ಹೊಸದಿಲ್ಲಿ: ನೀವು ತಿನ್ನುವ, ಖರೀದಿಸಿದ ಆಹಾರದ ಮೇಲೆ ಸಂಶಯವಿದೆಯೇ? ಹಾಗಿದ್ದರೆ ತಡ ಬೇಡ. ಇನ್ನು ಅಧಿಕೃತ ಆಹಾರ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಖರ್ಚು ವೆಚ್ಚಗಳಿಲ್ಲದೇ ಆಹಾರವನ್ನು ಪರೀಕ್ಷಿಸಬಹುದು.
ಇಂಥದ್ದೊಂದು ಗ್ರಾಹಕ ಸ್ನೇಹಿ ತೀರ್ಮಾನವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಇದೀಗ ಜಾರಿಗೆ ತಂದಿದೆ. ಇದರೊಂದಿಗೆ ನಂಬಿಕಸ್ಥ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳು ಈ ವಿಚಾರದಲ್ಲಿ ಗ್ರಾಹಕರಿಗೆ ನೆರವು ನೀಡುವುದಕ್ಕೆ ಅವಕಾಶವನ್ನೂ ಮಾಡಿಕೊಟ್ಟಿದೆ.
ಕಾನೂನು ಪ್ರಕಾರ ಈವರೆಗೆ ಗ್ರಾಹಕರು ಪರೀಕ್ಷಿಸಲು ನೀಡಿದ ಆಹಾರ ದೋಷದಿಂದ ಕೂಡಿದ್ದರೆ ಮಾತ್ರ ಪ್ರಯೋಗಾಲಯಗಳು ಈ ಕುರಿತ ಶುಲ್ಕವನ್ನು ವಾಪಸ್ ಮಾಡುತ್ತಿದ್ದವು. ಆದರೆ ಇದರಲ್ಲಿ ಕೆಲವೊಂದು ಪ್ರಾಯೋಗಿಕ ಸಮಸ್ಯೆಗಳು ಇದ್ದುದರಿಂದ ಶುಲ್ಕವನ್ನು ವಾಪಸ್ ನೀಡುವ ಪದ್ಧತಿ ಕೈಬಿಡಲಾಗಿದೆ. ಆಹಾರ ಸರಿಯಾಗಿದೆ ಎಂದು ಲ್ಯಾಬ್‌ಗಳು ಹೇಳಿದರೂ ಶುಲ್ಕ ಪಡೆಯುವುದಿಲ್ಲ ಎಂದು ಎಫ್ಎಸ್‌ಎಸ್‌ಎಐ ಹೇಳಿದೆ.
ಆಹಾರ ಪರೀಕ್ಷೆಗೆ 80 ಲ್ಯಾಬ್‌ಗಳಿಗೆ ಎಫ್ಎಸ್‌ಎಸ್‌ಎಐ ಅವಕಾಶ ಮಾಡಿಕೊಟ್ಟಿದೆ. ಎಫ್ಎಸ್‌ಎಸ್‌ಎಐಯ ವಿನೂತನ ಕ್ರಮವನ್ನು ಆಹಾರ ಮತ್ತು ಪೋಷಕಾಂಶ ಸಂರಕ್ಷಣೆಗಾಗಿರುವ ಗ್ರಾಹಕ ಸಂಘಗಳು ದೇಶಾದ್ಯಂತ ನೆಟ್‌ವರ್ಕ್ ಸ್ಥಾಪನೆ ಮೂಲಕ ಬೆಂಬಲಿಸಲಿವೆ.
ಪೂರ್ವ ನಿರ್ಧರಿತ ಗ್ರಾಹಕ ಸಂಸ್ಥೆಗಳ ಮೂಲಕ ನಿರ್ದಿಷ್ಟ ಸಂಖ್ಯೆಯಲ್ಲಿ ಆಹಾರ ಪರೀಕ್ಷೆ ನಡೆಸಲಾಗುತ್ತದೆ. ಆರಂಭದಲ್ಲಿ ವಿಶ್ವಾಸಾರ್ಹ ಸಂಸ್ಥೆಗಳನ್ನು ಇದಕ್ಕಾಗಿ ತಯಾರು ಮಾಡಲಾಗುವುದು ಎಂದು ಎಫ್ಎಸ್‌ಎಸ್‌ಎಐ ಸಿಇಒ ಪವನ್ ಅಗರ್‌ವಾಲ್ ಹೇಳಿದ್ದಾರೆ. ಈ ಗ್ರಾಹಕ ಸ್ವಯಂ ಸೇವಾ ಸಂಸ್ಥೆಗಳು ನಿರ್ದಿಷ್ಟ ಲ್ಯಾಬ್‌ಗಳೊಂದಿಗೆ ಸಂಪರ್ಕ ಹೊಂದಿದ್ದು, ಆ ಲ್ಯಾಬ್‌ಗಳ ಮೂಲಕವೇ ಪರೀಕ್ಷೆ ನಡೆಸಲಾಗುತ್ತದೆ ಎಂದವರು ಹೇಳಿದ್ದಾರೆ.
ಬಿಸಿಯೂಟ ಪರೀಕ್ಷೆಗೂ ಕ್ರಮ
ಇದರೊಂದಿಗೆ ಶಾಲೆಗಳ ಬಿಸಿಯೂಟದ ಪರೀಕ್ಷೆಗೆ ಸ್ವಯಂ ಸೇವಾ ಸಂಸ್ಥೆಗಳಿಗೆ ಸ್ವಯಂ ಶೋಧನೆಯ 100 ಸಲಹಾ ಅಂಶಗಳುಳ್ಳ ಆಹಾರ ಸುರಕ್ಷತೆ ಮ್ಯಾಜಿಕ್ ಬಾಕ್ಸ್‌ಗಳನ್ನು ನೀಡಲಾಗುತ್ತದೆ. ಇದರೊಂದಿಗೆ ಗ್ರಾಹಕರ ದೂರುಗಳನ್ನು ಆಲಿಸಲು 200 ನೋಡಲ್ ಅಧಿಕಾರಿಗಳನ್ನು ನೇಮಿಸಲು ಎಫ್ಎಸ್‌ಎಸ್‌ಎಐ ನಿರ್ಧರಿಸಿದೆ. ಸ್ವಯಂ ಸೇವಾ ಸಂಸ್ಥೆಗಳನ್ನೂ ಗ್ರಾಹಕರ ದೂರುಗಳನ್ನು ಪರಿಹರಿಸಲು ತರಬೇತುಗೊಳಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.