ಸೇಡಂ: ಸಂತ, ಶರಣರ ಆರಾಧನೆಗೆ ಯಾವುದೇ ತರಹದ ಜಾತಿ ಸಂಕೋಲೆಗಳು ಇರುವುದಿಲ್ಲ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾ ಧಿಪತಿ ಪೂಜ್ಯ ಸುಭುದೇಂದ್ರತೀರ್ಥ ಶ್ರೀಪಾದಂಗಳವರು ನುಡಿದರು. ಪಟ್ಟಣದ ಕೋಡ್ಲಾ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಭೂಮಿ ಪೂಜೆ ನೆರವೇರಿಸಿದ ಅವರು, ನಂತರ ತಾಪಾಡಿಯಾ ಭವನದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ರಾಘವೇಂದ್ರ ಸ್ವಾಮೀಜಿ ಸರ್ವ ಜಾತಿ, ಜನಾಂಗದ ಭಕ್ತರಿಂದ ಪೂಜಿಸಲ್ಪಟ್ಟವರು. ಅವರ ನಿತ್ಯ ಆರಾಧನೆಯಿಂದ ಮನಶಾಂತಿ ದೊರೆಯುತ್ತದೆ. ಇಷ್ಟಾರ್ಥಗಳ ಈಡೇರಕರಾಗಿರುವ ರಾಯರನ್ನು ಸೇಡಂ ಪಟ್ಟಣಕ್ಕೆ ಬರಮಾಡಿಕೊಳ್ಳುವ ಜವಾಬ್ದಾರಿ ಪ್ರತಿ ಸಮಾಜದ ವ್ಯಕ್ತಿಗಳ ಮೇಲೂ ಇದೆ. ಎಲ್ಲರೂ ಒಟ್ಟಾಗಿ ರಾಯರ ಮಠ ನಿರ್ಮಿಸುವಂತಾಗಬೇಕು ಎಂದು ನುಡಿದರು.
ಮಾನವನು ಸಮಯದ ಸದುಪಯೋಗ ಮಾಡಿಕೊಳ್ಳದೇ ದಿನನಿತ್ಯ ನರಳುವಂತಾಗಿದೆ. ಸರಿಯಾದ ರೀತಿಯಲ್ಲಿ ಸಮಯ ಸದ್ಬಳಕೆಯಾದರೆ ಆರ್ಥಿಕ, ಸಾಮಾಜಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಾಧ್ಯ. ಭವ ರೋಗದಿಂದ ಮುಕ್ತಿ ಹೊಂದಲು ರಾಯರ ಆರಾಧನೆ ಅತಿಮುಖ್ಯ. ರಾಘವೇಂದ್ರ ಸ್ವಾಮೀಜಿ ನೆಲೆಸುವ ಸ್ಥಳ ಸರ್ವ ಸಂಪದ್ಭರಿತ ಆಗಿರುತ್ತದೆ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಮಾತನಾಡಿ, ಲಕ್ಷಾಂತರ ಜನರ ಆರಾಧ್ಯ ದೈವವಾಗಿರುವ ರಾಘವೇಂದ್ರ ಸ್ವಾಮೀಜಿ ಮಠ ಸೇಡಂನಲ್ಲಿ ನಿರ್ಮಾಣ ಆಗುತ್ತಿರುವುದು ಖುಷಿ ತಂದಿದೆ. ಕಾಮಗಾರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅಥವಾ ವೈಯಕ್ತಿಕವಾಗಿ ಸೇವೆ ಸಲ್ಲಿಸಲು ಸದಾ ಸಿದ್ಧರಿರುವುದಾಗಿ ಭರವಸೆ ನೀಡಿದರು.
ಶ್ರೀಮಠದ ಅರ್ಚಕ ವಾದಿರಾಜ ಆಚಾರ್ಯ, ಸುಭಾಶ ಆಚಾರ್ಯ, ಹಾಪಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ ಊಡಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರಾವ್ ಮಾಲಿಪಾಟೀಲ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಸುದರ್ಶನರೆಡ್ಡಿ ಪಾಟೀಲ, ಪ್ರಮುಖರಾದ ಶ್ರೀನಿವಾಸರಾವ್ ದೇಶಪಾಂಡೆ, ಡಾ| ಮುರಳಿಧರ ದೇಶಪಾಂಡೆ, ಪಾಡುರಂಗ ಜೋಶಿ, ಸಂತೋಷ ಮಹಾರಾಜ ಸಿಂಧನಮಡು, ರಮೇಶ ಮಾಲು, ಕೃಷ್ಣಾಚಾರ ನವಲಿ, ಮೋಹನಕುಮಾರ ರಂಜೋಳ, ಅಮಿತ ಜೋಶಿ, ರಾಜಗೋಪಾಲರೆಡ್ಡಿ, ವೆಂಕಟೇಶ ಕುಲಕರ್ಣಿ, ನರಸಿಂಹ ಕುಲಕರ್ಣಿ, ಕಾಶಿನಾಥ ಕುಲಕರ್ಣಿ, ಸಂತೋಷ ಕುಲಕರ್ಣಿ ಇನ್ನಿತರರು ವೇದಿಕೆಯಲ್ಲಿದ್ದರು. ಸರೋಜಾ ಕುಲಕರ್ಣಿ ವೈಯಕ್ತಿಕ ಗೀತೆ ಹಾಡಿದರು. ಶ್ರೀನಿವಾಸ, ಭೀಮಸೇನರಾವ್ ಕುಲಕರ್ಣಿ ಪ್ರಾರ್ಥಿಸಿದರು. ಸಂತೋಷ ಕುಲಕರ್ಣಿ ಸ್ವಾಗತಿಸಿದರು. ರಾಮಚಂದ್ರ ಜೋಶಿ, ಜಗನ್ನಾಥ ದೇಶಕ ನಿರೂಪಿಸಿ, ವಂದಿಸಿದರು.
ಪುರ ಪ್ರವೇಶಕ್ಕೆ ಭಕ್ತರ ಮಹಾಪೂರ
ಸೇಡಂ: ಪ್ರಥಮ ಬಾರಿಗೆ ಸೇಡಂ ಪುರಪ್ರವೇಶ ಮಾಡಿದ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿ ಪತಿ ಪೂಜ್ಯ ಸುಬುಧೇಂದ್ರತೀರ್ಥ ಶ್ರೀಪಾದಂಗಳವರನ್ನು ಭಕ್ತ ಸಮೂಹ ಅದ್ಧೂರಿಯಾಗಿ ಸ್ವಾಗತಿಸಿತು. ಶನಿವಾರ ಸಂಜೆ ಪುರಪ್ರವೇಶ ಮಾಡಿದ ಶ್ರೀಗಳನ್ನು ಶ್ರೀ ಹನುಮಾನ ದೇವಾಲಯದಿಂದ ಲಕ್ಷ್ಮೀನಾರಾಯಣ ಮಂದಿರದ ವರೆಗೆ ತೆರೆದ ರಥದಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಭಕ್ತರು ಪುಷ್ಪಾರ್ಚನೆ ಮಾಡಿದರು. ರವಿವಾರ ಬೆಳಗ್ಗೆ ಯಾದಗಿರಿ ರಸ್ತೆಯಲ್ಲಿರುವ ಭೂದಾನಿ ಪಾಡುರಂಗ ಜೋಶಿ ಅವರ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯದ ಭೂಮಿ ಪೂಜೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನಂತರ ಸಾಮೂಹಿಕ ಪಾದಪೂಜೆ ನೆರವೇರಿಸಿದ ನೂರಾರು ಭಕ್ತರು, ಸಂಸ್ಥಾನ ಮಹಾಪೂಜೆಯಿಂದ ಕಾರ್ಯಕ್ರಮ ಸಂಪನ್ನಗೊಳಿಸಿದರು.