Advertisement

ಕೇಂದ್ರ ಸರಕಾರಕ್ಕೆ ದಲಿತರ ಕಾಳಜಿಯೇ ಇಲ್ಲ: ಕುಮಾರಿ ಸೆಲ್ಜಾ

06:00 AM May 06, 2018 | |

ಮಂಗಳೂರು: ಕೇಂದ್ರ ಸರಕಾರ ದಲಿತರ ಪರ ಕಿಂಚಿತ್ತೂ ಕಾಳಜಿ ವಹಿಸದಿದ್ದರೂ ಇದೀಗ ಚುನಾವಣೆಯ ಹಿನ್ನೆಲೆಯಲ್ಲಿ ದಲಿತೋದ್ಧಾರದ ಮಂತ್ರ ಪಠಿಸುತ್ತಿದೆ ಎಂದು ಮಾಜಿ ಸಚಿವೆ ಹಾಗೂ ರಾಜ್ಯಸಭಾ ಸದಸ್ಯೆ ಕುಮಾರಿ ಸೆಲ್ಜಾ ಟೀಕಿಸಿದ್ದಾರೆ. 

Advertisement

ದಲಿತ ದೌರ್ಜನ್ಯ ಕಾಯ್ದೆ
ವಿಧಾನಸಭಾ ಚುನಾವಣೆ ಸಂಬಂಧ ಪ್ರಚಾರಕ್ಕಾಗಿ ಜಿಲ್ಲೆಗೆ ಆಗಮಿಸಿದ ಸೆಲ್ಜಾ ಬಳಿಕ ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿದ ಅಪಕೀರ್ತಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಸಲ್ಲುತ್ತದೆ. ಈ ಸರಕಾರ ಅಧಿಕಾರಕ್ಕೆ ಬಂದ ಬಳಿಕ 13 ಅಧ್ಯಾದೇಶ ಹೊರಡಿಸಲಾಗಿದೆಯಾದರೂ ದಲಿತರ ಶ್ರೇಯಸ್ಸಿಗಾಗಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿರುವುದು ನಾಚಿಕೆಗೇಡಿನ ವಿಷಯ. ಕೇವಲ ಬಾಯಿ ಮಾತಿನಲ್ಲಿ ದಲಿತರ ಉದ್ಧಾರದ ಬಗ್ಗೆ ಮಾತನಾಡುವ ಮೋದಿ ಸರಕಾರಕ್ಕೆ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೆಡ್ಕರ್‌ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ.

1989ರಲ್ಲಿ ರಾಜೀವ ಗಾಂಧಿ ಪ್ರಧಾನಿಯಾಗಿದ್ದಾಗ ದಲಿತ ದೌರ್ಜನ್ಯ ಕಾಯ್ದೆ ಜಾರಿಗೆ ತರಲಾಯಿತು. ಅನಂತರದ ವರ್ಷಗಳಲ್ಲಿ ಈ ಕಾಯ್ದೆಯನ್ನು ಬಲಪಡಿಸುವ ಕೆಲಸವನ್ನು ಕಾಂಗ್ರೆಸ್‌ ಸರಕಾರ ಮಾಡಿತು. ಆದರೆ ಬಿಜೆಪಿ ಆಡಳಿತದ ಈಗಿನ ಕೇಂದ್ರ ಸರಕಾರ ದಲಿತ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದರು. 

ಮಹಿಳೆಯರಿಗೆ ರಕ್ಷಣೆ ಇಲ್ಲ
ಮಹಿಳೆಯರ ಏಳಿಗೆಗಾಗಿ ಕೇಂದ್ರ ಸರಕಾರವು ಜಾರಿಗೆ ತಂದ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯ ಕುರಿತು ವ್ಯಂಗ್ಯ
ವಾಡಿದ ಸೆಲ್ಜಾ, ಬಿಜೆಪಿ ನಾಯಕರಿಂದಲೇ ಮಹಿಳೆಯರನ್ನು ರಕ್ಷಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕನ ಕೈವಾಡ, ಜಮ್ಮು ಮತ್ತು ಕಾಶ್ಮೀರದಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ರಕ್ಷಿಸುವ ಹುನ್ನಾರಗಳು ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬುದನ್ನು ರುಜುವಾತುಪಡಿಸುತ್ತದೆ. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ ಎಂದವರು ದೂರಿದರು. 

ದಲಿತ ಸಿಎಂ ಹೈಕಮಾಂಡ್‌ಗೆ ಬಿಟ್ಟದ್ದು 
ಕಾಂಗ್ರೆಸ್‌ ಪಕ್ಷದಲ್ಲಿ ದಲಿತರಿಗೆ ಮುಖ್ಯ ಮಂತ್ರಿ ಸ್ಥಾನ ನೀಡಬೇಕೆನ್ನುವ ಬೇಡಿಕೆಯ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೆಲ್ಜಾ ಅವರು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುತ್ತದೆ. ಹಾಗಿದ್ದರೂ, ಕಾಂಗ್ರೆಸ್‌ ಪಕ್ಷ ಆಡಳಿತ ವಿರುವ ವಿವಿಧ ರಾಜ್ಯಗಳಲ್ಲಿ ದಲಿತರಿಗೆ ಅತ್ಯುನ್ನತ ಸ್ಥಾನಮಾನ ನೀಡಲಾಗಿದೆ ಎಂದವರು ಸ್ಪಷ್ಟ ಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next