Advertisement

ನೀರಿನ ಕೊರತೆ ನಗರದಲ್ಲಿಲ್ಲ : ಟ್ಯಾಂಕರ್‌ ನೀರು ಕೇಳುವವರಿಲ್ಲ…

07:45 AM Apr 26, 2018 | Team Udayavani |

ಮಹಾನಗರ: ಪ್ರತಿ ವರ್ಷ ಬೇಸಗೆಯಲ್ಲೂ ನಗರದಲ್ಲಿ ಕುಡಿಯುವ ನೀರಿಗೆ ಕೊರತೆ ಉದ್ಭವಿಸಿ ಟ್ಯಾಂಕರ್‌ ನೀರಿಗೆ ಸಿಕ್ಕಾಪಟ್ಟೆ ಬೇಡಿಕೆ ಬರುತ್ತದೆ. ಆದರೆ ಈ ಬಾರಿ ಟ್ಯಾಂಕರ್‌ಗಳನ್ನು ಕೇಳುವವರೇ ಇಲ್ಲ. ಎರಡು ವರ್ಷಗಳ ಹಿಂದೆ ಜಿಲ್ಲಾಡಳಿತ, ಮಹಾನಗರ ಪಾಲಿಕೆಯೂ ನಾಗರಿಕರಿಗೆ ಅಗತ್ಯ ಪ್ರಮಾಣದಷ್ಟು ಕುಡಿಯುವ ನೀರನ್ನು ಪೂರೈಸಲು ಎಲ್ಲ ಜಲ ಮೂಲಗಳನ್ನೂ ಬಳಸಿಕೊಂಡಿತ್ತು. ಈ ವರ್ಷ ನಗರಕ್ಕೆ ನೀರು ಒದಗಿಸುವ ತುಂಬೆ ಡ್ಯಾಂನಲ್ಲಿ 6 ಮೀ. ನಷ್ಟು ನೀರನ್ನು ನಿಲ್ಲಿಸಿದ್ದರಿಂದ ಕುಡಿಯುವ ನೀರಿನ ಕೊರತೆ ಉದ್ಭವಿಸಿಲ್ಲ. ಜತೆಗೆ ವಿದ್ಯುತ್‌ ಸಮಸ್ಯೆಯೂ ದೂರವಾಗಿರುವುದರಿಂದ ಪೂರೈಕೆಯಲ್ಲೂ ತೊಂದರೆ ಉಂಟಾಗಿಲ್ಲ. ಹಾಗಾಗಿ ಟ್ಯಾಂಕರ್‌ಗಳಿಗೂ ಬೇಡಿಕೆ ಕುಸಿದಿದೆ.

Advertisement

ಸಾಮಾನ್ಯವಾಗಿ ಪ್ರತಿ ವರ್ಷ ಫೆ. 15ರ ಸುಮಾರಿಗೆ ನೀರಿನ ಕೊರತೆ ಆರಂಭಗೊಳ್ಳುತ್ತದೆ. ಈ ಸಂದರ್ಭದಲ್ಲಿ ಎತ್ತರ ಪ್ರದೇಶಗಳಿಗೆ ನೀರು ಹರಿಯದು. ಆಗ ಪಾಲಿಕೆ ವತಿಯಿಂದಲೇ ಟ್ಯಾಂಕರ್‌ಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಜತೆಗೆ ಹೆಚ್ಚುವರಿ ನೀರು ಬೇಕಿದ್ದರೆ ಖಾಸಗಿ ಟ್ಯಾಂಕರ್‌ಗಳನ್ನೂ ಬಳಸಲಾಗುತ್ತಿತ್ತು. ಈ ವರ್ಷ ಅಂತಹ ಪ್ರಮೇಯವೇ ಕಂಡುಬರುತ್ತಿಲ್ಲ. ಕಳೆದ ವರ್ಷ ಪಾಲಿಕೆಯು 2 ದಿನಕ್ಕೊಮ್ಮೆ ನೀರು ಪೂರೈಕೆಯ ವ್ಯವಸ್ಥೆಯನ್ನು ಪರಿಚಯಿಸಿದ ಪರಿಣಾಮ ಜನರು ಹೆಚ್ಚುವರಿ ನೀರನ್ನು ಶೇಖರಿಸಿಡುತ್ತಿದ್ದರು. ಆದರೆ ಈ ಬಾರಿ ನೀರಿನ ಕೊರತೆ ಕಂಡುಬಾರದೆ, ಟ್ಯಾಂಕರ್‌ಗಳ ಬೇಡಿಕೆ ಸಂಪೂರ್ಣ ಕುಸಿದಿದೆ.

ಧಾರಣೆ ಹೀಗಿದೆ
ಪ್ರಸ್ತುತ 3,000  ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ ನೀರಿಗೆ ನಿಗದಿತ ಧಾರಣೆ 500 ರೂ.ಗಳಿದ್ದರೆ, 6 ಸಾವಿರ ಲೀ.ಗೆ 900 ರೂ. ನಷ್ಟಿದೆ. ಉಳಿದಂತೆ ಹೆಚ್ಚು ದೂರ ಹಾಗೂ ಎತ್ತರದ ಪ್ರದೇಶಕ್ಕೆ ಅಂದಾಜು 200ರಿಂದ 300 ರೂ. ಹೆಚ್ಚಳ ನೀಡಬೇಕಾಗುತ್ತದೆ. ಈ ಪ್ರಮಾಣ ಒಂದು ಸಾವಿರ ರೂ. ವರೆಗೂ ಇದೆ ಎನ್ನುತ್ತಾರೆ ಟ್ಯಾಂಕರೊಂದರ ಮಾಲಕರು.

2016ರಲ್ಲಿ ಟ್ಯಾಂಕರ್‌ ವಶಕ್ಕೆ
2016ರಲ್ಲಿ ತುಂಬೆ ಡ್ಯಾಮ್‌ನ ನೀರು ಗಣನೀಯ ಪ್ರಮಾಣದಲ್ಲಿ ಇಳಿಕೆಯಾದ ಪರಿಣಾಮ ಖಾಸಗಿ ನೀರು ಪೂರೈಕೆಯ ಎಲ್ಲ ಟ್ಯಾಂಕರ್‌ಗಳನ್ನು ಪಾಲಿಕೆಯೇ ವಶಕ್ಕೆ ಪಡೆದು ಜನರಿಗೆ ನೀರು ಪೂರೈಸಿತ್ತು. ಆದರೆ 2017ರಲ್ಲಿ ನೀರಿನ ಸಮಸ್ಯೆ ಕಂಡುಬಂದ ಪ್ರದೇಶಕ್ಕೆ ಪಾಲಿಕೆಯು 2- 3 ದಿನಕ್ಕೊಮ್ಮೆ ನೀರು ಪೂರೈಸಿ ಪರಿಸ್ಥಿತಿಯನ್ನು ನಿಭಾಯಿಸಿತ್ತು. ಹಾಗಾಗಿ ಟ್ಯಾಂಕರ್‌ಗಳ ಬೇಡಿಕೆ ಕೊಂಚ ಕಡಿಮೆಯಾಗಿತ್ತು.

ಮೂರು ತಿಂಗಳ ಬೇಡಿಕೆ
ಪ್ರತಿವರ್ಷ ಟ್ಯಾಂಕರ್‌ ಗಳಿಗೆ ಹೆಚ್ಚಿನ ಬೇಡಿಕೆ ಇರುವುದು ಬೇಸಗೆಯ ಮೂರು ತಿಂಗಳು ಮಾತ್ರ. ಈ ಬಾರಿ ಎಪ್ರಿಲ್‌ ತಿಂಗಳು ಮುಗಿಯುತ್ತಾ ಬಂದರೂ ಸಮಸ್ಯೆ ಇಲ್ಲ. ಜತೆಗೆ ಒಂದೆರಡು ಮಳೆಯೂ ಬಂದಿದ್ದು, ನೀರಿನ ಕೊರತೆಯನ್ನು ನೀಗಿಸಿದೆ. ಕೆಲವು ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ತಮ್ಮದೇ ಟ್ಯಾಂಕರ್‌ಗಳ ವ್ಯವಸ್ಥೆ ಹೊಂದಿವೆ.

Advertisement

ಬೇಡಿಕೆ ಇಲ್ಲ
ಸಾಮಾನ್ಯವಾಗಿ ಫೆಬ್ರವರಿ ತಿಂಗಳಿನಿಂದ ಮೇವರೆಗೆ ನೀರಿನ ಟ್ಯಾಂಕರ್‌ಗಳಿಗೆ ಬೇಡಿಕೆ ಇತ್ತು. ಆದರೆ ಈ ಬಾರಿ ಬೇಡಿಕೆ ಕುಸಿದಿದೆ. ಕಾಂಕ್ರೀಟ್‌ ಕಾಮಗಾರಿ, ಮೀನುಗಾರಿಕಾ ಬಂದರಿಗೆ ಮಾತ್ರ ಪೂರೈಸುತ್ತಿದ್ದೇವೆ. 
– ಆನಂದ ಶೆಟ್ಟಿ, ಜಲದುರ್ಗಾ ವಾಟರ್‌ ಸಪ್ಲೈ, ಮಂಗಳೂರು

– ತುಂಬೆಯಲ್ಲಿದೆ  6 ಮೀ. ನೀರು
– 2016, 17ರಲ್ಲಿತ್ತು ತೀವ್ರ ಸಮಸ್ಯೆ
– ಈ ಬಾರಿ ನೀರಿನ ಕೊರತೆ ನೀಗಿಸಿದ ಮಳೆ 

— ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next