ರಾಯಚೂರು: ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಅಧಿಕಾರಿಗಳು ಯಾವುದೇ ಕಾರಣಕ್ಕೂ ಹಿಂದೇಟು ಹಾಕದಿರಿ ಎಂದು ಡಿಸಿ ಆರ್. ವೆಂಕಟೇಶಕುಮಾರ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಪಂ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ತಾಲೂಕುಗಳ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಮಾತನಾಡಿದರು. ತಾಲೂಕುಗಳಲ್ಲಿ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರಗಳು ಆರಂಭಿಸಬೇಕು. ರೋಗಿಗಳಿಗೆ ಊಟ ಹಾಗೂ ಉಪಹಾರಕ್ಕೆಯಾವುದೇ ನ್ಯೂನ್ಯತೆ ಆಗಬಾರದು. ಶುದ್ಧ ಕುಡಿವ ನೀರು ಪೂರೈಸಬೇಕು, ಮುಖ್ಯವಾಗಿ ಸ್ಪತ್ಛತೆಗೆ ಹೆಚ್ಚಿನ ಗಮನ ನೀಡಬೇಕು ಎಂದರು.
ತುರ್ತಾಗಿ ಯಾವುದಾದರೂ ರೋಗಿಗಳಿಗೆ ಆಕ್ಸಿಜನ್ ಬೇಕಾದಲ್ಲಿ, ಅಲ್ಲಿಯೇ ವೈದ್ಯಕೀಯ ಆಮ್ಲಜನಕ ಪೂರೈಸಬೇಕು. ಕೋವಿಡ್ ಕೇರ್ ಸೆಂಟರ್ ಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಪೂರೈಸಬೇಕು. ಅದನ್ನು ರೋಗಿಗಳಿಗೆ ಉಪಚರಿಸುವ ಕುರಿತು ನರ್ಸ್ ಗಳಿಗೆ ತರಬೇತಿ ನೀಡಬೇಕು ಎಂದರು.
ಯಾವುದೇ ಹೊಟೇಲ್‌ಗಳು ಅಥವಾ ಲಾಡ್ಜ್ ಗಳು ಕೋವಿಡ್ ರೋಗಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ರಾಯಚೂರು ತಾಲೂಕಿಗೆ ಸಂಬಂಧಿಸಿ ಯರಮರಸ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್ ಭರ್ತಿಯಾದಲ್ಲಿ ಚಂದ್ರಬಂಡಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ರೋಗಿಗಳನ್ನು ದಾಖಲಿಸಬೇಕು. ಇದಕ್ಕೆ ಶೀಘ್ರವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದರು.
ತಾಲೂಕು ಮಟ್ಟದ ಕೋವಿಡ್ ಐಸಿಯುಗಳಲ್ಲಿ ಕಾರ್ಯನಿರ್ವಹಿಸಲು ನರ್ಸ್‌ಗಳಿಗೆ ರಿಮ್ಸ್‌ನಲ್ಲಿ ತರಬೇತಿ ನೀಡಬೇಕು. ರಾಯಚೂರು ಸಹಾಯಕ ಆಯುಕ್ತರು ಈ ಬಗ್ಗೆ ಪರಿಶೀಲಿಸಬೇಕು. ಈ ಬಗ್ಗೆ ಲಿಖೀತವಾಗಿ ಆದೇಶ ಜಾರಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್‌ಪಿ ಪ್ರಕಾಶ್ ನಿಕ್ಕಂ, ಎಡಿಸಿ ಕೆ.ಆರ್. ದುರುಗೇಶ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರ ಬಾಬು, ಆರ್‌ಸಿಎಚ್‌ಒ ಡಾ| ವಿಜಯ, ಜಿಲ್ಲಾ ಸಮಾಜ ಕಲ್ಯಾಣಾಧಿ ಕಾರಿ ಸತೀಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸೇರಿ ಇತರರಿದ್ದರು