ತಿ.ನರಸೀಪುರ: ದಕ್ಷಿಣ ಪ್ರಯಾಗ ತ್ರಿವೇಣಿ ಸಂಗಮದ ತೀರದಲ್ಲಿರುವ ಪುರಾತನ ಪ್ರಸಿದ್ಧ ಅಗಸ್ತೇಶ್ವರಸ್ವಾಮಿ ಭಕ್ತರಿಗೆ ಕಳೆದೆರಡು ವರ್ಷಗಳಿಂದಲೂ ರಥೋತ್ಸವವನ್ನು ನೋಡುವ ಭಾಗ್ಯವಿಲ್ಲದಂತಾಗಿದೆ. ದೇವಾಲಯ ಜೀರ್ಣೋದ್ಧಾರ ಕಾಮಗಾರಿ ನೆನಗುದಿಗೆ ಬಿದ್ದಿದ್ದು, ಕುಂಠಿತಗೊಂಡ ಕಾಮಗಾರಿಯಿಂದಾಗಿ ಬರೋಬ್ಬರಿ ಎರಡು ಧಾರ್ಮಿಕ ಉತ್ಸವಗಳು ಭಕ್ತರ ಪಾಲಿಗೆ ಇಲ್ಲವಾಗಿದ್ದು, ಪುರಾತತ್ವ ಸರ್ವೇಕ್ಷಣಾಲಯ ಅಧಿಕಾರಿಗಳ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೇ ತಿರುಮಕೂಡಲಿನಲ್ಲಿ ಪ್ರತಿವರ್ಷವೂ ರಥೋತ್ಸವ ಧಾರ್ಮಿಕವಾಗಿ ನಡೆದುಕೊಂಡು ಬಂದಿದ್ದು, ಈ ದಿನ ರಥೋತ್ಸವವೂ ಕೂಡ ನಡೆಯಬೇಕಿತ್ತಾದರೂ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ರಥೋತ್ಸವ ಸಿದ್ಧತೆಗಳೇ ನಡೆದಿಲ್ಲ. ಗುಡಿ ಗೋಪುರದಲ್ಲಿಯೂ ಯಾವುದೇ ಪೂಜಾ ಕೈಂಕರ್ಯವನ್ನು ಜರುಗದಿರುವುದು ಅಗಸ್ತೇಶ್ವರಸ್ವಾಮಿಯ ಅಪಾರ ಭಕ್ತವೃಂದಕ್ಕೆ ಬೇಸರವನ್ನು ಉಂಟು ಮಾಡಿದೆ.
4 ಕೋಟಿ ರೂ. ಕಾಮಗಾರಿ: ಪಟ್ಟಣದ ಹಳೇ ತಿರುಮಕೂಡಲಿನಲ್ಲಿ ಕಾವೇರಿ, ಕಪಿಲಾ ಹಾಗೂ ಸ್ಫಟಿಕ ಸರೋವರ ಸಂಗಮಗೊಳ್ಳುವ ತ್ರಿವೇಣಿ ಸಂಗಮ ತೀರದಲ್ಲಿ ಅಗಸ್ತಾಮುನಿ ಮಹರ್ಷಿಯಿಂದ ಸ್ಥಾಪನೆಗೊಂಡ ಅಗಸ್ತೇಶ್ವರಸ್ವಾಮಿ ದೇವಾಲಯ ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಹಾಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ದೇವಾಲಯ ಜೀರ್ಣೋದ್ಧಾರಕ್ಕಾಗಿ 4 ಕೋಟಿ ರೂ. ಅನುದಾನ ನೀಡಿದ್ದರು. ಕಾಂಗ್ರೆಸ್ ಸರ್ಕಾರದ ಅವಧಿ ಮುಗಿದಿದೆಯಾದರೂ ಪುರಾತತ್ವ ಸರ್ವೇಕ್ಷಣಾಲಯ ಅಧಿಕಾರಿಗಳು ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ.
ಮಂದಗತಿಯ ಕಾಮಗಾರಿ: ಪುರಾತತ್ವ ಸರ್ವೇಕ್ಷಣಾಲಯ ಅಧಿಕಾರಿಗಳ ಬೇಜವಾಬ್ದಾರಿುಂದಾಗಿ ಪುರಾತನ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಅಗಸ್ತೇಶ್ವಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾಮಗಾರಿ ಮಂದಗತಿ ನಡೆಯುತ್ತಿದ್ದು, ಕೆಲಸ ಮಾಡಲಿಕ್ಕೆ ಆಧುನಿಕ ಯಂತ್ರಗಳನ್ನು ಬಳಸದೆ ಬೆರಳೆಣಿಕೆ ಮಂದಿಯಿಂದ ದುಡಿಮೆ ಮಾಡಿಸುತ್ತಿರುವ ಪರಿಣಾಮ ಜೀರ್ಣೋದ್ಧಾರ ಕಾಮಗಾರಿಯನ್ನು ಐದು ವರ್ಷಗಳಾದರೂ ಪೂರ್ಣಗೊಳ್ಳುವುದು ಅನುಮಾನವಾಗಿದೆ.
ಧಾರ್ಮಿಕ ಭಾವನಗಳೊಂದಿಗೆ ಚೆಲ್ಲಾಟ: ರಾಜ್ಯ ಸರ್ಕಾರದ ಕೋಟ್ಯಂತರ ರೂಪಾಯಿಗಳ ಅನುದಾನದಲ್ಲಿ ದೇವಾಲಯ ಜೀರ್ಣೋದ್ಧಾರ ನಡೆಯುತ್ತಿದ್ದರೂ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಇತ್ತ ಸುಳಿಯುತ್ತಿಲ್ಲ. ನಾಲ್ಕೈದು ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ರಥೋತ್ಸವವನ್ನು ಸ್ಥಗಿತಗೊಳಿಸಿ ಎರಡು ವರ್ಷಗಳಿಂದ ಭಕ್ತರ ಧಾರ್ಮಿಕ ಭಾವನೆಗಳೊಂದಿಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಭಕ್ತರಾದ ಪಿ.ಸ್ವಾಮಿನಾಥ್‌ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಳಂಬ ಸಲ್ಲ: ಪ್ರತಿ ವರ್ಷವೂ ರಥೋತ್ಸವ ದಿನದಂದು ಅಗಸ್ತೇಶ್ವರಸ್ವಾಮಿಗೆ ನಡೆಯಬೇಕಿದ್ದ ಪೂಜಾ ಕೈಂಕರ್ಯ ಅಭಿಷೇಕವನ್ನು ರಥೋತ್ಸವ ನಡೆಯದ್ದರಿಂದ ಈ ವರ್ಷ ಆಂಜನೇಯನಿಗೆ ಸಲ್ಲಿಸಬೇಕಾಗಿದೆ. ರಥೋತ್ಸವದ ನಿರೀಕ್ಷೆಯಿಂದ ಬಂದಿದ್ದ ಅದೇಷ್ಟೋ ಭಕ್ತರು ನಿರಾಶೆಯಿಂದ ಹಿಂತಿರುಗಿದ್ದಾರೆ. ಜೀರ್ಣೋದ್ಧಾರ ಕಾಮಗಾರಿ ಪೂರ್ಣಗೊಳಿಸಲು ತಡ ಮಾಡುತ್ತಿರುವುದು ಸರಿಯಲ್ಲ. ತ್ವರಿಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಎಂದಿನಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಬೇಕು ಎಂದು ಪಾರುಪತ್ತೇಗಾರ್ ಪವನ್ ಮತ್ತಿತರರು ಆಗ್ರಹಿಸಿದ್ದಾರೆ.
ದೇವರ ದರ್ಶನಕ್ಕೂ ಅವಕಾಶವಿಲ್ಲ: ಅಗಸ್ತೇಶ್ವರ ದೇವಾಲಯ ರಾಜಗೋಪುರ ಯಥಾಸ್ಥಿತಿಯಲ್ಲಿದ್ದು, ಗರ್ಭಗುಡಿ ಆಲಯ ಕಿತ್ತು ಹಾಕಿ, ಯೋಜನಾ ಪಟ್ಟಿಯಲ್ಲಿರುವಂತೆ ಒಂದೊಂದು ಕೆಲಸಕ್ಕೂ ದಿನಗಣನೆ ಲೆಕ್ಕದಲ್ಲಿ ವಾರವಾದರೂ ಮುಗಿಸದ ಪರಿಣಾಮ ಪ್ರಸಿದ್ಧ ದೇವಾಲಯವೊಂದು ಪಾಳು ಬಿದ್ದಂತೆ ಕಾಣುತ್ತಿದೆ. ಅಗಸ್ತೇಶ್ವರಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿ ಬಂದ್ ಮಾಡಿರುವುದರಿಂದ ಭಕ್ತರ ದರ್ಶನಕ್ಕೂ ದೇವರು ಇಲ್ಲದಂತಾಗಿದೆ. ನಿಷ್ಕ್ರಿಯಗೊಂಡ ಆಡಳಿತ ಯಂತ್ರದಿಂದಾಗಿ ಎರಡು ವರ್ಷವಾದರೂ ದೇವಾಲಯ ಜೀರ್ಣೋದ್ಧಾರ ಕಾಮಗಾರಿಗೆ ನೆನಗುದಿಗೆ ಬಿದ್ದಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕೆಂಬುದು ಭಕ್ತರ ಒತ್ತಾಯವಾಗಿದೆ.
* ಪ್ರಕಾಶ್