ಶಿವಮೊಗ್ಗ: ಸಚಿವ ಸಂಪುಟ- ಖಾತೆ ಹಂಚಿಕೆಯಲ್ಲಿ ಗೊಂದಲವಿಲ್ಲ. ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಗೆ ಬೇರೆ ಖಾತೆ ಬೇಕೆಂದು ಹೇಳುತ್ತಿದ್ದಾರೆ. ಇದ್ಯಾವುದು ಗೊಂದಲವಲ್ಲ. ಅವರ ಭಾವನೆಗಳನ್ನು ಹೇಳಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಸಚಿವರಿಗೆ ಮುಖ್ಯಮಂತ್ರಿಗಳು ಸಮಾಧಾನ ಮಾಡುತ್ತಾರೆ. ಇದರಲ್ಲಿ ಬಹಳ ವಿಶೇಷವೇನಿಲ್ಲ, ಗೊಂದಲ ಸಹ ಇಲ್ಲ. ಸಿಎಂ ಚರ್ಚೆ ಮಾಡಿ ಬಗೆಹರಿಸುತ್ತಾರೆ ಎಂದರು.
ಮೇಕೆದಾಟು ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೇಕೆದಾಟು ವಿಚಾರದಲ್ಲಿ ತಮಿಳುನಾಡಿನವರು ಅವರ ರಾಜಕಾರಣ ಅವರು ಮಾಡುತ್ತಿದ್ದಾರೆ. ಸುಪ್ರಿಂ ಕೋರ್ಟ್ ನಿರ್ಧಾರದ ಹಾಗೆ ನಾವು ಮೇಕೆದಾಟುವನ್ನು ಮಾಡಿಯೇ ಮಾಡುತ್ತೇವೆ. ಉಪವಾಸವಾದರೂ ಮಾಡಲಿ ಅದು ನಮಗೆ ಸಂಬಂಧವಿಲ್ಲ. ಅವರ ರಾಜ್ಯಕ್ಕೆ ಏನು ಬೇಕೋ ಹಾಗೇ ಪೊಲಿಟಿಕಲ್ ಆಗಿ ಯೋಚನೆ ಮಾಡುತ್ತಿರುವುದು ತಪ್ಪಲ್ಲ. ಅವರು ಅಲ್ಲಿ ಹೋರಾಟವನ್ನು ಮಾಡಿ ಪಾರ್ಟಿ ಕಟ್ಟಿಕೊಳ್ಳಲಿ. ಆದರೆ, ಸುಪ್ರಿಂ ಕೋರ್ಟ್ ತೀರ್ಪಿನ ಬಗ್ಗೆಯು ಸಹ ಅವರು ಗಮನ ಇಟ್ಟಿಕೊಳ್ಳಬೇಕು. ಮೇಕೆದಾಟು ಯೋಜನೆ ಯಾವುದೇ ಕಾರಣಕ್ಕೂ ಸಹ ನಿಲ್ಲುವುದಿಲ್ಲ ಎಂದರು.
ಇದನ್ನೂ ಓದಿ:ನನಗೆ ಸಂಪುಟದರ್ಜೆ ಸ್ಥಾನಮಾನ ಬೇಡ, ಮಾಜಿ ಸಿಎಂ ಗೆ ಕೊಡುವ ಸೌಲಭ್ಯ ಸಾಕು: ಬಿಎಸ್ ವೈ
ಬೊಮ್ಮಾಯಿ- ದೇವೇಗೌಡರ ಭೇಟಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹಾಸನದಂತಹ ಜಿಲ್ಲೆಯಲ್ಲಿ ದೇವೇಗೌಡ, ರೇವಣ್ಣ, ಕುಮಾರಸ್ವಾಮಿ ಯಂತಹ ನಾಯಕರ ನಡುವೆ ಪ್ರೀತಂ ಗೌಡ ಗೆದ್ದು ಬಂದಿದ್ದಾರೆ. ಸತತವಾಗಿ ಪಕ್ಷವನ್ನು ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ. ಬೊಮ್ಮಾಯಿಯವರು ದೇವೇಗೌಡರನ್ನು ಕಾಣಲಿಕ್ಕೆ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಭೇಟಿಯಾಗಿರುವುದು ಪ್ರೀತಂ ಗೌಡರಿಗೆ ಸಮಾಧಾನ ತಂದಿಲ್ಲ. ಆದರೆ ಬೊಮ್ಮಾಯಿ ಅವರು ಜನತಾದಳ ನಾಯಕ ದೇವೇಗೌಡರು ಎಂದು ಹೋಗಿಲ್ಲ. ಮಾಜಿ ಪ್ರಧಾನಿ, ಹಿರಿಯ ರಾಜಕಾರಣಿ, ರೈತ ನಾಯಕರು ಅಂತ ಹೋಗಿದ್ದಾರೆ. ಹೀಗಾಗಿ ಅವರ ಒಳ್ಳೆಯ ಕೆಲಸವನ್ನು ಧಾರೆ ಎರೆಯಲಿ ಎಂದು ಮತ್ತು ಆಶೀರ್ವಾದ ಪಡೆಯಲು ಹೋಗಿದ್ದಾರೆ. ನಾವು ಪ್ರೀತಂ ಗೌಡರಿಗೆ ಹೇಳಿ ಒಪ್ಪಿಸುತ್ತೇವೆ. ಇದರಿಂದ ನಮ್ಮ ಸಂಘಟನೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಈಶ್ವರಪ್ಪ ಹೇಳಿದರು