ಕಲಬುರಗಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗುವುದಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಂತರಿಕ ಕಚ್ಚಾಟ ಹೆಚ್ಚಾಗಿ ಯಡಿಯೂರಪ್ಪ ಸರ್ಕಾರ ಬಿದ್ದರೆ ನನಗೆ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್ ನಾಯಕರ ಕೈಯಲ್ಲಿ ಸರ್ಕಾರದ ಭವಿಷ್ಯವಿದೆ. ಅವರು ಎಲ್ಲಿಯವರೆಗೆ ಬೆಂಬಲ ಕೊಡುತ್ತಾರೋ ಅಲ್ಲಿಯವರೆಗೆ ಅಪಾಯವಿಲ್ಲ. ಆದರೆ, ಬಿಜೆಪಿ ಸರ್ಕಾರಕ್ಕೆ ನಾವಾಗಿಯೇ ಬೆಂಬಲ ಕೊಡುವುದಿಲ್ಲ ಎಂದರು.
ರಾಜ್ಯದಲ್ಲಿ 17 ಸ್ಥಾನಗಳಿಗಾಗಿ ನಡೆಯುವ ಉಪ ಚುನಾವಣೆಯಲ್ಲಿ ನಾವು ಯಾರ ಸಹವಾಸ ಮಾಡಲ್ಲ. ಸಿದ್ದರಾಮಯ್ಯ ಮನೆ ಬಾಗಿಲಿಗೂ ಹೋಗುವುದಿಲ್ಲ. ಯಡಿಯೂರಪ್ಪ ಮನೆ ಬಾಗಿಲಿಗೂ ಹೋಗುವುದಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ಶಕ್ತಿ ನಮ್ಮಲ್ಲಿಲ್ಲ ಎಂದರು.
17 ಕ್ಷೇತ್ರಗಳ ಪೈಕಿ ಐದಾರು ಕ್ಷೇತ್ರಗಳಲ್ಲಿ ಹೆಚ್ಚಿನ ಪೈಪೋಟಿ ನೀಡುತ್ತೇವೆ. ಬೆಳಗಾವಿ ವಿಭಾಗದಲ್ಲಿ ಎರಡು ಕಡೆ ಮತ್ತು ಹಳೇ ಮೈಸೂರು ಭಾಗದಲ್ಲಿ ಮೂರ್‍ನಾಲ್ಕು ಕಡೆ ಪ್ರಬಲ ಸ್ಪರ್ಧೆವೊಡ್ಡುತ್ತೇವೆ. ಉಳಿದ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಹಾಕುತ್ತೇವೆ. ಆದರೆ, ಗೆಲುವು-ಸೋಲು ನಮ್ಮ ಕೈಯಲ್ಲಿಲ್ಲ. ಜನರ ಕೈಯಲ್ಲಿದೆ ಎಂದರು. ಉಪ ಚುನಾವಣೆ ನಂತರ ಮಧ್ಯಂತರ ಚುನಾವಣೆ ಬರುವುದಿಲ್ಲ. ಸಿದ್ದರಾಮಯ್ಯ ಭಾಗ್ಯಗಳನ್ನು ಕೊಟ್ಟಿದ್ದೇನೆಂದು ಚುನಾವಣೆ ಎನ್ನುತ್ತಿರಬೇಕು.
ಇಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಗಳೇ ಗೆಲ್ಲುವುದು ಕಷ್ಟವಿದೆ. ನಮ್ಮ ಶಕ್ತಿ ಸಣ್ಣದು. ನಾವು ಪಕ್ಷ ಕಟ್ಟುತ್ತಿದ್ದೇವೆ. ಮೂರು ವರ್ಷದ ನಂತರ ಚುನಾವಣೆ ಬಂದರೆ ಪಕ್ಷವನ್ನು ಅ ಧಿಕಾರಕ್ಕೆ ತರುತ್ತೇನೆ. ಆದರೆ, ಮುಂದಿನ ವರ್ಷವೇ ಬಂದರೆ ಆಗುವುದಿಲ್ಲ ಎಂದರು. ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ, ಶಾಸಕ ನಾಗನಗೌಡ ಕಂದಕೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಇದ್ದರು.
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯವರು ಎಲ್ಲ ಸ್ಥಾನ ಗೆಲುತ್ತೇವೆ ಎನ್ನುತ್ತಿದ್ದಾರೆ. ಆದರೆ, ನನಗೆ ಹಾಗೆ ಹೇಳುವಷ್ಟು ಶಕ್ತಿಯಿಲ್ಲ. ಫಲಿತಾಂಶ ಬಂದ ಮೇಲೆ ಯಾರು ಎಷ್ಟು ಸ್ಥಾನ ಗೆಲ್ಲುತ್ತಾರೆ ಎಂದು ಗೊತಾಗುತ್ತದೆ. ಬಿಜೆಪಿಯಲ್ಲಿ ಟಿಕೆಟ್ ಸಿಗದವರು ನನ್ನನ್ನು ಸಂಪರ್ಕಿಸಿಲ್ಲ. ಆದರೆ, ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆ. ಕೆ.ಆರ್. ಪೇಟೆ ಹಾಗೂ ಹುಣಸೂರು ಕ್ಷೇತ್ರಗಳಿಗೆ ಮಂಗಳವಾರ ಅಭ್ಯರ್ಥಿಗಳ ಆಯ್ಕೆಯಾಗಲಿದೆ.
-ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ