Advertisement

ಬೆಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಇಲ್ಲ ಒಂದೂ ಬಸ್‌ ತಂಗುದಾಣ

12:17 PM Jun 23, 2017 | Team Udayavani |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ  ಜ್ಞಾನಭಾರತಿ ಆವರಣಕ್ಕೆ ಬಸ್‌ ಸೌಲಭ್ಯವಿದೆಯಾದರೂ, ಒಂದೇ ಒಂದು ತಂಗುದಾಣವೂ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು, ಉಪನ್ಯಾಸಕರು, ನಾಗರಿಕರಿಗೆ ಬಿಸಿಲು, ಮಳೆಯಲ್ಲೇ ಬಸ್‌ ಕಾಯಬೇಕಾದ ಸ್ಥಿತಿ ಇದೆ. 

Advertisement

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಹಾಗೂ ಸಿಬ್ಬಂದಿ ಅನುಕೂಲಕ್ಕಾಗಿ ಈ ಹಿಂದೆ ತನ್ನದೇ ಬಸ್‌ ಸೇವೆ ಒದಗಿಸಿತ್ತು. ಆರ್ಥಿಕ ಹೊರೆ ಹೆಚ್ಚಾದ್ದರಿಂದ ವರ್ಷಗಳ ಹಿಂದೆ ಬಸ್‌ ಸೇವೆಯನ್ನು ರದ್ದುಗೊಳಿಸಿದೆ. ಸದ್ಯ ಬಿಎಂಟಿಸಿ ಬಸ್‌ ಹೊರತುಪಡಿಸಿ ಬೇರ್ಯಾವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇಲ್ಲಿಲ್ಲ. 

ಜ್ಞಾನಭಾರತಿ ಆವರಣದಲ್ಲಿ ಎಲ್ಲ ವಿಭಾಗಗಳಿಂದ ಎರಡು ಸಾವಿರಕ್ಕೂ ಮಿಗಿಲಾದ ವಿದ್ಯಾರ್ಥಿಗಳಿದ್ದಾರೆ. ಹಾಸ್ಟೆಲ್‌ ವಿದ್ಯಾರ್ಥಿಗಳು ಹೊರತುಪಡಿಸಿ, ನಿತ್ಯ ಮನೆಯಿಂದಲೇ ಬರುವ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ಇರಬಹುದು. ಹಾಗೆಯೇ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಸಂಖ್ಯೆಯೂ ಹೆಚ್ಚಿದೆ. ದ್ವಿಚಕ್ರ ಹಾಗೂ ಕಾರುಗಳಲ್ಲಿ ಬರುವ ವಿದ್ಯಾರ್ಥಿ ಹಾಗೂ  ಸಿಬ್ಬಂದಿ ಸಂಖ್ಯೆ ಬಹಳ ಕಡಿಮೆ. 

ಜ್ಞಾನಭಾರತಿ ಆವರಣದಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಬಸ್‌ ನಿಲ್ದಾಣ ಮಾಡಿಲ್ಲ. ಹೀಗಾಗಿ ಎಲ್ಲರೂ ರಸ್ತೆ ಬದಿಯ ಬಯಲಲ್ಲೇ ನಿಂತು ಬಸ್‌ಗೆ ಕಾಯಬೇಕು. ಮಳೆ ಬಂದರೆ ಅಲ್ಲಿಯೇ ನೆನೆಯ ಬೇಕು. ಬಿಸಿಲಿಗೆ ಮರದ ನೆರಳೇ ಗತಿ.

ಎಲ್ಲೇಲ್ಲಿ ಬೇಕು ತಂಗುದಾಣ: ಜ್ಞಾನಭಾರತಿ ಆವರಣದ ವಿದ್ಯಾರ್ಥಿನಿಯರ ಹಾಸ್ಟೆಲ್‌, ಮುನೇಶ್ವರ ದೇವಸ್ಥಾನ, ಕೇಂದ್ರ ಕಚೇರಿ ಹಾಗೂ ಗಣಪತಿ ದೇವಸ್ಥಾನದಲ್ಲಿ ಬಸ್‌ ನಿಲ್ದಾಣ ಅಗತ್ಯವಾಗಿದೆ. 

Advertisement

ಹಣವಿಲ್ಲದಿದ್ದರೆ ಸರ್ಕಾಕ್ಕೆ ಮನವಿ ಮಾಡಲಿ: ಬಸ್‌ ನಿಲ್ದಾಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಈಗಾಗಲೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ವಿವಿ ಈ ಸಂಬಂಧ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸ್ಥಳೀಯ ಶಾಸಕರೊಂದಿಗಾದರೂ ಚರ್ಚಿಸಬೇಕಿತ್ತು. ಅದನ್ನೂ ಮಾಡಿಲ್ಲ. ಬಸ್‌ ನಿಲ್ದಾಣ ನಿರ್ಮಿಸಲು ವಿಶ್ವವಿದ್ಯಾಲಯದಲ್ಲಿ ಅನುದಾನವಿಲ್ಲದಿದ್ದರೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಬೇಕು. ಬಸ್‌ ನಿಲ್ದಾಣ ಇಲ್ಲದೇ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಬೋಧಕೇತರ ಸಿಬ್ಬಂದಿ ಸಂಘದ ಸದಸ್ಯರೊಬ್ಬರು ಹೇಳಿದರು.

ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರೊಂದಿಗೆ ಚರ್ಚೆ ಮಾಡಲಾಗುತ್ತದೆ. ಈ ಸಂಬಂಧ ಹಲವು ಮನವಿಗಳು ಬಂದಿದೆ. ಜ್ಞಾನಭಾರತಿಯಿಂದ ವಿವಿಧ ಭಾಗಕ್ಕೆ ಬಿಎಂಟಿಸಿ ಬಸ್‌ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಬೆಂವಿವಿ ಸಾರಿಗೆ ವಿಭಾಗದ ಅಧಿಕಾರಿಗಳ ಜತೆ ಮಾತುಕತೆ ನಡೆಸಿದೆ. 
-ಡಾ.ಎಂ.ಮುನಿರಾಜು, ಬೆಂವಿವಿ ಕುಲಪತಿ(ಹಂಗಾಮಿ)

Advertisement

Udayavani is now on Telegram. Click here to join our channel and stay updated with the latest news.

Next