Advertisement

ಆಟೋಟದ ವಿರುದ್ಧ ಕ್ರಮದಲ್ಲಿ ರಾಜಿ ಇಲ್ಲ

02:11 PM Jul 10, 2019 | Team Udayavani |

ಹುಬ್ಬಳ್ಳಿ: ಆಟೋ ರಿಕ್ಷಾಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಹಾಗೂ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಪಘಾತ ರಹಿತ ಸಂಚಾರ ಪೊಲೀಸರ ಉದ್ದೇಶವೇ ವಿನಃ ಸಾರ್ವಜನಿಕರಿಗೆ ತೊಂದರೆ ಕೊಡುವುದಲ್ಲ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಹಾಗೂ ಸಂಚಾರ-ರಸ್ತೆ ಸುರಕ್ಷತಾ ಆಯುಕ್ತ ಪಿ.ಎಸ್‌. ಸಂಧು ಹೇಳಿದರು.

Advertisement

ಬಿವಿಬಿ ಮಹಾವಿದ್ಯಾಲಯದ ಬಯೋಟೆಕ್‌ ಸಭಾಂಗಣದಲ್ಲಿ ಪೊಲೀಸ್‌ ಇಲಾಖೆಯಿಂದ ವಿವಿಧ ಸಂಘ-ಸಂಸ್ಥೆ, ಶಾಲಾ-ಕಾಲೇಜು ಮುಖ್ಯಸ್ಥರಿಗಾಗಿ ಮಂಗಳವಾರ ಆಯೋಜಿಸಿದ್ದ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಂದು ಆಟೋದಲ್ಲಿ 10ಕ್ಕಿಂತ ಹೆಚ್ಚಿನ ಮಕ್ಕಳನ್ನು, ಬ್ಯಾಗ್‌ಗಳನ್ನು ತುಂಬಿಕೊಂಡು ಹೋಗುವುದನ್ನು ನೋಡಿದ್ದೇವೆ. ಯಾವ ಭರವಸೆ ಮೇಲೆ ನಿಮ್ಮ ಮಕ್ಕಳನ್ನು ಇಂತಹ ಆಟೋಗಳಲ್ಲಿ ಕಳುಹಿಸುತ್ತಿದ್ದೀರಿ ಎಂಬುದನ್ನು ಚಿಂತನೆ ಮಾಡಬೇಕು. ಕೆಲವೊಂದು ಆಟೋಗಳಿಗೆ ಸಮರ್ಪಕ ದಾಖಲೆಗಳು ಇರುವುದಿಲ್ಲ. ಆಟೋ ಚಾಲಕನ ಚಾಲನಾ ಪರವಾನಗಿ ಪತ್ರ ಸೇರಿದಂತೆ ವಿಮಾ ದಾಖಲೆಗಳನ್ನು ಪಾಲಕರು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಪರಿಶೀಲಿಸಬೇಕು. ಇದು ನಿಮ್ಮ ಮಗುವಿನ ಪ್ರಾಣದ ಪ್ರಶ್ನೆ. ಆಟೋ ಚಾಲಕರು ಕಾನೂನು ಪಾಲನೆ ಮಾಡಬೇಕು. ಶಾಲೆ-ಕಾಲೇಜು ಮುಂಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಆಟೋ ಸೇರಿದಂತೆ ವಿದ್ಯಾರ್ಥಿಗಳು ಬಳಸುವ ದ್ವಿಚಕ್ರ ವಾಹನದ ಮಾಹಿತಿ ಸಂಗ್ರಹಿಸುವ ಕೆಲಸ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು ಎಂದು ಹೇಳಿದರು.

ತಮಿಳುನಾಡಿನಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅಲ್ಲಿನ ಸಂಚಾರ ವ್ಯವಸ್ಥೆ ಕುರಿತು ಅಧ್ಯಯನ ಮಾಡಲು ಎರಡು ತಂಡಗಳನ್ನು ಕಳುಹಿಸಲಾಗಿದೆ. ಅವರ ವರದಿ ಆಧರಿಸಿ ರಾಜ್ಯದಲ್ಲಿ ಅನುಷ್ಠಾನ ತರಲಾಗುವುದು. ಹು-ಧಾ ಮಹಾನಗರದಲ್ಲಿ ಇತ್ತೀಚೆಗೆ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಅಪಘಾತ ಮುಕ್ತ ನಗರವಾಗುವುದರಲ್ಲಿ ಅನುಮಾನವಿಲ್ಲ ಎಂದರು.

ಹು-ಧಾ ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ ಮಾತನಾಡಿ, ರಸ್ತೆ ಸುರಕ್ಷತಾ ಕ್ರಮಗಳು ಹಾಗೂ ಪೊಲೀಸರ ಕರ್ತವ್ಯ ಜನರ ಕಲ್ಯಾಣಕ್ಕಾಗಿ ಎಂಬುದನ್ನು ಮರೆಯಬಾರದು. ಪ್ರತಿಯೊಬ್ಬರು ರಸ್ತೆ ನಿಯಮ ಪಾಲಿಸಿದರೆ ಕ್ರಮ ಕೈಗೊಳ್ಳುವ ಪ್ರಶ್ನೆಯಿಲ್ಲ. ನಿಯಮ ಮೀರಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದರು. ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತ ಪುರುಷೋತ್ತಮ, ಗದಗ ಜಿಲ್ಲಾ ಎಸ್ಪಿ ಶ್ರೀನಾಥ ಜೋಶಿ, ಆರ್‌ಟಿಒ ಅಧಿಕಾರಿ ಪ್ರಕಾಶ ಸಾಂಬ್ರಾಣಿ, ಡಿಸಿಪಿಗಳಾದ ಡಿ.ಎಲ್. ನಾಗರಾಜ, ಡಾ| ಶಿವಕುಮಾರ ಗುಣಾರೆ, ಸಾರಿಗೆ-ಪೊಲೀಸ್‌ ಇಲಾಖೆ ಅಧಿಕಾರಿಗಳು, ವಿವಿಧ ಕಾಲೇಜು ಪ್ರಾಚಾರ್ಯರು, ಆಟೋ ರಿಕ್ಷಾ, ಗೂಡ್ಸ್‌ ವಾಹನಗಳ ಚಾಲಕರು, ಮಾಲೀಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next