ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ಮಡಿವಾಳಪಡ್ಪುವಿನ ತನಿಯಪ್ಪ ಮಡಿವಾಳ ಅವರ ಪುತ್ರ ಶರತ್ ಅವರು ಜು. 4ರಂದು ರಾತ್ರಿ 9.30 ಕ್ಕೆ ಬಿ.ಸಿ.ರೋಡ್‌ನಲ್ಲಿರುವ ತನ್ನ ಲಾಂಡ್ರಿಯನ್ನು ಬಂದ್ ಮಾಡುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಮಾರಕಾಯುಧಗಳಿಂದ ಕಡಿದು ಚೂರಿಯಿಂದ ಇರಿದು ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಅವರನ್ನು ಮೊದಲು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಅಲ್ಲಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 3 ದಿನಗಳ ಜೀವನ್ಮರಣ ಹೋರಾಟದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಜು. 6/7ರ ರಾತ್ರಿ ಸಾವನ್ನಪ್ಪಿದ್ದರು. ಮರುದಿನ ಶರತ್ ಶವ ಯಾತ್ರೆಯ ಸಂದರ್ಭದಲ್ಲಿ ಬಿ.ಸಿ. ರೋಡ್‌ನಲ್ಲಿ ಕಲ್ಲು ತೂರಾಟದ ಘಟನೆಯೂ ನಡೆದು ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು.
Advertisement
ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವಾಗಲೇ ಈ ಕೊಲೆ ನಡೆದಿದ್ದು, ಪ್ರಕರಣಕ್ಕೆ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದ ಗಮನ ಸೆಳೆದಿತ್ತು. ಜಿಲ್ಲೆಯಲ್ಲಿ ಅದಾಗಲೇ ಜಾರಿಯಲ್ಲಿದ್ದ ನಿಷೇಧಾಜ್ಞೆ ವಿಸ್ತರಣೆಯಾಗಿ ದಾಖಲೆಯ 2 ತಿಂಗಳ ಕಾಲ ಜಾರಿಯಲ್ಲಿರಲು ಕಾರಣವಾಗಿತ್ತು. ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದುವರೆಗೆ ಏನೂ ಆಗಿಲ್ಲ. ಸರಕಾರ ಮನಸ್ಸು ಮಾಡಿದರೆ ತಾನೇ ಆಗುವುದು? ಜಿಲ್ಲಾಡಳಿತವು ನನ್ನ ಮಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ವಿಷಯವನ್ನೇ ಮುಚ್ಚಿಟ್ಟು ಒಂದೂವರೆ ದಿನದ ಬಳಿಕ ನನಗೆ ತಿಳಿಸಿದೆ. ಮಗ ಸಾವನ್ನಪ್ಪಿದ ಸುದ್ದಿಯನ್ನು ಮುಚ್ಚಿಟ್ಟವರು ಇನ್ನು ತನಿಖೆಯನ್ನು ಬೇಗ ನಡೆಸಿಯಾರೇ? ಈಗ ತನಿಖೆ ಯಾವ ಹಂತದಲ್ಲಿದೆ ಎನ್ನುವುದು ನಮಗೆ ಗೊತ್ತಿಲ್ಲ. ನಮಗೆ ಯಾರೂ ತಿಳಿಸಿಲ್ಲ ಎಂದು ಶರತ್ ತಂದೆ ತನಿಯಪ್ಪ ಮಡಿವಾಳ ಅವರು ಹೇಳಿದರು.
Related Articles
ಶರತ್ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಹಲವು ಮಂದಿ ಶಂಕಿತರ ವಿಚಾರಣೆ ನಡೆಸಲಾಗಿದೆ. ಖಚಿತ ಸುಳಿವು ಲಭ್ಯವಾಗಿಲ್ಲ. ಹಾಗಾಗಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಎಸ್‌ಪಿ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
Advertisement
ತನಿಖೆ ಚುರುಕುಗೊಳಿಸಿ: ಮಠಂದೂರುಘಟನೆ ನಡೆದು ಒಂದು ತಿಂಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಸರಕಾರ ಈ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿದಂತೆ ಕಾಣುತ್ತಿಲ್ಲ. ಇದು ಖಂಡನೀಯ. ಪೊಲೀಸರು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಬೇಕು. ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ತಿಳಿಸಿದ್ದಾರೆ. – ಹಿಲರಿ ಕ್ರಾಸ್ತಾ