ಲಿ ಸಾವಿರ ದಾಟುತ್ತದೆ! ಇದರಿಂದಲೇ ಆಸ್ಪತ್ರೆಯ ವೈದ್ಯರ ಸೇವಾಮನೋಭಾವ, ಜನರ ವಿಶ್ವಾಸ ಮನದಟ್ಟಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next