ಹೊನ್ನಾವರ: ತಾಲೂಕಿನಲ್ಲಿ 97 ಹಳ್ಳಿಗಳಿವೆ. ಇವುಗಳಲ್ಲಿ 85 ಹಳ್ಳಿಗಳಿಗೆ ಶವಸಂಸ್ಕಾರಕ್ಕೆ ಅಧಿಕೃತ ಸ್ಮಶಾನವೇ ಇಲ್ಲ. ಭೂಮಿ ಇದ್ದ ಕುಟುಂಬಗಳು ಒಂದು ಮೂಲೆಯನ್ನು ಸ್ಮಶಾನಕ್ಕೆ ಬಳಸಿಕೊಂಡರೆ ಉಳಿದವರು ಅರಣ್ಯ ಇಲಾಖೆ ಭೂಮಿ ಬಳಸುತ್ತಿದ್ದಾರೆ. ಇತ್ತೀಚೆ ಅರಣ್ಯ ಇಲಾಖೆಯವರು ಆಕ್ಷೇಪ ಮಾಡುತ್ತಿದ್ದಾರೆ. ಮುಗ್ವಾ, ನಗರೆ, ಹೊಸಾಕುಳಿ ಗ್ರಾಮಗಳಲ್ಲಿ ಬೇರೆ ಗ್ರಾಮದವರು ತಮ್ಮ ಗ್ರಾಮದ ಬಳಿ ಅರಣ್ಯ ಇಲಾಖೆ ಜಾಗದಲ್ಲೂ ಶವ ಸಂಸ್ಕಾರಕ್ಕೆ ಅವಕಾಶ ಕೊಡುವುದಿಲ್ಲ. ಸಮುದಾಯಕ್ಕೆ ಉಪಯುಕ್ತವಾಗುವ, ಎಲ್ಲರಿಗೂ ಒಂದು ದಿನ ಅಗತ್ಯವಿರುವ ಸ್ಮಶಾನಕ್ಕಾಗಿ ಭೂಮಿ ಪಡೆಯಲು ಅರಣ್ಯ ಕಾನೂನಿನಲ್ಲಿ ಅವಕಾಶವಿದೆ. ಪಂಚಾಯತಗಳು ಸ್ಥಳ ಆಯ್ಕೆ ಮಾಡಿ, ಕಂದಾಯ ಇಲಾಖೆ ಶಿಫಾರಸ್ಸಿನೊಂದಿಗೆ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಯಾವ ಪಂಚಾಯತಗಳು ಈ ಕೆಲಸ ಮಾಡಲಿಲ್ಲ. ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ 11 ಸ್ಮಶಾನವಿದ್ದು ಒಂದೇ ಹಳ್ಳಿಯಲ್ಲಿ 2 ಸ್ಮಶಾನಗಳಿವೆ. ಆದ್ದರಿಂದ ಮುಂದೆ ಸಮಸ್ಯೆ ಆಗುವ ಸಾಧ್ಯತೆ ಇದ್ದು ಪಂಚಾಯತಗಳು ಈಗಲೇ ಕ್ರಮಕೈಗೊಳ್ಳಬೇಕಾಗಿದೆ.