ನವದೆಹಲಿ: ದೇಶದ ಭದ್ರತೆ ವಿಚಾರದಲ್ಲಿ ನಾವು ಯಾವುದೇ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕಾರ್ಗಿಲ್ ವಿಜಯ ಸ್ಮರಣಾರ್ಥ ನವದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭದ್ರತೆ ಅಭೇದ್ಯವಾಗಿದೆ. ಎಂದಿಗೂ ಅದು ಅಭೇದ್ಯವಾಗಿಯೇ ಇರುತ್ತದೆ. ಸೇನೆಯ ಆಧುನೀಕರಣವು ನಮ್ಮ ಆದ್ಯತೆ ಎಂದಿದ್ದಾರೆ.
ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯವು ದೇಶದ ಸಾಮರ್ಥ್ಯ, ಸಹನೆ, ಪಾವಿತ್ರ್ಯ ಹಾಗೂ ಶಿಸ್ತಿನ ಪ್ರತೀಕ. ಅದು ಪ್ರತಿ ಭಾರತೀಯನ ನಿರೀಕ್ಷೆಯ ಜಯವಾಗಿತ್ತು ಎಂದು ಮೋದಿ ಹೇಳಿದ್ದಾರೆ.
ಹುತಾತ್ಮರ ಮಕ್ಕಳ ವಿದ್ಯಾರ್ಥಿ ವೇತನದ ಮೊತ್ತವನ್ನು ಸರ್ಕಾರ ಏರಿಕೆ ಮಾಡಿದೆ ಮತ್ತು ಕಳೆದ 5 ವರ್ಷದಲ್ಲಿ ಯೋಧರು ಮತ್ತು ಅವರ ಕುಟುಂಬದ ಕಲ್ಯಾಣಕ್ಕೆ ಹಲವು ಪ್ರಮುಖ ನಿರ್ಧಾರ ಕೈಗೊಂಡಿದೆ. ದಶಕಗಳಿಂದ ಬಾಕಿ ಉಳಿದಿದ್ದ ಏಕ ಶ್ರೇಣಿ, ಏಕ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ ಎಂದೂ ಹೇಳಿದ್ದಾರೆ.
ತೀರ್ಥಯಾತ್ರೆಯಂತಿತ್ತು: ಯುದ್ಧದ ವೇಳೆ ಕಾರ್ಗಿಲ್ಗೆ ಭೇಟಿ ಮಾಡಿದ್ದಾಗಿ ಹೇಳಿಕೊಂಡ ಮೋದಿ, ಆಗಿನ ಸನ್ನಿವೇಶಗಳನ್ನು ನೆನಪಿಸಿ ಕೊಂಡರು. ಇದೊಂದು ತೀರ್ಥಯಾತ್ರೆಯಂತೆ ನನಗೆ ಭಾಸವಾಗಿತ್ತು. ಯುದ್ಧ ತೀವ್ರವಾಗಿ ನಡೆಯುತ್ತಿದ್ದಾಗ 20 ವರ್ಷಗಳ ಹಿಂದೆ ನಾನು ಕಾರ್ಗಿಲ್ಗೆ ಭೇಟಿ ನೀಡಿದ್ದೆ. ಎತ್ತರದ ಸ್ಥಳದಲ್ಲಿ ಶತ್ರು ಅಡಗಿ ಆಟವಾಡುತ್ತಿದ್ದ. ನಮ್ಮ ಪ್ರತಿ ಯೋಧರ ಮುಖದಲ್ಲೂ ಸಾವಿನ ಕಳೆ ಇತ್ತು. ಆದರೂ ಅವರು ಧೃತಿಗೆಡದೇ ಹೋರಾಡಿದರು ಎಂದಿದ್ದಾರೆ.