ಹುಬ್ಬಳ್ಳಿ: ಕೋವಿಡ್ 19 ಕ್ಕೆ ದೇಶದ ಮೊದಲ ಬಲಿ ಆಗಿದ್ದು, ಸೋಂಕು ಪೀಡಿತರು, ಶಂಕಿತರ ವರದಿಯಾಗಿದ್ದು ಉತ್ತರ ಕರ್ನಾಟಕದಲ್ಲಿ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಇದೇ ಭಾಗದವರು. ಆದರೂ ಕೋವಿಡ್ 19 ಪರೀಕ್ಷೆಗೆ ಪ್ರಯೋಗಾಲಯ ಸ್ಥಾಪನೆಗೂ ಉತ್ತರ ಕರ್ನಾಟಕ ಲಾಯಕ್ಕಿಲ್ಲವೇ?
ರಾಜ್ಯ ಸರಕಾರ ಕೋವಿಡ್ 19 ಪರೀಕ್ಷೆಗೆಂದು ರಾಜ್ಯದಲ್ಲಿ ಐದು ಕಡೆ ಪ್ರಯೋಗಾಲಯ ಆರಂಭಿಸಿದೆ. ಆದರೆ, 13 ಜಿಲ್ಲೆಗಳ ವ್ಯಾಪ್ತಿ ಹೊಂದಿದ ಉತ್ತರ ಕರ್ನಾಟಕದಲ್ಲಿ ಸದ್ಯಕ್ಕೆ ಒಂದೇ ಒಂದು ಪ್ರಯೋಗಾಲಯ ಇಲ್ಲ. ಕೋವಿಡ್ 19 ಪರೀಕ್ಷೆಗೆ ಬೆಂಗಳೂರು ಇಲ್ಲವೇ ಹೈದರಾಬಾದ್ ಅನ್ನು ಆಶ್ರಯಿಸಬೇಕಾಗಿದೆ. ಅತ್ಯಂತ ಅಪಾಯಕಾರಿ ಸ್ಥಿತಿ ಹಾಗೂ ಆರೋಗ್ಯದ ವಿಚಾರದಲ್ಲೂ ಉತ್ತರದತ್ತ ಮಲತಾಯಿ ಧೋರಣೆ ಹಾಗೂ ಈ ಭಾಗದ ಜನಪ್ರತಿನಿಧಿಗಳ ಮೌನದಾಸ್ಯದ ಬಗ್ಗೆ ಅಸಮಾಧಾನ ಹೆಚ್ಚತೊಡಗಿದೆ.
ಕೋವಿಡ್ 19 ಕ್ಕೆ ಮೊದಲ ಬಲಿ ವಿಚಾರದಲ್ಲಿ ಇಡೀ ದೇಶವೇ ಬೆಚ್ಚಿ ಬಿದ್ದು ನೋಡಿದ್ದು ಇದೇ ಉತ್ತರದ ಕಲಬುರಗಿಯನ್ನು. ಕಲಬುರಗಿಯ ವ್ಯಕ್ತಿಯೊಬ್ಬರು ಕೋವಿಡ್ 19 ಹೆಮ್ಮಾರಿಗೆ ತುತ್ತಾಗಿದ್ದಾರೆ. ಜತೆಗೆ ಅಲ್ಲಿನ ಇಬ್ಬರಿಗೆ ಸೋಂಕು ತಗುಲಿದ ಬಗ್ಗೆಯೂ ವರದಿಯಾಗಿದೆ. ಜತೆಗೆ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶಂಕಿತರ ಬಗ್ಗೆಯೂ ವರದಿಯಾಗಿದೆ. ಶಂಕಿತ ವ್ಯಕ್ತಿಯ ರಕ್ತ, ಕಫ ಮಾದರಿಯನ್ನು ಬೆಂಗಳೂರು ಇಲ್ಲವೆ ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬರುವವರೆಗೆ ಕಾಯಬೇಕು. ಅಷ್ಟರೊಳಗೆ ಆಗಬಾರದ ಅನಾಹುತ ಆಗಿರುತ್ತದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಈ ಭಾಗದವರಾಗಿ ಪ್ರಯೋಗಾಲಯ ಸ್ಥಾಪನೆಗೆ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿತ್ತು. ಅದು ಕೂಡ ಸಾಧ್ಯವಾಗಿಲ್ಲ. ಕಲಬುರಗಿಯಲ್ಲಿ ಪ್ರಯೋಗಾಲಯ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರ ಹೇಳಿದೆಯಾದರು ಈ ತನಕ ಆಗಿಲ್ಲ. ದಶಕಗಳಿಂದ ಉತ್ತರಕ್ಕಾಗುತ್ತಿರುವ ಅನ್ಯಾಯ ಈಗಲೂ ಮುಂದುವರಿದಿದೆ. ಈ ಬಗ್ಗೆ ವಿಧಾನಮಂಡಲದಲ್ಲೂ ಗಟ್ಟಿ ಧ್ವನಿ ಮೊಳಗಲಿಲ್ಲ. ಧರಣಿ-ಸಭಾತ್ಯಾಗ ನಡೆಯಲಿಲ್ಲ. ಸ್ವತಃ ಆರೋಗ್ಯ ಸಚಿವರಿಂದಲೂ ಈ ಭಾಗದ ಜನತೆ ಭರವಸೆ ಇರಿಸಬಹುದಾದ, ಮೆಚ್ಚುಗೆ ಸೂಚಿಸಬಹುದಾದ ಒಂದೇ ಒಂದು ಹೇಳಿಕೆ ಪ್ರಯೋಗಾಲಯ ವಿಚಾರದಲ್ಲಿ ಹೊರಬೀಳಲಿಲ್ಲ. ಎಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ಮಾಡುತ್ತೇವೆಂಬ ಮಾಮೂಲಿ ರಾಜಕೀಯ ಭರವಸೆ ಮಾತ್ರ ಹೊರಬಂದಿದೆ.
ಪ್ರಯೋಗಾಲಯಕ್ಕಿದೆ ಅವಕಾಶ: ಉತ್ತರ ಕರ್ನಾಟಕದಲ್ಲಿ ಕೋವಿಡ್ 19 ಪರೀಕ್ಷೆ ಪ್ರಯೋಗಾಲಯ ಸ್ಥಾಪನೆಗೆ ಅಗತ್ಯ ಸೌಲಭ್ಯ, ಅವಕಾಶ ಎಲ್ಲವೂ ಇದೆ. ಕಲಬುರಗಿಯಲ್ಲಿಯೇ ಬೃಹತ್ ಇಎಸ್‌ಐ ಆಸ್ಪತ್ರೆ ಇದೆ. ಅಲ್ಲದೇ ಸರಕಾರದ್ದು ಸೇರಿದಂತೆ ಮೂರು ವೈದ್ಯಕೀಯ ಕಾಲೇಜುಗಳಿವೆ. ರಾಯಚೂರು, ಕೊಪ್ಪಳದಲ್ಲೂ ಸರಕಾರಿ ವೈದ್ಯಕೀಯ ಕಾಲೇಜುಗಳಿವೆ. ಬಳ್ಳಾರಿಯಲ್ಲಿ ವಿಮ್ಸ್ ಇದೆ. ಉತ್ತರ ಕರ್ನಾಟಕ ಪಾಲಿಗೆ ದೊಡ್ಡ ಆಸ್ಪತ್ರೆ ಎಂದೇ ಹೆಸರಾದ ಕಿಮ್ಸ್ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಹುಬ್ಬಳ್ಳಿಯಲ್ಲಿದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಸರಕಾರ ಉತ್ತರವನ್ನು ಕಡೆಗಣಿಸಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.
ಅನುಮತಿ ಸಿಕ್ಕ ತಕ್ಷಣ ಲ್ಯಾಬ್ : ಉತ್ತರ ಕರ್ನಾಟಕದಲ್ಲಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಉತ್ತರ ಕರ್ನಾಟಕದ ಜನರು ಅಭಿಯಾನ ಆರಂಭಿಸಿದ್ದಾರೆ. ಕಲಬುರಗಿಯಲ್ಲಿ ಲ್ಯಾಬ್ ಆರಂಭಿಸುವ ಸಂಬಂಧ ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಲ್ಯಾಬ್ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುಮತಿ ಸಿಕ್ಕ ತಕ್ಷಣ ಲ್ಯಾಬ್ : ಉತ್ತರ ಕರ್ನಾಟಕದಲ್ಲಿ ಪರೀಕ್ಷಾ ಪ್ರಯೋಗಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಉತ್ತರ ಕರ್ನಾಟಕದ ಜನರು ಅಭಿಯಾನ ಆರಂಭಿಸಿದ್ದಾರೆ. ಕಲಬುರಗಿಯಲ್ಲಿ ಲ್ಯಾಬ್ ಆರಂಭಿಸುವ ಸಂಬಂಧ ಕೇಂದ್ರದ ಅನುಮತಿಗಾಗಿ ಕಾಯುತ್ತಿದ್ದೇವೆ. ಅನುಮತಿ ಸಿಕ್ಕ ತಕ್ಷಣ ಲ್ಯಾಬ್ ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೋವಿಡ್ 19 ದಿಂದ ಸಾವು ಹಾಗೂ ಹೆಚ್ಚು ಗಂಭೀರತೆ ಕಂಡು ಬಂದಿರುವುದು ಉತ್ತರ ಕರ್ನಾಟಕದಲ್ಲಿ. ದುರಂತವೆಂದರೆ ಇಲ್ಲಿಯೇ ಒಂದೇ ಒಂದು ಪ್ರಯೋಗಾಲಯ ಇಲ್ಲ. ಸರಕಾರದ ಮೇಲೆ ಒತ್ತಡ ತರುವಲ್ಲಿ ಈ ಭಾಗದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೂ ಇದಕ್ಕೆ ಕಾರಣ. ಬಹುಶಃ ಸರಕಾರ ನಮ್ಮನ್ನು ನಾಗರಿಕರು ಎಂದೇ ಪರಿಗಣಿಸಿದಂತೆ ಕಾಣುತ್ತಿಲ್ಲ. ಅಷ್ಟರ ಮಟ್ಟಿಗೆ ಈ ಭಾಗವನ್ನು ನಿರ್ಲಕ್ಷಿಸಿದೆ
.- ಡಾ| ರಝಾಕ್ ಉಸ್ತಾದ, ಉಪಾಧ್ಯಕ್ಷ, ಹೈಕ ಹೋರಾಟ ಸಮಿತಿ
-ಅಮರೇಗೌಡ ಗೋನವಾರ