ಬಳ್ಳಾರಿ: ಕೊರೊನ ವೈರಸ್ ಗೆ ಯಾರು ಭಯ ಪಡುವ ಅಗತ್ಯವಿಲ್ಲ. ಈ ಕುರಿತು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನ ವೈರಸ್ ಗೆ ಯಾರು ಭಯಪಡುವ ಅಗತ್ಯವಿಲ್ಲ. ಈ ಕುರಿತು ರಾಜ್ಯ ಸರ್ಕಾರ, ಆರೋಗ್ಯ ಇಲಾಖೆಯಿಂದ ಅಗತ್ಯ ಕೈಗೊಳ್ಳಲಾಗಿದೆ. ರಾಜ್ಯದ ಎಲ್ಲ ವಿಮಾನ ನಿಲ್ದಾಣದಲ್ಲಿ 72542 ಜನರಿಗೆ ಪರೀಕ್ಷೆ ಮಾಡಲಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 49,594 ಜನರಿಗೆ ತಪಾಸಣೆ ಮಾಡಲಾಗಿದೆ. ಕೇವಲ ಶುಕ್ರವಾರ ಒಂದೇ ದಿನ 3,025 ಜನರಿಗೆ ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದರು.
ಕೊರೊನ ವೈರಸ್ ಗೆ ಸಂಬಂಧಿಸಿದಂತೆ ಕಳೆದ ವಾರ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇನೆ. ಹೈದರಾಬಾದ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರಿಗೆ ಕೊರೊನ ಇತ್ತು ಎನ್ನುವ ಮಾಹಿತಿ ಇತ್ತು. ಅವರು ಓಡಾಡಿದ ಕಾರ್ ಡ್ರೈವರ್, ನಿವಾಸ ಎಲ್ಲೆಡೆಯೂ ಟೆಸ್ಟ್ ಮಾಡಲಾಗಿದೆ. ಬೆಂಗಳೂರಿನಲ್ಲಿ ಇದ್ದಾಗ ರೋಗ ಇರಲಿಲ್ಲ. ಹೈದರಾಬಾದ್ ಗೆ ಹೋದಾಗ ರೋಗ ಪತ್ತೆಯಾಗಿತ್ತು. ರೋಗಿ ಇರುವ ಅಪಾರ್ಟ್ ಮೆಂಟ್ ಪರಿಶೀಲನೆ ಮಾಡಲಾಗಿದೆ. ಈವರೆಗೂ ರಾಜ್ಯದಲ್ಲಿ ಒಂದು ಪಾಸಿಟಿವ್ ಇಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಈವರೆಗೆ ಒಟ್ಟಾರೆ 343 ಜನರ ರಕ್ತ ಪರೀಕ್ಷೆ ಮಾಡಲಾಗಿದೆ. ಐಸಲೇಷನ್ ವಾರ್ಡ್ ಮಾಡಿದ ಮೇಲೆ ಸಕಲ ವ್ಯವಸ್ಥೆ ಮಾಡಲಾಗಿದೆ. ಬಿಸಿಲು ಹೆಚ್ಚಿರುವ ಪ್ರದೇಶದಲ್ಲಿ ರೋಗ ಹರಡುವುದಿಲ್ಲ. ಈ ಹಿಂದೆ ಪೂನಾಗೆ ರಕ್ತ ಪರೀಕ್ಷೆ ಕಳುಹಿಸಲಾಗಿದೆ. ಇದೀಗ ಬೆಂಗಳೂರಿನಲ್ಲಿಯೂ ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೂ ಭಾರತದಲ್ಲಿ 31 ಕೇಸ್ ದಾಖಲಾಗಿದೆ. ಮೊಬೈಲ್ ಕಾಲರ್ ಟ್ಯೂನ್ ನಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಳ್ಳಾರಿಯಲ್ಲಿ ಮೂವರಿಗೆ ರಕ್ತ ಪರೀಕ್ಷೆ ಕಳುಹಿಸಲಾಗಿದ್ದು, ನೆಗೆಟಿವ್ ಎಂದು ಬಂದಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಬಸವರಾಜ ಪಾಟೀಲ್ ಯತ್ನಾಳ ಅವರ ಹೇಳಿಕೆ ಸಮರ್ಥನೆ ಮಾಡಿಕೊಳ್ಳುತ್ತೇನೆ ಎಂದ ಸಚಿವ ರಾಮುಲು, ರಾಮಾಯಣ, ಮಹಾಭಾರತ ಬರೆದಿರುವುದು ಶೂದ್ರರೆ. ಕೆಳ ಜಾತಿ ಜನರಿಗೆ ಗೌರವ ಕೊಡುವ ವ್ಯಕ್ತಿ ಯತ್ನಾಳ್. ಬಾಯಿಜಾರಿ ಮಾತನಾಡಿಬಹುದು. ಯತ್ನಾಳ ಬಗ್ಗೆ ನಮಗೂ ಗೌರವ ಇದೆ ಎಂದು ಸಮರ್ಥನೆ ಮಾಡಿಕೊಂಡರು.
ಮಾಜಿ ಸಂಸದ ಉಗ್ರಪ್ಪ ಬುದ್ಧಿಜೀವಿ ಅವರ ಬಗ್ಗೆ ಏನು ಹೇಳೋಕೆ ಆಗಲ್ಲ. ಇನ್ನು ಅರಣ್ಯ ಸಚಿವ ಆನಂದ ಸಿಂಗ್ ವಾಲ್ಮೀಕಿ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ಆನಂದ ಸಿಂಗ್ ಬಗ್ಗೆ ನನಗೆ ಸಂಪೂರ್ಣ ಭರವಸೆ ಇದೆ. ವಾಲ್ಮೀಕಿ ಬೇಟೆಗಾರನಾಗಿದ್ದ ಕೆಟ್ಟವನಲ್ಲ. ಇತಿಹಾಸವನ್ನು ತಿರುಚಿ ವಾಲ್ಮೀಕಿ ಮೊದಲು ಕೆಟವರಿದ್ದರು. ನಂತರ ಪರಿವರ್ತನೆಯಾದರು ಎನ್ನುವುದನ್ನು ನಾನು ಒಪ್ಪುವುದಿಲ್ಲ.ವಾಲ್ಮೀಕಿ ದೇವಮಾನವ. ಇಂದಿನ ಬರಹಗಾರರಿಗೆ ಇತಿಹಾಸ ತಿರುಚಿ ಬರೆಯುವ ಹವ್ಯಾಸವಿದೆ. ಹಳೇ ಪುಸ್ತಕಗಳನ್ನು ನೋಡಿದರೆ ವಾಲ್ಮೀಕಿ ಬಗ್ಗೆ ತಿಳಿಯುತ್ತದೆ ಎಂದು ವಿವರಿಸಿದರು.