ಉಡುಪಿ: ಕಲ್ಜಿಗ ಸಿನೆಮಾದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ. ಸಿನೆಮಾ ನೋಡಿದವರಿಗೆ ಇದು ಮನವರಿಕೆಯಾಗಿದೆ. ಸಿನೆಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದರೆ ಉತ್ತಮ ಎಂದು ಕಲ್ಜಿಗ ಸಿನೆಮಾ ನಿರ್ದೇಶಕ ಸುಮನ್ ಸುವರ್ಣ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಕರಾವಳಿ ಭಾಗದ ಜನತೆ ಕಲೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಮಕ್ಕಳಿಂದ ಹಿರಿಯರವರೆಗೂ ಚಿತ್ರ ನೋಡಿದವರು ಈಗಾಗಲೇ ಮೆಚ್ಚುಗೆ ಸೂಚಿಸಿ ಮತ್ತೊಮ್ಮೆ ಚಿತ್ರಮಂದಿರದತ್ತ ಬರುತ್ತಿರುವುದು ಮತ್ತಷ್ಟು ಖುಷಿ ನೀಡುತ್ತಿದೆ. ಹೊಡೆದಾಟ, ಬಡಿದಾಟದ ಚಿತ್ರಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ನಡುವೆ ಈ ಚಿತ್ರ ಭಿನ್ನ ರೀತಿಯಲ್ಲಿ ಮೂಡಿಬಂದಿದೆ ಎಂದರು.
ನಿರ್ಮಾಪಕ ಶರತ್ ಕುಮಾರ್ ಮಾತನಾಡಿ, ಉಡುಪಿ, ಕುಂದಾಪುರ, ಮಣಿಪಾಲ ಭಾಗದಲ್ಲಿ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಧರ್ಮ, ಸತ್ಯದ ಸಿನೆಮಾ ಇದಾಗಿದೆ. ಯಾವುದೇ ಸಿನೆಮಾದಲ್ಲಿ ದೇವರನ್ನು ದೇವರ ಹಾಗೆ ಹಾಗೂ ದೈವವನ್ನು ದೈವದ ರೀತಿಯಲ್ಲಿ ಚಿತ್ರೀಕರಿಸಿದರೆ ಯಾವುದೇ ಸಮಸ್ಯೆಯಾಗದು. ಆದರೆ ಅಪಹಾಸ್ಯ ಮಾಡುವಂತಾಗಬಾರದು. ಈ ಚಿತ್ರದಲ್ಲಿ ಅಂತಹ ಯಾವುದೇ ಅಂಶಗಳಿಲ್ಲ ಎಂದರು.
ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ಕುಟುಂಬಸ್ಥರೆಲ್ಲ ಒಟ್ಟಾಗಿ ಚಿತ್ರಮಂದಿರಕ್ಕೆ ಬರುತ್ತಿರುವುದು ಚಿತ್ರದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ತುಳು ಭಾಷೆಯ ಮೂಲ ಗೊತ್ತಾಗಬೇಕೆಂಬ ಉದ್ದೇಶದಿಂದಲೇ ಕನ್ನಡ ಸಿನೆಮಾವಾದರೂ ತುಳು ಟೈಟಲ್ ಇಡಲಾಗಿದೆ ಎಂದರು.
ಕಲಾವಿದ ಮಂಜು ಸುವರ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.